ಕ್ಷುಲ್ಲಕ ಕಾರಣಕ್ಕೆ ಯುವಕನ ಕಗ್ಗೊಲೆ

ರೋಣ: ತಾಲೂಕಿನ ಯಾ.ಸ. ಹಡಗಲಿ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಯುವಕನೊಬ್ಬನನ್ನು ಕೊಡಲಿಯಿಂದ ಹೊಡೆದು ಕೊಲೆಗೈದಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಯಾ.ಸ. ಹಡಗಲಿ ಗ್ರಾಮದ ದಾವಲಸಾಬ್ ಹುಸೇನಸಾಬ್ ಬೆಳವಣಿಕಿ (19) ಕೊಲೆಯಾದವ.

ಸೋಮಲಿಂಗಪ್ಪ ಭೀಮಪ್ಪ ತಳವಾರ ಎಂಬಾತನೇ ಕೊಲೆಗೈದಿರುವ ಆರೋಪಿ. ಯಾ.ಸ. ಹಡಗಲಿ ಗ್ರಾಮದ ಆಸರೆ ಕಾಲನಿಯ ಕಳಸಪ್ಪ ಹನಮಪ್ಪ ಅಂಕಲಿ ಅವರ ಮನೆ ಮಾಳಿಗೆ ಮೇಲೆ ಮಲಗಿದ್ದ ದಾವಲಸಾಬ್​ನ ಕುತ್ತಿಗೆ ಹಾಗೂ ತಲೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ಕುರಿತು ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಚ್ಚಿನಿಂದ ಹೊಡೆದು ಪತ್ನಿಯ ಕೊಲೆ

ಗದಗ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪತಿಯೊಬ್ಬ ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ವಿನೋದಾ ಹನುಮಂತಪ್ಪ ಮೇವುಂಡಿ(25) ಮೃತ ದುರ್ದೈವಿ.

ಪತಿ ಹನುಮಂತಪ್ಪ ಸಿದ್ದಪ್ಪ ಮೇವುಂಡಿ ಕೊಲೆ ಮಾಡಿದ ವ್ಯಕ್ತಿ. ಪತಿ ಹನುಮಂತಪ್ಪ ಹಾಗೂ ಪತ್ನಿ ವಿನೋದಾ ಕಳೆದ 6 ವರ್ಷಗಳಿಂದ ದೂರವಾಗಿದ್ದರು. ಗಂಡನ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಹಾಗೂ ಮಗನ ಹೆಸರಿಗೆ ಬದಲಾಯಿಸಿಕೊಂಡಿದ್ದ ವಿನೋದಾ ಪತಿ ಹನುಮಂತಪ್ಪನನ್ನು ಮನೆಯಿಂದ ಹೊರಗೆ ಹಾಕಿದ್ದಳು. ನಂತರ ಪತಿ-ಪತ್ನಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ಜಗಳ ವಿಕೋಪಕ್ಕೆ ಹೋಗಿದ್ದರಿಂದ ಪತಿ ಹನುಮಂತಪ್ಪ ಪತ್ನಿ ವಿನೋದಾಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

11 ಜೂಜುಕೋರರ ಬಂಧನ

ಗದಗ: ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿರುವ ಗದಗ ಶಹರ ಠಾಣೆ ಪೊಲೀಸರು, 11 ಜನರನ್ನು ವಶಕ್ಕೆ ಪಡೆದಿರುವ ಘಟನೆ ನಗರದ ಹಳೇ ಜಿಲ್ಲಾಸ್ಪತ್ರೆ ರ್ಪಾಂಗ್ ಜಾಗದಲ್ಲಿ ಗುರುವಾರ ತಡರಾತ್ರಿ ಜರುಗಿದೆ.

11 ಜನರ ತಂಡವೊಂದು ಹಳೇ ಜಿಲ್ಲಾಸ್ಪತ್ರೆ ರ್ಪಾಂಗ್ ಜಾಗದಲ್ಲಿ ಜೂಜು ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗದಗ ಶಹರ ಠಾಣೆ ಸಿಪಿಐ ದೌಲತ್ ಎನ್.ಕೆ. ನೇತೃತ್ವದ ತಂಡ ವರನ್ನು ವಶಕ್ಕೆ ಪಡೆದು, ಅವರಿಂದ 11 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನಗರದ ವೀರೇಶ ಬಲವಂತಪ್ಪ ಕಡಿವಾಲ, ದಾವಲಸಾಬ ಅಬ್ದುಲ್​ಗಫಾರಸಾಬ್ ಗಡಾದ, ರವಿ ಕಂಠಿಸಾ ಸಿಂಗ್ರಿ, ಮಂಜುನಾಥ ಹನುಮಂತಪ್ಪ ಭಜಂತ್ರಿ, ಶ್ರೀನಿವಾಸ ಅರ್ಜುನಸಾ ನಾಕೋಡ, ಶಿವಕುಮಾರ ಪುಟ್ಟಪ್ಪ ಬಳ್ಳಾರಿ, ಪರಶುರಾಮ ಸಿದ್ದಪ್ಪ ಕುರ್ಲಗೇರಿ, ಮಂಜು ರಾಮಪ್ಪ ಜಂತ್ಲಿ, ಮಲ್ಲಿಕಾರ್ಜುನ ಶಂಕ್ರಪ್ಪ ಗಂಗನಹಳ್ಳಿ, ಮಹೇಶ ಸಿದ್ದಪ್ಪ ದಂಡಿನ ಹಾಗೂ ಬಾಳುಸಾ ಬಾಬಾಸಾ ಖಟವಟೆ ಎಂದು ಗುರುತಿಸಲಾಗಿದೆ. ಈ ಕುರಿತು ಗದಗ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.