ಕ್ಷಾರ ನೀರು ನಿಯಂತ್ರಣಕ್ಕೆ ಜಂತ್ರಡಿ

ಕುಮಟಾ: ತಾಲೂಕಿನ ನೂರಾರು ಎಕರೆ ಗಜನಿ ಭೂಮಿಯ ಕ್ಷಾರ ನೀರು ನಿಯಂತ್ರಣ ವ್ಯವಸ್ಥೆ (ಗಜನಿ ಬಂಡು ಹಾಗೂ ಜಂತ್ರಡಿ) ಮರುಸ್ಥಾಪನೆಯ ಕಾರ್ಯಾನುಷ್ಠಾನಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ. ಗಜನಿ ರೈತರ 2 ದಶಕಗಳ ಬೇಡಿಕೆ ಈಡೇರುವ ಕಾಲ ಕೂಡಿ ಬಂದಿದೆ.

ತಾಲೂಕಿನಲ್ಲಿ ಸುಮಾರು 4000 ಎಕರೆಗೂ ಹೆಚ್ಚು ಗಜನಿ ಗದ್ದೆಗಳಿವೆ. 40 ಕಿ.ಮೀ. ಗೂ ಹೆಚ್ಚು ಗಜನಿ ಬಂಡುಗಳು, ನೂರಾರು ಜಂತ್ರಡಿ ಸೇತುವೆ (ಸ್ಲೂಸ್​ಗೇಟ್)ಗಳು ಇವೆ.

ಇಲ್ಲಿನ ಕಗ್ಗದ ಅಕ್ಕಿ ವಿದೇಶಗಳಿಗೂ ರವಾನೆಯಾಗುತ್ತಿದ್ದ ಇತಿಹಾಸವಿದೆ. ‘ಕಗ್ಗ ಉಂಡವನಿಗೆ ರೋಗವಿಲ್ಲ’ ಎಂಬ ಗಾದೆ ಚಾಲ್ತಿಯಲ್ಲಿತ್ತು. ಗಜನಿಯನ್ನು ಆಶ್ರಯಿಸಿದ್ದ 6000ಕ್ಕೂ ಹೆಚ್ಚು ರೈತ ಕುಟುಂಬಗಳು ಸಹಕಾರಿ ಪದ್ಧತಿಯಲ್ಲಿ ಸುಮಾರು 40 ಸಾವಿರ ಕ್ವಿಂಟಾಲ್​ನಷ್ಟು ಕಗ್ಗವನ್ನೇ ಬೆಳೆಯುತ್ತಿದ್ದರು. ಗಜನಿ ಗದ್ದೆಗಳು 6 ತಿಂಗಳು ಕಗ್ಗದ ಬೇಸಾಯಕ್ಕೆ ಬಳಕೆಯಾದರೆ ಉಳಿದ 6 ತಿಂಗಳಲ್ಲಿ ವಿಫುಲ ಮೀನುಗಾರಿಕೆಯಿಂದ ರೈತರ ಬದುಕನ್ನು ಹಸನುಗೊಳಿಸಿತ್ತು.

ಹಿಂದೆ ಗಜನಿ ಬಂಡುಗಳು ಹಾಳಾದಾಗ ಇದೇ ಜಿಲ್ಲೆಯವರಾದ ದಿ. ರಾಮಕೃಷ್ಣ ಹೆಗಡೆ ಅವರು 1974ರಲ್ಲಿ ಮಾದನಗೇರಿ ಬಳಿಯಿಂದ ಕಾಗಾಲವರೆಗಿನ ಗಜನಿ ಕ್ಷೇತ್ರಕ್ಕೆ ಕಾಯಕಲ್ಪ ದೊರಕಿಸಿದ್ದರು.

ಆದರೆ, 1980ರಲ್ಲಿ ದೊಡ್ಡ ನೆರೆ ಬಂದು ಗಜನಿ ಬಂಡು, ಜಂತ್ರಡಿಗಳು ಶಿಥಿಲವಾಯಿತು. 1982ರಲ್ಲಿ ಗಜನಿಯಲ್ಲಿ ಕಗ್ಗ ಬಿಟ್ಟು ಸಿಗಡಿ ಕೃಷಿ ಮಾಡಿದ್ದೂ ವಿಫಲವಾಯಿತು. ಹಾಳಾದ ಜಂತ್ರಡಿಗಳ ಮೂಲಕ, ಉಪ್ಪು ನೀರು ನುಗ್ಗಿ ಸಮಸ್ಯೆಗಳ ಹೆಚ್ಚಾದವು, ಮಿಡ್ಲಗಜನಿಯ ಸುಮಾರು 2000 ಎಕರೆ ಪ್ರದೇಶ ಸಂಪೂರ್ಣ ಬರಡಾಯಿತು. ಅಲ್ಲಲ್ಲಿ ಮಾತ್ರ ಚೂರುಪಾರು ಭತ್ತ ಬೇಸಾಯ ಉಳಿದುಕೊಂಡಿತ್ತು. ಆದರೆ, ಮಾಣಿಕಟ್ಟಾ ಗಜನಿ ಹಾಗೂ ಸುತ್ತಮುತ್ತಲ ರೈತರು ಕಗ್ಗ ಬೇಸಾಯ ಬಿಡಲಿಲ್ಲ. ತಾವೇ ಬಂಡುಗಳ ದುರಸ್ತಿ ಮಾಡಿಕೊಂಡರು. ಆದರೆ, ವರ್ಷದಿಂದ ವರ್ಷಕ್ಕೆ ಕಗ್ಗ ಬೇಸಾಯ ಕಡಿಮೆಯಾಗುತ್ತಾ ಸಾಗಿತು. ಬಿತ್ತನೆಗೆ ಬೀಜವೂ ಸಿಗದ ಸ್ಥಿತಿ ಬಂದಿತ್ತು.

ಮಾಣಿಕಟ್ಟಾ ರೈತ ಸಂಘಟನೆ ಮುಂಚೂಣಿಯಲ್ಲಿ ನಿಂತು ಕಗ್ಗ ಹಾಗೂ ಗಜನಿ ಭೂಮಿ ಉಳಿವಿಗೆ ನಿರಂತರ ಪ್ರಯತ್ನ ನಡೆಸಿದರು. ಚೆನ್ನೈನ ಸ್ವಾಮಿನಾಥನ್ ಸಂಸ್ಥೆಯವರು 3 ವರ್ಷದ ಹಿಂದೆ ಇಲ್ಲಿ ಬಂದು ಅಧ್ಯಯನ, ಸಂಶೋಧನೆ ನಡೆಸಿದರಲ್ಲದೇ ಕಗ್ಗ ಬೀಜ ಬ್ಯಾಂಕ್​ಗಳನ್ನು ಸ್ಥಾಪಿಸಿದರು. ಮಾಣಿಕಟ್ಟಾ ರೈತ ಸಂಘದ ಬೇಡಿಕೆಗಳಿಗೆ ಬೆಂಬಲವಾಗಿ ನಿಂತರು. ಪರಿಣಾಮವಾಗಿ ರಾಜ್ಯ ಯೋಜನಾ ಅನುಷ್ಠಾನ ಘಟಕ, ಚಂಡಮಾರುತ ಅಪಾಯ ಉಪಶಮನ ಯೋಜನೆ, ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಜಂಟಿಯಾಗಿ ಯೋಜನೆ ರೂಪಿಸಿ ವಿಶ್ವ ಬ್ಯಾಂಕ್​ನ 30.27 ಕೋಟಿ ರೂ. ನೆರವಿನೊಂದಿಗೆ ಅನುಷ್ಠಾನಕ್ಕೆ ಮುಂದಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು ಮಳೆಗಾಲದ ಅಂತ್ಯಕ್ಕೆ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ಈ ಪೈಕಿ ಮಾಸೂರಿನಿಂದ ಮಾಣಿಕಟ್ಟಾ, ತುಂಬ್ಲೆಕಟ್ಟಾ, ಕಾಗಾಲ, ಮೊಸಳೆಸಾಲವರೆಗೆ 7.84 ಕಿ.ಮೀ. ಉದ್ದ ಬಂಡು ಹಾಗೂ 8 ಜಂತ್ರಡಿ ಸೇತುವೆ ಹೊಸದಾಗಿ ನಿರ್ವಣವಾಗಲಿದ್ದು, ಸುಮಾರು 400 ಎಕರೆ ಕ್ಷೇತ್ರದ ಕಗ್ಗದ ಬೇಸಾಯ ಹಾಗೂ ಕೋಟ್ಯಾಂತರ ಮೌಲ್ಯದ ಸಿಗಡಿ, ಮೀನು, ಏಡಿ ಕೃಷಿ ಮರುಸ್ಥಾಪನೆಯಾಗುವ ಸಾಧ್ಯತೆ ಇದೆ.

ನಮ್ಮ ಗಜನಿಯ ವಿಶೇಷತೆಗಳನ್ನು ಉಳಿಸಬೇಕು ಎನ್ನುವ ಹಂಬಲದೊಂದಿಗೆ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. 30 ಕೋಟಿ ರೂ.ಗೂ ಹೆಚ್ಚು ಮೊತ್ತದಲ್ಲಿ ಮಾಣಿಕಟ್ಟಾ ಗಜನಿ ಬಂಡು ಹಾಗೂ ಜಂತ್ರಡಿಗಳ ಮರುಸ್ಥಾಪನೆಯಿಂದ ನಮ್ಮ ಹೋರಾಟ ಫಲಪ್ರದವಾಗುತ್ತಿದೆ. ಕಗ್ಗ ಬೇಸಾಯಕ್ಕೆ ಸರ್ಕಾರ ಸಬ್ಸಿಡಿ ಕೊಡಬೇಕು.

| ಸಿ.ಆರ್. ನಾಯ್ಕ ಮಾಣಿಕಟ್ಟಾ ರೈತ ಸಂಘದ ಅಧ್ಯಕ್ಷ

Leave a Reply

Your email address will not be published. Required fields are marked *