ಕ್ಷಯ ರೋಗ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

ಕಾರವಾರ: ಗಾಳಿಯಿಂದಲೇ ಹರಡಬಹುದಾದ ಕ್ಷಯ ರೋಗವನ್ನು ಜಾಗೃತಿಯಿಂದ ತಡೆಯಬಹುದು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಸರ್ಕಾರಿ ಮೆಡಿಕಲ್ ಕಾಲೇಜ್​ನ ಕ್ಷಯ ರೋಗ ಚಿಕಿತ್ಸಾ ಕೇಂದ್ರದ ನೋಡಲ್ ಅಧಿಕಾರಿ ಡಾ.ಚೇತನ್ ಬಿ.ಪಿ.ಹೇಳಿದರು.

ವಿಶ್ವ ಕ್ಷಯ ರೋಗ ದಿನಾಚರಣೆಯ ಅಂಗವಾಗಿ ನಗರದ ಡಿಎಚ್​ಒ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷಯ ಬಹಳ ಹಳೆಯ ಕಾಯಿಲೆ. ಮೈಕೋಬ್ಯಾಕ್ಟೇರಿಯಂ ಎಂಬ ಸೂಕ್ಷ್ಮಾಣು ಜೀವಿಗಳಿಂದ ಬರುತ್ತದೆ. ಬ್ಯಾಕ್ಟೇರಿಯಾವನ್ನು ಕಂಡುಹಿಡಿದ ವಿಜ್ಞಾನಿ ಡಾ. ರಾಬರ್ಟ್ ಕಾಕ್ ರವರ 100 ವರ್ಷದ ಜನ್ಮ ದಿನದ ಅಂಗವಾಗಿ ವಿಶ್ವ ಕ್ಷಯ ರೋಗ ದಿನ ಆಚರಿಸಲಾಗುತ್ತಿದೆ. ಜನರಲ್ಲಿ ಜಾಗೃತಿ ಉಂಟಾದಲ್ಲಿ ನಿರಂತರ ಚಿಕಿತ್ಸೆ ಪಡೆದು ರೋಗ ಉಲ್ಬಣವಾಗಿ ಎಂಡಿಆರ್ ಆಗದಂತೆ ತಡೆಯಬಹುದು. ಸಾವು, ನೋವನ್ನು ತಡೆಗಟ್ಟಬಹುದು ಎಂದರು.

ಡಿಎಚ್​ಒ ಡಾ.ಜಿ.ಎನ್.ಅಶೋಕ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆರ್​ಸಿಎಚ್ ಅಧಿಕಾರಿ ಡಾ. ಶರದ ನಾಯಕ, ಕುಷ್ಠ ರೋಗ ನಿಯಂತ್ರಣ ಅಧಿಕಾರಿ ಡಾ. ಶಂಕರ ರಾವ್, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ರಮೇಶ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ.ಸೂರಜ ನಾಯಕ ವೇದಿಕೆಯಲ್ಲಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎಸ್.ಜಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಶ್ರೀ ಸಂಗಡಿಗರು ಪ್ರಾರ್ಥಿಸಿದರು.