More

  ಕ್ಷಯರೋಗ ಸಮೀಕ್ಷೆ ಚುರುಕುಗೊಳಿಸಿ

  ಚಿತ್ರದುರ್ಗ: ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಆ. 2ರವರೆಗೂ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಸಮೀಕ್ಷೆ, ಚಿಕಿತ್ಸಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಸೂಚಿಸಿದರು.

  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಸಮೀಕ್ಷಾ ಕಾರ್ಯದ ಸಭೆಯಲ್ಲಿ ಮಾತನಾಡಿದರು.ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು

  ಜಿಲ್ಲೆಯ ಎಲ್ಲ ವಸತಿನಿಲಯದ ವಿದ್ಯಾರ್ಥಿಗಳು, ವೃದ್ಧಾಶ್ರಮದ ವಾಸಿಗಳು, ಕಲ್ಲು, ಕ್ವಾರಿ ಗಣಿಗಾರಿಕೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ಸಣ್ಣ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು, ಅಂಗನವಾಡಿ ಮಕ್ಕಳ ಮಾಹಿತಿಯನ್ನು ಮೊದಲು ಸಂಗ್ರಹಿಸಿ. ವೇಳಾಪಟ್ಟಿ ತಯಾರಿಸಿ ಅದರಂತೆ ಶಿಬಿರ ಆಯೋಜಿಸಿ ಪತ್ತೆ ಕಾರ್ಯ ಕೈಗೊಳ್ಳಿ ಎಂದು ಸಲಹೆ ನೀಡಿದರು.

  ಸಮಾಜ ಕಲ್ಯಾಣ, ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಣ್ಣ ಕೈಗಾರಿಕೆ ಒಳಗೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಕೈಗೊಂಡು ಪ್ರಕರಣಗಳ ಪತ್ತೆ ಕಾರ್ಯ ಚುರುಕುಗೊಳಿಸಬೇಕು ಎಂದು ತಾಕೀತು ಮಾಡಿದರು.
  ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ ಮಾತನಾಡಿ, ಇಲಾಖೆ 2,652 ಸದಸ್ಯರನ್ನು ಒಳಗೊಂಡ 1,326 ತಂಡ ರಚಿಸಿದೆ. ಶಂಕೆ ಮತ್ತು ಪ್ರಕರಣ ಕಂಡು ಬಂದ ಸುತ್ತಮುತ್ತಲಿನ ಪ್ರದೇಶಗಳ ಮನೆ-ಮನೆಗೆ ಭೇಟಿ ನೀಡಿ, ತಪಾಸಣೆ ನಡೆಸುತ್ತಿದ್ದಾರೆ. ರೋಗ ಲಕ್ಷಣವಿರುವವರ ಕಫದ ಮಾದರಿ ಸಂಗ್ರಹಿಸಲಾಗುತ್ತಿದೆ ಎಂದರು.

  *3.31 ಲಕ್ಷ ಜನರ ತಪಾಸಣೆ ಗುರಿ: ಜಿಲ್ಲೆಯಲ್ಲಿ 18,46,861 ಜನಸಂಖ್ಯೆ ಇದ್ದು, ಹೆಚ್ಚು ಪ್ರಕರಣ ವರದಿಯಾದ ಕಡೆ ಆದ್ಯತೆ ನೀಡಿ, ಪತ್ತೆಗೆ ಒತ್ತು ನೀಡಲಾಗಿದೆ. ಈ ಬಾರಿ 3,31,550 ಜನರನ್ನು ತಪಾಸಣೆಗೆ ಒಳಪಡಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
  ಡಿಎಚ್‌ಒ ಡಾ.ಆರ್.ರಂಗನಾಥ್ ಮಾತನಾಡಿ, ಉನ್ನತೀಕರಣಗೊಂಡ ಜಿಲ್ಲೆಯ 29 ಪಿಎಚ್‌ಸಿಗಳಲ್ಲಿ ಶುಶ್ರೂಷಕಿಯರು, ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆ ಮಂಜೂರಾಗಿಲ್ಲ.

  See also  ಪ್ರತ್ಯೇಕ ಕಾಲೇಜು ಕಟ್ಟಡಕ್ಕೆ ಆಗ್ರಹ

  ಆದರೂ ಈ ಕೇಂದ್ರಗಳಲ್ಲಿ ನಿಯೋಜನೆ ಮೇರೆಗೆ ಪ್ರಯೋಗಾಲಯಕ್ಕೆ ಸಂಬಂಧಿಸಿದ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿ ಕೊರತೆ ಸಂಬಂಧ ಇಲಾಖೆ ಆಯುಕ್ತರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

  ಡಿಎಂಎಫ್ ಅನುದಾನದಡಿ ಹೊರಗುತ್ತಿಗೆ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಎನ್‌ಎಚ್‌ಎಂನಲ್ಲೂ ಹೊರಗುತ್ತಿಗೆಯಡಿ ನೇಮಿಸಿಕೊಳ್ಳಲು ಮನವಿ ಸಲ್ಲಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ರಾಂಜಿನಾಯಕ್, ಜಿಲ್ಲಾ ಕಾರ್ಮಿಕಾಧಿಕಾರಿ ಸಿ.ಎನ್.ಯಶೋಧರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts