ಕ್ಷಯರೋಗ ಪತ್ತೆಗೆ ಜನಜಾಗೃತಿ ಜಾಥಾ

ಶಿರಹಟ್ಟಿ: ತಾಲೂಕು ಆಸ್ಪತ್ರೆವತಿಯಿಂದ ಸಕ್ರಿಯ ಕ್ಷಯ ರೋಗ ಪತ್ತೆ ಹಚ್ಚುವ ಕುರಿತು ಗುರುವಾರ ಏರ್ಪಡಿಸಿದ್ದ ಜನಜಾಗೃತಿ ಜಾಥಾಕ್ಕೆ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಕ್ಷಯರೋಗದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಸತತ ಎರಡು ವಾರಗಳಿಗಿಂತ ಕೆಮ್ಮು, ಜ್ವರ, ಕಫದ ಜತೆಗೆ ರಕ್ತ ಬೀಳುವುದು ಅಥವಾ ಹಸಿವು ಆಗದಿರುವ ಲಕ್ಷಣ ಕಾಣಿಸಿದರೆ ಅಂಥ ವ್ಯಕ್ತಿಗಳು ತಕ್ಷಣ ಹತ್ತಿರದ ತಾಲೂಕು ಆಸ್ಪತ್ರೆಯಲ್ಲಿ ರೋಗ ಖಚಿತಪಡಿಸಿಕೊಂಡು ಉಚಿತವಾಗಿ ಚಿಕಿತ್ಸೆ ಪಡೆಯಬೇಕು’ ಎಂದರು.

ಕ್ಷಯ ರೋಗ ವಿಭಾಗದ ಶಿವಕುಮಾರ ನೂಗೂರ ಮಾತನಾಡಿ, ‘ಗ್ರಾಮೀಣ ಪ್ರದೇಶದ ಜನರಲ್ಲಿ ಕ್ಷಯ ರೋಗದ ತಿಳಿವಳಿಕೆ ಮೂಡಿಸಲು ಆಶಾ ಕಾರ್ಯಕರ್ತೆಯರಿಂದ ಜನಜಾಗೃತಿ ಜಾಥಾ ಏರ್ಪಡಿಸುವ ಜೊತೆಗೆ ಇಲಾಖೆ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ರೋಗ ಲಕ್ಷಣವುಳ್ಳ ಜನರಿಂದ ಸಂಗ್ರಹಿಸಿದ ಕಫದ ಮಾದರಿಯನ್ನು ಪರೀಕ್ಷಿಸಿದ ಬಳಿಕ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ’ ಎಂದರು.

ಪ್ರಾಚಾರ್ಯ ಎಂ.ಸಿ. ಭಜಂತ್ರಿ, ಉಪನ್ಯಾಸಕಿ ಸುಧಾ ಹುಚ್ಚಣ್ಣವರ, ಎಂ. ಹನುಮರಡ್ಡಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಎಚ್.ಎಚ್. ಹಿರಿಯ ಆರೋಗ್ಯ ಸಹಾಯಕ ಬಿ.ಎಸ್. ಹಿರೇಮಠ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *