ಕ್ಷಯರೋಗ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

ಶಿವಮೊಗ್ಗ: ಮನುಕುಲಕ್ಕೆ ಅಂಟಿದ ಮಹಾಮಾರಿ ಕ್ಷಯರೋಗದ ನಿಯಂತ್ರಣಕ್ಕೆ ದೇಶದ ಪ್ರತಿಯೊಬ್ಬ ನಾಗರಿಕರೂ ಸಂಕಲ್ಪ ಮಾಡಬೇಕು ಎಂದು ಡಿಸಿ ಕೆ.ಎ.ದಯಾನಂದ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನದ ಅಂಗವಾಗಿ ಡಿಸಿ ಕಚೇರಿ ಎದುರು ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷಯ ರೋಗದ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವ, ಅದನ್ನು ನಿಯಂತ್ರಿಸುವ ಕ್ರಮಗಳ ಹಾಗೂ ಬಾಧಿತರಿಗೆ ಚಿಕಿತ್ಸೆ ಮತ್ತು ಆರೈಕೆ ಮಾಡುವ ವಿಧಾನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 18,542 ಶಂಕಿತರಿಗೆ ಕಫ ಪರೀಕ್ಷೆ ಮಾಡಿಸಿ, 1,480 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಡಾಟ್ಸ್ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಹಾಗೆಯೆ 29 ಎಂಡಿಆರ್ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಆರಂಭಿಸಲಾಗಿದೆ ಎಂದು ಹೇಳಿದರು.

ಟಿಬಿ ನೋಟಿಫಿಕೇಷನ್ ಕಾರ್ಯಕ್ರಮದಡಿ ಜಿಲ್ಲೆಯ ಖಾಸಗಿ ಸಂಸ್ಥೆಗಳಿಂದ ಮಾಸಿಕ ವರದಿ ಪಡೆದುಕೊಳ್ಳುತ್ತಿದ್ದು ಕಳೆದ ವರ್ಷ 207 ರೋಗಿಗಳ ಮಾಹಿತಿ ಪಡೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು ಖಾಸಗಿ ಮೆಡಿಕಲ್ ಸ್ಟೋರ್​ಗಳು ಕೂಡ ಪ್ರತಿ ತಿಂಗಳು ವರದಿ ನೀಡುವುದನ್ನು ಕಡ್ಡಾಯಗೊಳಿಸಿದೆ ಎಂದರು.

ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಸಮುದಾಯಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಹೈರಿಸ್ಕ್ ಪ್ರದೇಶಗಳಲ್ಲಿ, ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ, ಕಾರ್ಖಾನೆಗಳಲ್ಲಿ, ಎಚ್​ಐವಿ ಬಾಧಿತರಲ್ಲಿ, ಮಧುಮೇಹಿಗಳಿರುವ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಇರುವ ಪ್ರದೇಶಗಳಲ್ಲಿ, ಕ್ಷಯರೋಗದ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲು ಸೂಚಿಸಲಾಗಿದೆ ಎಂದರು.

ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರಘುನಂದನ್, ಆರ್​ಸಿಎಚ್ ಅಧಿಕಾರಿ ಡಾ. ನಟರಾಜ್, ಡಿಟಿಒ ಡಾ. ನಟರಾಜ್, ಡಾ. ಶಂಕರಪ್ಪ, ಡಾ. ಪೈ, ಡಾ. ಕಿರಣ್, ಕುಮಾರಸ್ವಾಮಿ ಇದ್ದರು.

Leave a Reply

Your email address will not be published. Required fields are marked *