ಎನ್.ಆರ್.ಪುರ: ಎಲ್ಲ ರಾಜ್ಯ ಸರ್ಕಾರಗಳ ಸಹಯೋಗದಿಂದ ಕ್ಷಯಮುಕ್ತ ದೇಶವನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಕ್ಷಯಮುಕ್ತ ಸೈಟ್ ಕೋ-ಆರ್ಡಿನೇಟರ್ ಹೇಮಂತ್‌ಕುಮಾರ್ ತಿಳಿಸಿದರು.

ಕಡಹಿನಬೈಲು ಗ್ರಾಪಂನಲ್ಲಿ ಶುಕ್ರವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಕಡಹಿನಬೈಲು ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ವಾರದ ಕ್ಷಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ದೇಶದಲ್ಲಿ 2015ರಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದುವರೆಗೂ ಶೇ.40ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಆದ್ದರಿಂದ ಪ್ರಧಾನಮಂತ್ರಿ ಈ ಕಾರ್ಯಕ್ರಮವನ್ನು ಮುಂದುವರಿಸಿ ಶೇ.100ರಷ್ಟು ಸಾಧನೆ ಮಾಡುವ ಗುರಿ ಹೊಂದಿದ್ದಾರೆ ಎಂದರು.
ರಾಜ್ಯದಲ್ಲಿ ಎರಡು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಅರಣ್ಯ, ಗುಡ್ಡಗಾಡು ಪ್ರದೇಶವನ್ನು ಹೊಂದಿದ ಚಿಕ್ಕಮಗಳೂರು ಹಾಗೂ ಬಯಲುಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಆಯ್ಕೆ ಮಾಡಿ, ಕ್ಷಯ ತಪಾಸಣೆ ಮಾಡಲಾಗುತ್ತಿದೆ. ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಪಂ, ಎನ್.ಆರ್.ಪುರ ತಾಲೂಕಿನ ಕಡಹಿನಬೈಲು ಗ್ರಾಪಂ, ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಪಂ, ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಗ್ರಾಪಂ, ಕಡೂರಿನ ಜೋಡಿಲಿಂಗದಹಳ್ಳಿ ಗ್ರಾಪಂ ಹಾಗೂ ಚಿಕ್ಕಮಗಳೂರು ನಗರ ಸಭೆಯ ವಾರ್ಡ್, ಜಿಲ್ಲೆಯ 6 ಸ್ಥಳಗಳಲ್ಲಿ 1 ವಾರಕ್ಕೂ ಹೆಚ್ಚು ಕಾಲ ಕ್ಷಯ ತಪಾಸಣೆ ಹಾಗೂ ಗ್ರಾಮಸ್ಥರಿಗೆ ಉಚಿತವಾಗಿ ಬಿಪಿ, ಷುಗರ್, ಎಕ್ಸ್‌ರೇ, ಕೆಮ್ಮು, ಕಫ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ನಮ್ಮ ತಂಡದಲ್ಲಿ 21ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿದ್ದಾರೆ. ತಂಡದ ಮೇಲ್ವಿಚಾರಕರಾಗಿ ಮೂವರು ಹಿರಿಯ ಅಧಿಕಾರಿಗಳು ಇದ್ದಾರೆ. ಜನರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಪಂ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಈ ಹಿಂದೆ ಆಯೋಜಿಸಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿದೆ. ಜನರು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಸರ್ಕಾರದ ಉದ್ದೇಶ ಶ್ಲಾಘನೀಯ. ಈ ಆರೋಗ್ಯ ತಪಾಸಣಾ ಶಿಬಿರ ಒಂದು ವಾರ ಕಾಲ ನಡೆಯಲಿದ್ದು, ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು.
ಪಿಡಿಒ ವಿಂದ್ಯಾ ಮಾತನಾಡಿ, ಕಣ್ಣಿಗೆ ಕಾಣುವ ದೇವರು ಎಂದರೆ ವೈದ್ಯರು. ನಮಗೆ ಏನೇ ಅನಾರೋಗ್ಯವಿದ್ದರೂ ಗುಣಪಡಿಸುವವರು ವೈದ್ಯರೇ. ಇಂತಹ ಆರೋಗ್ಯ ತಪಾಸಣೆಗಳು ನಮಗೆ ಅರಿವಿಲ್ಲದೆ ಬರುವಂತಹ ಕಾಯಿಲೆಗಳಿಂದ ದೂರವಿರಬಹುದು ಎಂದರು.
ಗ್ರಾಪಂ ಸದಸ್ಯರಾದ ಶೈಲಾ ಮಹೇಶ್, ರವೀಂದ್ರ, ಪೂರ್ಣಿಮಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಬೇಸಿಲ್, ಶಿಕ್ಷಕ ಅರುಣ್‌ಕುಮಾರ್, ಆರೋಗ್ಯ ಶಿಬಿರದ ಅಧಿಕಾರಿಗಳಾದ ಜಮೀಲ್ ಅಹಮ್ಮದ್, ಮಹೇಶ್, ನಿಹಾರಿಕಾ, ಯಾಕೂಬ್ ಇತರರಿದ್ದರು.