ಕ್ವಾರ್ಟರ್ಸ್ ಹಂಚಿಕೆ ಪಾರದರ್ಶಕ

ಹುಬ್ಬಳ್ಳಿ: ಕಾರವಾರ ರಸ್ತೆಯ ಹಳೇ ಸಿಎಆರ್ ಮೈದಾನದಲ್ಲಿ ನಿರ್ವಣಗೊಂಡಿರುವ 144 ಪೊಲೀಸ್ ಕ್ವಾರ್ಟರ್ಸ್​ಗಳನ್ನು ಮಂಗಳವಾರ ಜ್ಯೇಷ್ಠತೆಯ ಆಧಾರದ ಮೇಲೆ ಅರ್ಹರಿಗೆ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಹಂಚಿಕೆ ಮಾಡಲಾಯಿತು.
ಪೊಲೀಸ್ ವಸತಿಗೃಹ ಹಂಚಿಕೆ ಮಾಡಲು ಕಮಿಷನರೇಟ್​ನ ಕೆಲ ಸಿಬ್ಬಂದಿ 20ರಿಂದ 30 ಸಾವಿರ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿ ಎದುರೇ ಅರ್ಹರ ಆಯ್ಕೆ ಮಾಡುವ ಮೂಲಕ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ದಿಟ್ಟ ಹೆಜ್ಜೆ ಇಟ್ಟರು.
ಡಿಸಿಪಿ ರೇಣುಕಾ ಸುಕುಮಾರ್ ಅರ್ಹರ ಪಟ್ಟಿ ಸಿದ್ಧಪಡಿಸಿದ್ದರು. 144 ಕ್ವಾರ್ಟರ್ಸ್​ಗೆ 192 ಅರ್ಜಿಗಳು ಬಂದಿದ್ದವು. ಜ್ಯೇಷ್ಠತೆ ಪ್ರಕಾರ ಪಟ್ಟಿ ಸಿದ್ಧಪಡಿಸಲಾಗಿತ್ತು. ಆ ಪ್ರಕಾರ ಅರ್ಹರನ್ನು ಒಬ್ಬೊಬ್ಬರಾಗಿ ಕರೆದು ಡಿಸಿಪಿಯವರು ಹಂಚಿಕೆ ಮಾಡಿದರು.
ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಮಾತನಾಡಿ, ಜ್ಯೇಷ್ಠತೆಯ ಆಧಾರದ ಮೇಲೆ ಅರ್ಹರ ಪಟ್ಟಿ ಸಿದ್ಧಪಡಿಸಲಾಗಿತ್ತು. ಆ ಪಟ್ಟಿಯನ್ನು ಸಿಬ್ಬಂದಿಗಾಗಿ ಪ್ರದರ್ಶಿಸಲಾಗಿದೆ. ಅದರಲ್ಲಿ ಗೊಂದಲವಿದ್ದರೆ ನೇರವಾಗಿ ನನಗೆ ತಿಳಿಸಿ. 1 ರೂ. ಖರ್ಚಿಲ್ಲದೆ ಸಿಬ್ಬಂದಿ ಎದುರಲ್ಲೇ ಅರ್ಹರಿಗೆ ಮಾತ್ರ ಕ್ವಾರ್ಟರ್ಸ್ ನೀಡಲಾಗಿದೆ. ಶೀಘ್ರದಲ್ಲೇ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗುವುದು. ಹಳೆಯ ಕ್ವಾರ್ಟರ್ಸ್ ಖಾಲಿಯಾದರೆ ಅವುಗಳನ್ನೂ ಇದೇ ಮಾದರಿಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಎಸಿಪಿಗಳಾದ ಎಚ್.ಕೆ. ಪಠಾಣ, ಎನ್.ಬಿ. ಸಕ್ರಿ, ಎಂ.ವಿ. ನಾಗನೂರ, ವಿವಿಧ ಠಾಣೆಗಳ ಇನ್ಸ್​ಪೆಕ್ಟರ್​ಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
144 ಕ್ವಾರ್ಟರ್ಸ್ ನಿರ್ಮಾಣ: ಒಟ್ಟು 8 ಬ್ಲಾಕ್​ಗಳಲ್ಲಿ 144 ಕ್ವಾರ್ಟರ್ಸ್ ನಿರ್ವಣಗೊಂಡಿವೆ. 6 ಕ್ವಾರ್ಟರ್ಸ್ ಅಧಿಕಾರಿಗಳಿಗೆ ಹಾಗೂ 138 ಕ್ವಾರ್ಟರ್ಸ್​ಗಳು ಸಿಬ್ಬಂದಿಗೆ ಮೀಸಲಿಡಲಾಗಿದೆ. 108 ಕ್ವಾರ್ಟರ್ಸ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕ್ವಾರ್ಟರ್ಸ್ ಕಾಮಗಾರಿ ಸದ್ಯದಲ್ಲೇ ಮುಕ್ತಾಯಗೊಳ್ಳಲಿವೆ. ಅವುಗಳಿಗೂ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು.