ಕ್ಲಬ್, ಸಂಘ-ಸಂಸ್ಥೆಗಳು ಸಮಾಜಮುಖಿ ಆಗಿರಲಿ

ಕಲಬುರಗಿ: ಲಯನ್ಸ್ ಕ್ಲಬ್ ಮತ್ತು ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿಕಟಪೂರ್ವ ನಿರ್ದೇಶಕ ಆರ್.ಸುನೀಲಕುಮಾರ ಸಲಹೆ ನೀಡಿದರು.
ಕೋಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಲಯನ್ಸ್ ಕ್ಲಬ್ ಆಫ್ ಗುಲ್ಬರ್ಗ ನೃಪತುಂಗದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯರು ಎಷ್ಟು ವರ್ಷ ಬದುಕಿದರು ಎಂಬುದು ಮುಖ್ಯವಲ್ಲ. ಜೀವತಾವಧಿಯಲ್ಲಿ ಅವರು ಮಾಡಿದ ಸಾಧನೆ ಏನು ಎಂಬುದು ಮಹತ್ವ ಪಡೆದುಕೊಳ್ಳುತ್ತದೆ. ಅದರಂತೆ ಸಂಘ ಸಂಸ್ಥೆಗಳು ಎಷ್ಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತವೆ ಎನ್ನುವ ಬದಲಿಗೆ ಮಾಡಿದ ಸಾಮಾಜಿಕ ಕಾರ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಲಯನ್ಸ್ ಕ್ಲಬ್ಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು. ಶಿಕ್ಷಣ, ಆರೋಗ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.
25 ವರ್ಷದ ಸವಿನೆನಪಿಗಾಗಿ 25 ಸಾಮಾಜಿಕ ಪರ ಯೋಜನೆ ಪ್ರಕಟಿಸಿ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದ ಅವರು, ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದರು.
ಬೆಳ್ಳಿ ಮಹೋತ್ಸವ ಸಮಿತಿ ಅಧ್ಯಕ್ಷ ವಿನಾಯಕ ಮುಕ್ಕ್ಕಾ ಪ್ರಾಸ್ತಾವಿಕ ಮಾತನಾಡಿ, ನಮ್ಮ ಕ್ಲಬ್ ಅನೇಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬಡ ಮಕ್ಕಳ ವಿದ್ಯಾರ್ಜನೆಗೆ ನೆರವು ನೀಡುತ್ತಿದೆ. ಉಚಿತ ನೋಟ್ಬುಕ್ ವಿತರಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿ ಹತ್ತಾರು ಜನಪರ ಕಾರ್ಯಗಳನ್ನು ಮಾಡುತ್ತ ಜನಮನ್ನಣೆ ಪಡೆದಿದೆ ಎಂದು ತಿಳಿಸಿದರು.
ಜಿಲ್ಲಾ ಗವರ್ನರ್ ಡಾ.ಬಂಡಾರು ಪ್ರಭಾಕರ್, ಉಪ ಗವರ್ನರ್ ರಮೇಶಚಂದ್ರ ಪಂಡಿತ್, ಮನೋಜಕುಮಾರ ಪುರೋಹಿತ, ಪ್ರಾದೇಶಿಕ ಚೇರ್ಮನ್ ಹನುಮಯ್ಯ ಬೇಲೂರ, ಗುರುಮೂತರ್ಿ ರಾಮಕೃಷ್ಣ ಎ.ಬಿ., ಸುನಂದಾ ಮುದ್ದಾ, ಎಂ.ಬಿ.ಶಾಸ್ತ್ರಿ, ವಿಜಯಲಕ್ಷ್ಮೀ ಕೋಸಗಿ, ವಿಜಯಲಕ್ಷ್ಮೀ ಮುಕ್ಕಾ, ಬಸವರಾಜ ಕಾಮರೆಡ್ಡಿ, ಸಂಭಾಜಿರಾವ ಟಿಳ್ಳೆ, ರವಿ ಮುಕ್ಕಾ, ಪಿ.ಎಚ್. ಕುಲಕರ್ಣಿ, ಶೈಲಜಾ ಕೊಪ್ಪರ, ಪಲ್ಲಾ ಲಕ್ಷ್ಮೀಕಾಂತರೆಡ್ಡಿ ಉಪಸ್ಥಿತರಿದ್ದರು.
ನಯನ್ ಮಳಖೇಡಕರ್ ಹಾಗೂ ಶರಣಮ್ಮ ಕೋಳಕೂರ ಪ್ರಾರ್ಥಿಸಿದರು. ಕಾಳಿಕಾ ಮತ್ತು ಪ್ರಿಯಾಂಕಾ ಭರತನಾಟ್ಯ ಪ್ರದರ್ಶಿಸಿದರು.

Leave a Reply

Your email address will not be published. Required fields are marked *