ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಬೆಳಗಾವಿ : ಶಿಕ್ಷಣ ಕ್ಷೇತ್ರದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಬೆಳಗಾವಿ ಸಾಧನೆಯ ಕಡೆ ದಾಪುಗಾಲು ಹಾಕುತ್ತಿರುವುದು ಹೆಮ್ಮೆ ಮೂಡಿಸುವಂಥದು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕೆಎಲ್ ಇ ಸಂಸ್ಥೆ ಸಂಯುಕ್ತವಾಗಿ ನಗರದ ಕೆಲ್ ಇ ಸಂಸ್ಥೆಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 2018-19ನೇ ಸಾಲಿನ 64ನೇ ರಾಷ್ಟ್ರ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಎರಡು ದಿನಗಳ ಬೆಲ್ಟ್ ಕುಸ್ತಿ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಬೆಳಗಾವಿ ಪ್ರೇರಣೆಯಾಗಿದೆ ಎಂದರು.

ಬೆಲ್ಟ್ ಕುಸ್ತಿ ಕ್ರೀಡಾಕೂಟದಲ್ಲಿ 9 ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ದೇಶದ ಕ್ರೀಡಾ ಸಾಧಕರು ಒಂದೆಡೆ ಸೇರಿ ಸ್ಪರ್ಧೆಯ ಜತೆಗೆ ಹೆಚ್ಚಿನ ಸಾಧನೆಗೆ ಸ್ಫೂರ್ತಿ ಪಡೆಯುವುದು ಒಳ್ಳೆಯ ಬೆಳವಣಿಗೆ. ಕ್ರೀಡಾ ಕ್ಷೇತ್ರದ ಸಾಧಕರಿಗೆ ಬೆಳಗಾವಿ ನೆಲ ಪ್ರೇರಣೆ ನೀಡುತ್ತಿರುವುದು ಸಂತಸದ ಸಂಗತಿ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾದ ಮಣ್ಣಿನ ಕುಸ್ತಿ ಕ್ರೀಡಾಕೂಟ ನಡೆಯುವುದಿಲ್ಲ. ಇದು ಬೇಸರದ ಸಂಗತಿ. ಮಣ್ಣಿನ ಕುಸ್ತಿ ಕ್ರೀಡೆಯ ಸೊಗಡನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಿ ಅದಕ್ಕೊಂದು ನೆಲೆ ಕಲ್ಪಿಸುವ ಪ್ರಯತ್ನ ಆಗಬೇಕಾಗಿದೆ. ಬೆಲ್ಟ್ ಕುಸ್ತಿಯನ್ನು ನಮ್ಮ ಸಾಂಪ್ರದಾಯಿಕ ಕುಸ್ತಿ ಎಂದು ತಿಳಿದಿದ್ದರೆ ಅದು ತಪ್ಪು ಎಂದರು.

ಕಳೆದ ಎರಡು ದಶಕಗಳ ಅವಧಿಯಲ್ಲಿ ಬೆಳಗಾವಿ ಕ್ರೀಡಾ ಕ್ಷೇತ್ರದಲ್ಲೂ ಒಳ್ಳೆಯ ಹೆಸರು ಪಡೆದುಕೊಂಡಿದೆ. ಬೆಳಗಾವಿ ಇನ್ನು ಮುಂದೆ ಕ್ರೀಡಾ ಕ್ಷೇತ್ರದ ಸ್ಫೂರ್ತಿ ಕೇಂದ್ರವಾಗಿ ರೂಪಗೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಗಣಾಚಾರಿ, ಲಿಂಗರಾಜು ಕಾಲೇಜು ಪ್ರಾಚಾರ್ಯ ಎಸ್.ಎಸ್.ಚೌಬಾರಿ, ಉಪ ಪ್ರಾಚಾರ್ಯೆ ಗಿರಿಜಾ ಹಿರೇಮಠ, ವಿವಿಧ ರಾಜ್ಯದ ಕ್ರೀಡಾಪಟಗಳು, ತರಬೇತಿದಾರರು ಮತ್ತಿತರರು ಉಪಸ್ಥಿತರಿದ್ದರು.

ಮೊದಲ ಬಾರಿ ಬೆಲ್ಟ್ ಕುಸ್ತಿ

ಬೆಳಗಾವಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಮೊದಲ ಬಾರಿಗೆ ಆಯೋಜಿಸಿರುವ 64ನೇ ರಾಷ್ಟ್ರ ಮಟ್ಟದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬೆಲ್ಟ್ ಕುಸ್ತಿ ಕ್ರೀಡಾಕೂಟದಲ್ಲಿ ತೆಲಂಗಾಣ,ನಾಗಾಲ್ಯಾಂಡ್, ಮೇಘಾಲಯ, ದೆಹಲಿ, ಪಂಜಾಬ್, ಮಹಾರಾಷ್ಟ್ರ, ಗೋವಾ ಒಳಗೊಂಡು ವಿವಿಧ ರಾಜ್ಯದಿಂದ 200ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.