ಕ್ರಿಕೆಟಿಗ ಜೇಕಬ್ ಮಾರ್ಟಿನ್ ಸಾವು ಬದುಕಿನ ಹೋರಾಟ

ವಡೋದರ: ರಸ್ತೆ ಅಪಘಾತದಿಂದಾಗಿ ತೀವ್ರ ಗಾಯಗೊಂಡಿರುವ ಭಾರತ ತಂಡದ ಮಾಜಿ ಆಟಗಾರ ಮತ್ತು ಬರೋಡ ತಂಡದ ಮಾಜಿ ನಾಯಕ ಜೇಕಬ್ ಮಾರ್ಟಿನ್, ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಚಿಕಿತ್ಸೆಗಾಗಿ ಅವರ ಕುಟುಂಬ ಸಹಾಯ ಹಸ್ತ ಬೇಡಿದೆ. ಡಿಸೆಂಬರ್ 28 ರಂದು ಮಾರ್ಟಿನ್ ಅಪಘಾತಕ್ಕೆ ತುತ್ತಾಗಿದ್ದು, ಅಂದಿನಿಂದಲೂ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಸಿಸಿಐ ಈಗಾಗಲೇ ಐದು ಲಕ್ಷ ರೂಪಾಯಿ ನೀಡಿದ್ದು, ಬರೋಡ ಕ್ರಿಕೆಟ್ ಸಂಸ್ಥೆ ಕೂಡ 3 ಲಕ್ಷ ರೂಪಾಯಿ ವಿತರಿಸಿದೆ. ಜತೆಗೆ ಇನ್ನಷ್ಟು ಹಣ ಹೊಂದಿಸಲು ಬಿಸಿಸಿಐ ಹಾಗೂ ಬಿಸಿಎ ಕಾರ್ಯದರ್ಶಿ ಸಂಜಯ್ ಪಟೇಲ್ ಪ್ರಯತ್ನ ಪಡುತ್ತಿದ್ದಾರೆ. ‘ರಸ್ತೆ ಅಪಘಾತದ ವಿಷಯ ತಿಳಿದ ಕೂಡಲೇ ಜೇಕಬ್ ಕುಟುಂಬದ ನೆರವಿಗೆ ಬಂದೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿರುವೆ’ ಎಂದು ಸಂಜಯ್ ಪಟೇಲ್ ತಿಳಿಸಿದ್ದಾರೆ. ಬಿಸಿಎ ಮಾಜಿ ಅಧ್ಯಕ್ಷ ಸಮರ್​ಜೀತ್ ಸಿನ್ಹಾ ಗಾಯಕ್ವಾಡ್ ಕೂಡ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ನೀಡಿದ್ದಾರೆ. ಇದುವರೆಗೂ ಜೇಕಬ್ ಚಿಕಿತ್ಸೆಗಾಗಿ 11 ಲಕ್ಷ ರೂಪಾಯಿ ವೆಚ್ಚವಾಗಿದೆ. 46 ವರ್ಷದ ಜೇಕಬ್ 1999ರ ಸೆಪ್ಟೆಂಬರ್​ನಿಂದ 2001ರ ಅಕ್ಟೋಬರ್​ವರೆಗೆ ಭಾರತದ ಪರ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು. ಜತೆಗೆ ಬರೋಡ, ರೈಲ್ವೇಸ್ ತಂಡಗಳ ಪರ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದ್ದರು. 2011ರಲ್ಲಿ ಮಾನವ ಕಳ್ಳ ಸಾಗಾಣೆ ಆರೋಪದಡಿಯಲ್ಲಿ ದೆಹಲಿ ಪೊಲೀಸರು ಜೇಕಬ್ ಅವರನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡು ಬರೋಡದ ವಿವಿಧ ವಯೋಮಿತಿ ತಂಡಗಳಿಗೆ ತರಬೇತಿ ನೀಡುತ್ತಿದ್ದರು. -ಏಜೆನ್ಸೀಸ್