ಕ್ಯಾಮರಾ, ಬಯೋಮೆಟ್ರಿಕ್ ಹಗರಣ!

ತುಮಕೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಅಳವಡಿಸಿರುವ ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂದು ಜಿಪಂ ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ, ಕಳೆದ ಸಭೆಯಲ್ಲಿ ರ್ಚಚಿಸಿದ್ದ ವಿಷಯಕ್ಕೆ ಸಂಬಂಧಿಸಿ ಅನುಪಾಲನಾ ವರದಿ ಒಪ್ಪಿಸುವಾಗ ಸಾಮಾನ್ಯ ಸಭೆಯಲ್ಲಿ ನಡಾವಳಿಗೆ ಬೆಲೆ ನೀಡದೆ ತನಿಖೆ ಮುಗಿದಿದೆ ಎಂದು ಹೇಳಿದ ಉಪಕಾರ್ಯದರ್ಶಿ ಮಾತಿಗೆ ಸದಸ್ಯರು ಸಿಟ್ಟಾದರು.

ಸ್ಥಾಯಿ ಸಮಿತಿ ಅನುಮೋದನೆ ಪಡೆಯದೆ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ದಾಖಲೆ ಸೃಷ್ಟಿಸಿ ಖಾಸಗಿ ಕಂಪನಿಯಿಂದ ಕ್ಯಾಮರಾ, ಬಯೋಮೆಟ್ರಿಕ್ ಖರೀದಿಸಲಾಗಿದೆ ಎಂದು ಸದಸ್ಯರಾದ ರಾಮಕೃಷ್ಣ, ಶಾಂತಲಾ, ಪಾಪಣ್ಣ, ಎಚ್.ಹುಚ್ಚಯ್ಯ ಮತ್ತಿತರರು ಆರೋಪಿಸಿದರು.

ಕಳೆದ ಸಭೆಯಲ್ಲಿ ಸ್ಥಳೀಯ ಜಿಪಂ ಸದಸ್ಯರನ್ನು ಒಳಗೊಂಡ ಸಮಿತಿ ಆಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು ಎಂದು ನಡಾವಳಿಯಾಗಿದ್ದರೂ, ಅಧಿಕಾರಿಗಳು ಸದಸ್ಯರಿಗೆ ಮಾಹಿತಿ ನೀಡದೆ ವರದಿ ಸಿದ್ಧಪಡಿಸಿದ್ದಾರೆ ಎಂದು ದೂರಿದರು.

ಜಿಪಂ ಅಧ್ಯಕ್ಷರು ಹಾಗೂ ಸಿಇಒ ಸಹಿ ಹಾಕಿದ್ದಾರೆ ಎಂದು ಡಿಎಚ್​ಒ ಹೇಳಿಕೆಗೆ ಆಶ್ಚರ್ಯ ವ್ಯಕ್ತಪಡಿಸಿದ ಸದಸ್ಯರು ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕುಡಿಯುವ ನೀರಿನ ಯೋಜನೆಯಲ್ಲಿಯೂ ಅಕ್ರಮ ನಡೆದಿದ್ದು, ಕಾಮಗಾರಿ ಟೆಂಡರ್ ನಡೆಸದೆ ತುಂಡು ಗುತ್ತಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಪ್ರತಿಭಟಿಸಿದರು.

ಈ ಬಗ್ಗೆ ಪ್ರತ್ಯೇಕವಾಗಿ ರ್ಚಚಿಸೋಣ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರವಾಸ ನಡೆಸಿ, ಕೊಳವೆಬಾವಿ ಪರಿಶೀಲಿಸುತ್ತೇನೆ ಎಂದು ಸಿಇಒ ಶುಭಾ ಭರವಸೆ ನೀಡಿ, ಸಮಾಧಾನಗೊಳಿಸಿದರು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ತಾಪಂ ಅಧ್ಯಕ್ಷರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಸಭೆ ಆರಂಭದಲ್ಲಿ ತಾಪಂ ಅಧ್ಯಕ್ಷರು ಸಭೆಗೆ ಅಡ್ಡಿಪಡಿಸಿದರು. ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಕಿತ್ತಾಟದ ಬಗ್ಗೆ ಸಭೆಯಲ್ಲಿ ಉತ್ತರಿಸಲಾಗದೆ ಅಧಿಕಾರಿಗಳು ಹೈರಾಣಾದರು. ಉಪಾಧ್ಯಕ್ಷೆ ಶಾರದಾ, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾದರು.