ಕ್ಯಾಮರಾವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವರ್ತಕ

ಬಣಕಲ್: ಕೊಟ್ಟಿಗೆಹಾರದ ಹೋಟೆಲ್​ವೊಂದರಲ್ಲಿ ಪ್ರವಾಸಿಗರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಕ್ಯಾಮರಾವನ್ನು ಹಿಂದಿರುಗಿಸುವ ಮೂಲಕ ಕೊಟ್ಟಿಗೆಹಾರದ ವರ್ತಕ ವಸಂತ್ ಶೆಟ್ಟಿ ಪ್ರಾಮಾಣಿಕತೆ ಮೆರೆದ್ದಾರೆ.

ಶಿವಮೊಗ್ಗದ ಸಂದೀಪ್ ಧರ್ಮಸ್ಥಳಕ್ಕೆ ಪ್ರವಾಸ ಹೋಗುವ ಮಾರ್ಗಮಧ್ಯೆ ಶನಿವಾರ ಸಂಜೆ ಕೊಟ್ಟಿಗೆಹಾರದ ನ್ಯೂ ಉಡುಪಿ ಕೃಷ್ಣಪ್ರಸಾದ್ ಹೋಟೆಲ್​ಗೆ ಬಂದು ಉಪಹಾರ ಸೇವಿಸಿ ಹಿಂದಿರುಗುವಾಗ ಕ್ಯಾಮರಾ ಮರೆತು ಹೋಗಿದ್ದರು. ಸ್ವಲ್ಪ ಸಮಯದ ನಂತರ ಹೋಟೆಲ್ ಮಾಲೀಕ ವಸಂತ ಶೆಟ್ಟಿ ಕ್ಯಾಮರಾ ಗಮನಿಸಿ ತೆಗೆದಿಟ್ಟಿದ್ದಾರೆ.

ಸಂದೀಪ್ ಅಂತರ್ಜಾಲದಲ್ಲಿ ನ್ಯೂ ಉಡುಪಿ ಕೃಷ್ಣಪ್ರಸಾದ್ ಹೋಟೆಲ್​ನ ಸಂಪರ್ಕ ಸಂಖ್ಯೆ ಹುಡುಕಿ ವಸಂತ್ ಶೆಟ್ಟಿ ಅವರಿಗೆ ಕರೆ ಮಾಡಿದಾಗ ಕ್ಯಾಮರಾವನ್ನು ಸುರಕ್ಷಿತವಾಗಿ ತೆಗೆದಿಟ್ಟಿರುವುದಾಗಿ ತಿಳಿಸಿದ್ದಾರೆ. ಸಂದೀಪ್ ಧರ್ಮಸ್ಥಳ ಪ್ರವಾಸ ಮುಗಿಸಿ ಭಾನುವಾರ ಕೊಟ್ಟಿಗೆಹಾರಕ್ಕೆ ಬಂದಾಗ ಹೋಟೆಲ್ ಮಾಲೀಕ ವಸಂತ್ ಶೆಟ್ಟಿ ಕ್ಯಾಮರಾ ಹಿಂದಿರುಗಿಸಿದರು.