ಕ್ಯಾಟ್‌ಪಿಶ್ ಹೊಂಡ ತೆರವು

ನಂದಗುಡಿ: ಹೋಬಳಿಯ ಎನ್. ಹೊಸಹಳ್ಳಿ, ಗೆದ್ದಲಹಳ್ಳಿಪುರ, ಬೈಲನರಸಾಪುರ, ಬಂಡಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಸಾಕುತ್ತಿದ್ದ ಕ್ಯಾಟ್‌ಫಿಶ್ ಹೊಂಡಗಳ ಮೇಲೆ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ದಾಳಿ ಮಾಡಿ 25ಕ್ಕೂ ಹೆಚ್ಚು ಹೊಂಡಗಳನ್ನು ತೆರವು ಮಾಡಲಾಯಿತು.

ಅಕ್ರಮ ಹೊಂಡದಲ್ಲಿ ಕ್ಯಾಟ್‌ಫಿಶ್ ಸಾಕಣೆ ಮಾಡುತ್ತಿರುವ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರೊಂದಿಗೆ ಕಂದಾಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ 12ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳನ್ನು ಹೊಂಡ ತೆರವಿಗೆ ಬಳಸಿಕೊಂಡು ಅಕ್ರಮ ಚಟುವಟಿಕೆ ನಡೆಸುತ್ತಿದ್ದವರಿಗೆ ಬಿಸಿ ಮುಟ್ಟಿಸಲಾಯಿತು.

ಪರಿಸರಕ್ಕೆ ಹಾನಿಯಾಗುವ ಜತೆಗೆ ಆಹಾರ ಸರಪಳಿ ಪ್ರಭೇದಕ್ಕೆ ನಷ್ಟ ಉಂಟು ಮಾಡುವ ಆಫ್ರಕನ್ ಮೂಲದ ಕ್ಯಾಟ್‌ಫಿಶ್‌ಗೆ ಸತ್ತ ಪ್ರಾಣಿ ಹಾಗೂ ಮಾಂಸದ ತ್ಯಾಜ್ಯವನ್ನು ಈ ಮೀನುಗಳಿಗೆ ಆಹಾರವಾಗಿ ಬಳಸಲಾಗುತ್ತಿದೆ. ಈ ಹಿಂದೆ ಹಲವು ಬಾರಿ ತೆರವುಗೊಳಿಸಿ ಎಚ್ಚರಿಕೆ ನೀಡಿದ್ದರೂ ಮತ್ತೆ ಇದನ್ನೆ ಪುನರಾವರ್ತನೆಯಾಗುತ್ತಿದೆ. ಈ ಬಾರಿ ಕಠಿಣ ನಿಲುವು ತಳೆದು ಮೀನು ಸಹಿತ ಹೊಂಡವನ್ನು ಸಂಪೂರ್ಣ ನಾಶಪಡಿಸಲಾಗಿದೆ ಎಂದು ಎಸ್‌ಪಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು.

ಅಕ್ರಮ ಸಾಕಣೆದಾರರು, ಇದಕ್ಕೆ ಜಮೀನು ನೀಡಿದವರ ಮಾಹಿತಿ ಪಡೆದು ದೂರು ದಾಖಲಿಸಲಾಗುವುದು. ಪುನಃ ಈ ಕೃತ್ಯದಲ್ಲಿ ಭಾಗಿಯಾದರೆ ರೌಡಿ ಶೀಟರ್ ಅನ್ವಯ ಕೇಸ್ ದಾಖಲಿಸಿ ಕಾನೂನು ವಶಕ್ಕೆ ನೀಡಲಾಗುವುದು ಎಂದು ಎಚ್ಚರಿಸಿದರು.

ಇಂತಹ ಮೀನು ಸೇವನೆಯಿಂದ ಮನುಷ್ಯನಿಗೆ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಇದರ ಸಾಕಣೆಯಿಂದ ಪರಿಸರಕ್ಕೆ ಹಾನಿಯಾಗುವುದಾಗಿ ಸಂಶೋಧನೆಯಿಂದ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಮೀನು ಸಾಕಣೆ ನಿಷೇಧಿಸಿ ಸಾಕಣಿಕೆದಾರರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ ಎಂದರು.

ಸಾರ್ವಜನಿಕರು ಇಂತಹ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಪೊಲೀಸರಿಗೆ, ಅಧಿಕಾರಿಗಳಿಗೆ ತಿಳಿಸಿ ಸಹಕಾರ ನೀಡಿದ್ದಲ್ಲಿ ಸಮಾಜಘಾತುಕ ಕೃತ್ಯಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯ ಎಂದು ತಿಳಿಸಿದರು.

ತಹಸೀಲ್ದಾರ್ ಕೆ.ರಮೇಶ್, ಡಿವೈಎಸ್ಪಿಗಳಾದ ನಿಂಗಪ್ಪ ಸಕ್ರಿ, ಸುಜೀತ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್. ಸುಬ್ರಮಣ್ಯ,ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜುನಾಥ್, ಶಿವರಾಜ್, ಪಿಎಸ್‌ಐಗಳಾದ ಲಕ್ಷ್ಮೀ ನಾರಾಯಣ್, ಗೋವಿಂದಪ್ಪ, ಅಶೋಕ್ ಇತರರು ಇದ್ದರು.

Leave a Reply

Your email address will not be published. Required fields are marked *