ಕ್ಯಾಟ್​ಫಿಷ್ ಸಾಕಣೆ ತಡೆಗಟ್ಟಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿಷೇಧಿತ ಆಫ್ರಿಕನ್ ಕ್ಯಾಟ್​ಫಿಷ್ ದಂಧೆ ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ಮತ್ತೊಮ್ಮೆ ಸದ್ದುಮಾಡಿತು. ನಿಷೇಧಿತ ಕ್ಯಾಟ್​ಫಿಷ್ ಸಾಕಣೆ ತಡೆಗಟ್ಟುವಲ್ಲಿ ಮೀನುಗಾರಿಗೆ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಸದಸ್ಯರು ದೂರಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ವಿಷಯ ಚರ್ಚೆಗೆ ಗ್ರಾಸವಾಯಿತು. ಆರೋಗ್ಯಕ್ಕೆ ಮಾರಕವಾಗಿರುವ ಕ್ಯಾಟ್​ಫಿಷ್ ಸಾಕಣೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಜಿಪಂ ಅಧ್ಯಕ್ಷೆ ಜಯಮ್ಮ ಸೂಚಿಸಿದರು.

ಕ್ಯಾಟ್​ಫಿಷ್ ಸಾಕಣೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಳೆದ ಸಭೆಯಲ್ಲಿ ಪ್ರಸ್ತಾಪಿಸಿದಂತೆ ಎಷ್ಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ನೀಡುವಂತೆ ಸೂಚಿಸಿದರು.

8 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೊಸಕೋಟೆ, ನೆಲಮಂಗಲ ತಾಲೂಕಿನ ಹಲವು ಹೋಬಳಿಗಳಲ್ಲಿ ಕ್ಯಾಷ್​ಫಿಷ್ ಹೊಂಡ ನಾಶಪಡಿಸಿರುವುದಾಗಿ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದರು.

ಹೊಸಕೋಟೆ ಹಾಗೂ ಚಿಂತಾಮಣಿ ಗಡಿ ಪ್ರದೇಶದಲ್ಲಿ ಹಾವಳಿ ಹೆಚ್ಚಾಗಿದೆ. ಮೀನುಗಳನ್ನು ನಾಶಪಡಿಸಿದರೂ ಕಳ್ಳಸಾಗಣೆ ಮೂಲಕ ಚಿಂತಾಮಣಿ ಕಡೆಯಿಂದ ಮೀನು ಮರಿಗಳನ್ನು ತರಲಾಗುತ್ತಿದೆ ಎಂದು ಬೇಸರಿಸಿದರು.

ಜಿಪಂ ಕಾರ್ಯದರ್ಶಿ ಕರಿಯಪ್ಪ, ಮುಖ್ಯಯೋಜನಾಧಿಕಾರಿ ವಿನೂತಾರಾಣಿ, ಮುಖ್ಯಲೆಕ್ಕಾಧಿಕಾರಿ ಟಿ.ಆರ್.ಶೋಭಾ, ಯೋಜನಾ ನಿರ್ದೇಶಕ ಕೆ.ಎಸ್.ಶಿವರುದ್ರಪ್ಪ ಇತರರು ಇದ್ದರು.

ಜಿಲ್ಲೆಯಲ್ಲಿ ಔಷಧಕೊರತೆ: ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇರುವ ಮಾಹಿತಿ ಇದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏನು ಕ್ರಮಕೈಗೊಂಡಿದೆ ಎಂದು ಸರ್ವ ಸದಸ್ಯರು ಮಾಹಿತಿ ಕೋರಿದರು. ನಾಯಿ ಕಚ್ಚಿದರೂ ಔಷಧ ದೊರಕದ ಪರಿಸ್ಥಿತಿ ಇದೆ ಎಂದು ದೇವನಹಳ್ಳಿ ತಾಪಂ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಆರೋಪಿಸಿದರು.

ಪ್ರಸ್ತುತ ಎಲ್ಲಿಯೂ ಔಷಧ ಸಮಸ್ಯೆಯಿಲ್ಲ. ಎಲ್ಲ ಕಡೆಗಳಲ್ಲೂ ದಾಸ್ತಾನು ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ತಿಳಿಸಿದರು.

ಕೆಲವು ಕಡೆಗಳಲ್ಲಿ ರಾತ್ರಿ ವೇಳೆ ವೈದ್ಯರೇ ಇರುವುದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಪರದಾಡುವ ಸ್ಥಿತಿ ಇದೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಅಧ್ಯಕ್ಷೆ ಸೂಚಿಸಿದರು.

ಟೆಂಡರ್ ಗದ್ದಲ: ಜಿಲ್ಲೆಯಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ವಹಣೆ ಸರಿಯಾಗಿಲ್ಲ. ಘಟಕ ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ದುರಸ್ತಿಯಾಗುತ್ತಿದೆ ಎಂದು ಸದಸ್ಯರು ಸಭೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಾಪಾಲಕ ಇಂಜಿನಿಯರ್, ರಾಜ್ಯದಲ್ಲಿ ಏಕರೂಪ ಟೆಂಡರ್ ಕರೆಯಲಾಗುತ್ತಿದ್ದು, ಗುತ್ತಿಗೆದಾರರೇ ಇನ್ನು ಮುಂದೆ ನಿರ್ವಹಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಇದು ಸರ್ಕಾರದ ಮಟ್ಟದಲ್ಲಿ ಅನುಮೋದನೆಯಾಗಿದ್ದು, ಇದರಲ್ಲಿ ಜಿಪಂ ಹಸ್ತ ಕ್ಷೇಪವಿರುವುದಿಲ್ಲ ಎಂದು ಸಿಇಒ ಆರ್. ಲತಾ ತಿಳಿಸಿದರು.

ಶುದ್ಧ ಕುಡಿವ ನೀರಿನ ಘಟಕಗಳಲ್ಲಿ ನೀರು ಶುದ್ಧೀಕರಣದ ಬಳಿಕ ಪ್ರತಿನಿತ್ಯ ಲಕ್ಷಾಂತರ ಲೀಟರ್ ವ್ಯಯವಾಗುತ್ತಿದೆ. ಅದನ್ನು ಗೃಹಬಳಕೆ ಸೇರಿ ಮತ್ತಿತರ ಕೆಲಸಗಳಿಗೆ ಬಳಸಿಕೊಳ್ಳಬಹುದು. ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಯಮ್ಮ ಸೂಚಿಸಿದರು.

ಉಪ ಆರೋಗ್ಯ ಕೇಂದ್ರ ಆರಂಭಕ್ಕೆ ಒತ್ತಾಯ: ಸಾವಿರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಜಿಲ್ಲಾಡಳಿತ ಭವನಕ್ಕೆ ಸಾರ್ವಜನಿಕರು ಭೇಟಿ ನೀಡುತ್ತಾರೆ. ಅಲ್ಲದೆ ನುರಾರು ಮಂದಿ ನೌಕರರು ಕಾರ್ಯನಿರ್ವಹಿಸುತ್ತಾರೆ. ಇಂಥ ಪ್ರದೇಶದಲ್ಲಿ ಸೂಕ್ತವಾದ ಉಪ ಆರೋಗ್ಯ ಕೇಂದ್ರ ಸ್ಥಾಫನೆಯಾಗುವುದು ಅಗತ್ಯವಿದೆ ಎಂದು ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಸಭೆ ಗಮನ ಸೆಳೆದರು. ಇದಕ್ಕೆ ಸಿಇಒ ಆರ್.ಲತಾ ಧ್ವನಿಗೂಡಿಸಿ, ಭವನದಲ್ಲಿ ಸೂಕ್ತ ಕೊಠಡಿ ದೊರತರೆ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಕರ್ನಾಟಕ ಪಬ್ಲಿಕ್ ಶಾಲೆ ಬಗ್ಗೆ ಆಕ್ಷೇಪ: ರಾಜ್ಯ ಸರ್ಕಾರದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪಟ್ಟಣ ಸಮೀಪದಲ್ಲೇ ಆರಂಭಿಸಲಾಗುತ್ತಿದ್ದು, ಗ್ರಾಮೀಣ ಭಾಗಗಳನ್ನು ಕಡೆಗಣಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಹೋಬಳಿಗಳಿಗೂ ಸಮನಾಗಿ ಹಂಚಿಕೆ ಮಾಡಬೇಕಿತ್ತು ಎಂದು ಅಧ್ಯಕ್ಷೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೃಷ್ಣಮೂರ್ತಿ, ಸರ್ಕಾರದಮಟ್ಟದಲ್ಲಿ ಇದು ನಿರ್ಧಾರವಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಆಂಗ್ಲಮಾಧ್ಯಮ ಶಾಲೆಗಳು ಹೆಚ್ಚಲಿವೆ ಎಂದರು.

ಕೃಷಿ ಹೊಂಡದಲ್ಲಿ ಸುರಕ್ಷತಾ ಕ್ರಮ ಅಗತ್ಯ: ರೈತರ ಹಿತದೃಷ್ಟಿಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ವಣವಾಗಿರುವ ಕೃಷಿಹೊಂಡಗಳಿಂದ ಹಲವು ವೇಳೆ ಪ್ರಾಣಕ್ಕೆ ಸಂಚಾಕಾರ ತರುವ ಪರಸ್ಥಿತಿ ಎದುರಾಗಿದೆ. ಆದ್ದರಿಂದ ಕೃಷಿ ಹೊಂಡಗಳಲ್ಲಿ ಸುರಕ್ಷತಾಕ್ರಮ ಅಳವಡಿಸುವಂತೆ ಸಿಇಒ ಲತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *