ಕ್ಯಾಟ್​ಫಿಶ್ ದಂಧೆಕೋರರಿಗೆ ನಡುಕ

ರಾಮನಗರ: ಪರಿಸರಕ್ಕೆ ಮಾರಕವಾದ ನಿಷೇಧಿತ ಕ್ಯಾಟ್​ಫಿಶ್ ಸಾಕಣೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ದಂಧೆಕೋರರಲ್ಲಿ ನಡುಕ ಹುಟ್ಟಿಸಿದೆ.

ಮೀನುಗಾರಿಕೆಯನ್ನೇ ಉದ್ಯಮವಾಗಿಸಿಕೊಂಡ ಕೆಲವರು ಊರಿನ ಹೊರವಲಯಗಳಲ್ಲಿ ಕದ್ದುಮುಚ್ಚಿ ಕ್ಯಾಟ್​ಫಿಶ್​ಗಳ ಸಾಕಣೆ ಮಾಡುತ್ತಿರುವ ಆರೋಪವಿದೆ. ಇದರಿಂದ ಮಾರುಕಟ್ಟೆ ಪ್ರವೇಶಿಸುವ ಕ್ಯಾಟ್​ಫಿಶ್​ಗಳ ಸೇವನೆಯಿಂದ ಕ್ಯಾನ್ಸರ್ ಸೇರಿ ವಿವಿಧ ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಅಧಿಕವಾಗಿದೆ. ಈ ಕ್ಯಾಟ್​ಫಿಶ್​ಗಳು ನೀರಿನಲ್ಲಿರುವ ಎಲ್ಲ ರೀತಿಯ ಮತ್ಸ್ಯ ಸಂತತಿಗಳನ್ನು ತಿಂದು ಜೀವಿಸುವ ಪ್ರವೃತ್ತಿ ಹೊಂದಿವೆ. ಇದರಿಂದ ಕ್ಯಾಟ್​ಫಿಶ್ ಇರುವ ಕೆರೆ ಅಥವಾ ಕೊಳ್ಳದಲ್ಲಿ ಇತರೆ ಯಾವುದೇ ಜಾತಿಯ ಮೀನುಗಳ ಸಂತತಿ ವೃದ್ಧಿಯಾಗುವುದಿಲ್ಲ.

ಕೋಳಿ ತ್ಯಾಜ್ಯ, ಸತ್ತ ಪ್ರಾಣಿಯ ಮಾಂಸ ತಿಂದು ಬದುಕುವ ಕ್ಯಾಟ್​ಫಿಶ್​ಗಳನ್ನು ಮಾಂಸಾಹಾರವಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರವಾಗಿದೆ. ಈ ಕ್ಯಾಟ್​ಫಿಶ್ ಹೊಂಡಗಳಿರುವ ಪ್ರದೇಶ ದುರ್ವಾಸನೆಯಿಂದ ಕೂಡಿರುವುದರಿಂದ ಸುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತದೆ. ಇದರಿಂದ ಆ ಭಾಗದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುತ್ತದೆ. ಅದನ್ನು ಮನಗಂಡ ಜಿಲ್ಲಾಡಳಿತ ದಂಧೆಕೋರರಿಗೆ ಬಿಸಿ ಮುಟ್ಟಿಸಲು ಕ್ರಮ ಕೈಗೊಂಡಿದೆ.

ತಹಸೀಲ್ದಾರ್ ರಾಜು ನೇತೃತ್ವದ ತಂಡದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಕಂಚುಗಾರನಹಳ್ಳಿಯ ಎಸ್​ಪಿಆರ್ ತಿಮ್ಮೇಗೌಡ ಎಂಬುವವರಿಗೆ ಸೇರಿದ ಜಮೀನಿನಲ್ಲಿರುವ ಕ್ಯಾಟ್​ಫಿಶ್ ಅಡ್ಡೆ ಮೇಲೆ ಶುಕ್ರವಾರ ದಾಳಿ ನಡೆಸಿ ಹೊಂಡ ನಾಶಪಡಿಸಿದ್ದಾರೆೆ. ದಂಧೆಕೋರರ ವಿರುದ್ಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂಥ ಅಕ್ರಮ ದಂಧೆಗಳು ಜಿಲ್ಲೆಯ ಯಾವುದೇ ಭಾಗದಲ್ಲಿ ನಡೆಯುತ್ತಿದ್ದರೂ ಅಲ್ಲಿನ ಗ್ರಾಮಸ್ಥರು ಆಯಾ ತಾಲೂಕಿನ ತಹಸೀಲ್ದಾರ್ ಅಥವಾ ಮೀನುಗಾರಿಕೆ ಇಲಾಖೆ, ಇಲ್ಲವೇ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬಹುದಾಗಿದೆ.

ಹದ್ದುಗಳಿಗೂ ಮಾರಕ: ಕ್ಯಾಟ್​ಫಿಶ್ ಹೊಂಡಗಳಲ್ಲಿ ಕೋಳಿ ತ್ಯಾಜ್ಯ ದೊರೆಯುವುದರಿಂದ ಆ ಭಾಗದಲ್ಲಿ ಹದ್ದುಗಳು ಜಾಸ್ತಿಯಾಗಿರುತ್ತವೆ. ಹಾಗಾಗಿ ದಂಧೆಕೋರರು ಮೀನುಗಳ ರಕ್ಷಣೆಗೆ ಹೊಂಡಗಳಿಗೆ ಬಲೆ ಹಾಕಿರುತ್ತಾರೆ. ಆಹಾರಕ್ಕಾಗಿ ಹೊಂಡಗಳಿಗೆ ಧಾವಿಸುವ ಹದ್ದುಗಳು ಬಲೆಗೆ ಸಿಕ್ಕಿ , ಸಾಯುತ್ತಿವೆ. ಇದರಿಂದ ಹದ್ದುಗಳ ಸಂತತಿ ಕ್ಷೀಣಿಸುವಂತಾಗಿದೆ. ಅಲ್ಲದೆ ರಾಮದೇವರ ಬೆಟ್ಟದಲ್ಲಿ ರಣಹದ್ದುಗಳ ಸಂರಕ್ಷಣಾ ವಲಯವಿರುವುದರಿಂದ ರಣ ಹದ್ದುಗಳು ಆಹಾರ ಹುಡುಕಿಕೊಂಡು ಕ್ಯಾಟ್​ಫಿಶ್​ಗಳ ಹೊಂಡಕ್ಕೆ ಬರುವ ಸಾಧ್ಯತೆ ಅಧಿಕವಾಗಿದೆ. ಇಂಥ ಅಡ್ಡೆಗಳಲ್ಲಿ ರಣ ಹದ್ದುಗಳು ಮೃತಪಟ್ಟರೆ ಕ್ಯಾಟ್​ಫಿಶ್ ದಂಧೆಕೋರರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಲು ಅವಕಾಶವಿದೆ. ಕಂಚುಗಾರನಹಳ್ಳಿಯಲ್ಲಿ ಕ್ಯಾಟ್​ಫಿಶ್ ಅಡ್ಡೆ ಮೇಲೆ ದಾಳಿ ನಡೆಸಿದಾಗ ಕೆಲ ಹದ್ದುಗಳು ಬಲೆಗೆ ಸಿಕ್ಕಿಬಿದ್ದಿದ್ದು ಕಂಡುಬಂತು.

ರಾಮನಗರ ತಾಲೂಕಿನ ಯಾವುದೇ ಭಾಗದಲ್ಲಿ ಅಕ್ರಮ ಕ್ಯಾಟ್​ಫಿಶ್ ದಂಧೆ ನಡೆಯುತ್ತಿರುವ ಮಾಹಿತಿ ಇದ್ದರೆ, ಗಮನಕ್ಕೆ ತನ್ನಿ. ಅಂಥ ಅಡ್ಡೆಯ ಮೇಲೆ ದಾಳಿ ನಡೆಸುತ್ತೇವೆ.

| ರಾಜು, ರಾಮನಗರ ತಹಸೀಲ್ದಾರ್

Leave a Reply

Your email address will not be published. Required fields are marked *