ಕೌರವನ ಹ್ಯಾಪಿ ನ್ಯೂ ಇಯರ್ ಸಂಭ್ರಮ

‘ಡಿಸೆಂಬರ್ 31ರಂದು ‘ಹ್ಯಾಪಿ ನ್ಯೂ ಇಯರ್’ ಟೈಟಲ್ ಟ್ರ್ಯಾಕ್ ಯೂ ಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದೆವು, ಅದು ಹಿಟ್ ಆಯಿತು. ಆಮೇಲೆ ಫೆ. 14ರಂದು ಪ್ರೇಮಿಗಳ ದಿನದ ಪ್ರಯುಕ್ತ ‘ಪ್ರೀತಿಯ ಹೆಸರೇ ನೀನು..’ ಎಂಬ ಗೀತೆ ಬಿಡುಗಡೆ ಮಾಡಿದ್ದೆವು. ಅದು ಕೂಡ ಜನಪ್ರಿಯವಾಯಿತು. ನಮ್ಮ ಚಿತ್ರದ ಈ ಎರಡೂ ಹಾಡನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಕ್ಯಾಲೆಂಡರ್ ಇಯರ್ ಪ್ರಕಾರ ಜ. 1ಕ್ಕೆ ಹೊಸ ವರ್ಷ ಇರಬಹುದು. ಆದರೆ ಭಾರತೀಯ ಸಂಸ್ಕೃತಿ ಪ್ರಕಾರ ಯುಗಾದಿಯೇ ನಮಗೆ ಹೊಸ ವರ್ಷ. ಹಾಗಾಗಿ ಯುಗಾದಿಗೆ ‘ಹ್ಯಾಪಿ ನ್ಯೂ ಇಯರ್’ ಬಿಡುಗಡೆ ಮಾಡುತ್ತೇವೆ..’

– ಹೀಗೆಂದು ಹೇಳಿದ್ದು ನಟ-ನಿರ್ವಪಕ ಬಿ.ಸಿ. ಪಾಟೀಲ್. ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಮೂಲಕ 7 ವರ್ಷದ ಬಳಿಕ ಮತ್ತೆ ನಿರ್ವಪಕರಾಗಿ ಗಾಂಧಿನಗರಕ್ಕೆ ಪ್ರವೇಶಿಸಿರುವ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನೂ ಮಾಡಿದ್ದಾರೆ. ಪುತ್ರಿ ಸೃಷ್ಟಿ ಪಾಟೀಲ್ ಅವರನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸುತ್ತಿರುವ ಅವರು, ಕಳೆದ ವಾರವಷ್ಟೇ ಚಿತ್ರದ ಆಡಿಯೊ ಲಾಂಚ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಕೌರವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ಈ ಹಿಂದೆ ‘ಕೌರವ’ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡು ಯಶಸ್ವಿಯಾಗಿದ್ದನ್ನು ನೆನಪಿಸಿಕೊಂಡರು. ‘ಕೌರವನ ನಿಜವಾದ ಕ್ರಿಯೇಟರ್ ಅವರು, ಕೌರವನಿಗೆ ಗೌರವ ತಂದುಕೊಟ್ಟಿದ್ದೇ ಅವರು. ನಾವು ಕೌರವ ಚಿತ್ರ ಮಾಡಲು ಹೊರಟಿದ್ದಾಗ ಸೋಲಿನ ಸರದಾರರು, ಕಿರೀಟವಿಲ್ಲದ ರಾಜರು ಎಂದು ಅನೇಕರು ವ್ಯಂಗ್ಯವಾಡಿದ್ದರು. ಆದರೆ ಕನ್ನಡದ ಜನತೆ ನಮಗೆ ಯಶಸ್ಸಿನ ಕಿರೀಟ ತೊಡಿಸಿದರು. ಈ ಚಿತ್ರಕ್ಕೂ ಅದೇ ರೀತಿ ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ’ ಎನ್ನುತ್ತ ಎದುರಿಗಿದ್ದ ಹಂಸಲೇಖ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಮ್ಮದೇ ಆದ ‘ಆರ್​ಡಿಎಕ್ಸ್’ ಮ್ಯೂಸಿಕ್ ಕಂಪನಿ ಮೂಲಕ ಇದರ ಸಂಗೀತ ಹೊರತಂದಿದ್ದು, ನಟ ಸುದೀಪ್ ಅದನ್ನು ಬಿಡುಗಡೆ ಮಾಡಿದರು. ರಘು ದೀಕ್ಷಿತ್ ತಮ್ಮ ಗಮನಕ್ಕೆ ಬಂದ ಹಾಗೂ ಅವರು ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರಕ್ಕೆ ಸಂಗೀತ ನಿರ್ದೇಶಕರಾದ ಬಗೆಯನ್ನೂ ಸುದೀಪ್ ವಿವರಿಸಿದರು. ‘ಮ್ಯೂಸಿಕ್​ನಲ್ಲಿ ಮ್ಯಾಜಿಕ್ ಇದ್ದಾಗ ಅದು ಕ್ಲಾಸಿಕ್ ಎನಿಸಿಕೊಳ್ಳುತ್ತದೆ. ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರ ಬಂದು ಏಳು ವರ್ಷ ಕಳೆದರೂ ಈಗಲೂ ಜನರು ಅದರ ಸಂಗೀತದ ಬಗ್ಗೆ ಮಾತನಾಡುತ್ತಿದ್ದಾರೆ. ಆಮೇಲೆ ಕೂಡ ನನ್ನ ಚಿತ್ರಕ್ಕೆ ರಘು ದೀಕ್ಷಿತ್ತೇ ಸಂಗೀತ ನೀಡಬೇಕು ಎಂದು ಹಲವು ಬಾರಿ ಬಯಸಿದ್ದೆ, ಕಾರಣಾಂತರಗಳಿಂದ ಆಗಿಲ್ಲ..’ ಎನ್ನುತ್ತ ಸುದೀಪ್ ಶುಭ ಹಾರೈಸಿದರು.

ನಿರ್ವಪಕರಾದ ಬಿ.ಸಿ.ಪಾಟೀಲ್-ವನಜಾ ಪಾಟೀಲ್ ದಂಪತಿ, ನಿರ್ದೇಶಕ ಪನ್ನಗ ಭರಣ, ನಾಯಕ ಧನಂಜಯ್, ನಾಯಕಿಯರಾದ ಶ್ರುತಿ ಹರಿಹರನ್, ಸೋನು ಗೌಡ, ಸೃಷ್ಟಿ ಪಾಟೀಲ್, ರಾಶ್ರೀ ಪೊನ್ನಪ್ಪ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮುಂತಾದವರು ಹಾಜರಿದ್ದರು. ನಿರ್ದೇಶಕ ಟಿ.ಎಸ್. ನಾಗಾಭರಣ, ಸಂಗೀತ ನಿರ್ದೇಶಕ ಹಂಸಲೇಖ, ಚಿತ್ರಸಾಹಿತಿ ಜಯಂತ ಕಾಯ್ಕಿಣಿ ಉಪಸ್ಥಿತರಿದ್ದು ಶುಭ ಹಾರೈಸಿದರು.

Leave a Reply

Your email address will not be published. Required fields are marked *