More

    ಕೌಜಲಗಿ ತಾಲೂಕು ರಚನೆಗೆ ಬೆಂಬಲ

    ಗೋಕಾಕ: ಕೌಜಲಗಿ ಹೊಸ ತಾಲೂಕು ರಚನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
    ತಾಲೂಕಿನ ಕೌಜಲಗಿ ಗ್ರಾಮದ ಬಲಭೀಮ ದೇವಸ್ಥಾನದ ಆವರಣದಲ್ಲಿ ತಾಲೂಕು ರಚನೆಗೆ ಸಂಬಂಧ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಚಾಲನಾ ಸಮಿತಿಯಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. 30 ವರ್ಷಗಳಿಂದ ತಾಲೂಕು ಸಂಬಂಧ ಹೋರಾಟ ಮಾಡಿಕೊಂಡು ಬರುತ್ತಿರುವ ಚಾಲನಾ ಸಮಿತಿಗೆ ಸಂಪೂರ್ಣ ಬೆಂಬಲ ಘೋಷಿಸಿದರು.
    ಕೌಜಲಗಿ ಹೊಸ ತಾಲೂಕು ಆಗಬೇಕೆಂಬುದು ಈ ಭಾಗದ ಬಹುವರ್ಷಗಳ ನಾಗರಿಕರ ಆಶಯವಾಗಿದೆ. ಹೊಸ ತಾಲೂಕು ರಚನೆ ಆಗುವುದರಿಂದ ಆಡಳಿತಾತ್ಮಕವಾಗಿ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವಾಗಲಿದೆ. ಈಗಾಗಲೇ ಗೋಕಾಕ ತಾಲೂಕಿನಿಂದ ಬೇರ್ಪಟ್ಟು ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡಲಾಗಿದೆ. ಇದರ ಜತೆಗೆ ಕೌಜಲಗಿಯನ್ನು ನೂತನ ತಾಲೂಕು ಕೇಂದ್ರವಾಗಲಿಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಎಲ್ಲರೂ ಸೇರಿ ಕೌಜಲಗಿಯನ್ನು ತಾಲೂಕಾಗಿ ರಚಿಸಲಿಕ್ಕೆ ಪ್ರಯತ್ನ ಮಾಡೋಣ. ನಾನು ಕೂಡ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

    ಬೆಳಗಾವಿ ಜಿಲ್ಲೆಯು ದೊಡ್ಡ ಜಿಲ್ಲೆಯಾಗಿದೆ ಹೊಸ ತಾಲೂಕುಗಳನ್ನು ರಚಿಸಿದರೆ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಬಹುವರ್ಷಗಳ ಬೇಡಿಕೆಯಾಗಿರುವ ಕೌಜಲಗಿಯನ್ನು ಸಹ ತಾಲೂಕನ್ನಾಗಿ ಮಾಡಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗವೊಂದನ್ನು ಕರೆದೊಯ್ಯಲಾಗುವುದು. ಕೌಜಲಗಿ ಗ್ರಾಮಸ್ಥರ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಕಾಮಗಾರಿ ಸಂಪೂರ್ಣ ಮುಗಿದಿದ್ದು. ಫೆಬ್ರವರಿ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು. ಮನ್ನಿಕೇರಿಯ ವಿಜಯಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಎಂ.ಆರ್. ಭೋವಿ, ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕೌಜಲಗಿ ತಾಲೂಕು ರಚನೆಯಾದರೆ ಸುತ್ತಮುತ್ತಲಿನ ನಾಗರಿಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ. ಈ ಹಿಂದಿನ ಎಲ್ಲ ಆಯೋಗಗಳು ಕೌಜಲಗಿ ತಾಲೂಕು ರಚನೆಗೆ ಸರ್ಕಾರಗಳಿಗೆ ಶಿಫಾರಸ್ಸು ಮಾಡಿವೆ. ಸುಮಾರು 3 ದಶಕಗಳಿಂದ ಸತತವಾಗಿ ನಾವುಗಳು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು. ಮುಖಂಡರಾದ ಬಸನಗೌಡ ಪಾಟೀಲ, ಗೋವಿಂದ ಕೊಪ್ಪದ, ರಾಮಣ್ಣ ಮಹಾರಡ್ಡಿ, ಪರಮೇಶ್ವರ ಹೊಸಮನಿ, ಶಿವಾನಂದ ಲೋಕನ್ನವರ, ಅಶೋಕ ನಾಯಿಕ, ವಿಠ್ಠಲ ಸವದತ್ತಿ, ಸುಭಾಷ ವಂಟಗೋಡಿ, ಕರೆಪ್ಪ ಬಿಸಗುಪ್ಪಿ, ರವಿ ಪರುಶೆಟ್ಟಿ, ಈರಣ್ಣ ಜಾಲಿಬೇರಿ, ಬಾಳಪ್ಪ ಗೌಡರ, ಸುಭಾಷ ಕೌಜಲಗಿ, ಮಹೇಶ ಪಟ್ಟಣಶೆಟ್ಟಿ, ಮಹಾಂತೇಶ ಶಿವನಮಾರಿ, ಮುದಕಪ್ಪ ಗೋಡಿ, ಅಡಿವೆಪ್ಪ ಅಳಗೋಡಿ, ಪ್ರಕಾಶ ಹೆಗಡೆ, ನೀಲಪ್ಪ ಕಿವಟಿ, ಹಾಸಿಂಸಾಬ ನಗಾರ್ಚಿ, ಪ್ರಕಾಶ ಕೋಟಿನತೋಟ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts