ಕೋಲ್ಕತ್ತಾ: ಟ್ರೖೆನಿ ವೈದ್ಯೆ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ, ಹತ್ಯೆ ಮಾಡಲಾದ ಸರ್ಕಾರಿ ಸ್ವಾಮ್ಯದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ವಿುಗಳು ಹಲವು ವೈದ್ಯಕೀಯ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದಾರೆ. ಬುಧವಾರ ತಡರಾತ್ರಿಯ ನಂತರ ಈ ಘಟನೆ ನಡೆದಿದೆ.
ವೈದ್ಯೆಯ ಮೇಲೆ ನಡೆದ ಅತ್ಯಾಚಾರ-ಕೊಲೆಯನ್ನು ವಿರೋಧಿಸಿ ನೂರಾರು ಮಹಿಳೆಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ಹಿಂಸಾಚಾರ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.
ಸುಮಾರು 40 ಜನರಿದ್ದ ಗುಂಪು ಪ್ರತಿಭಟನಾಕಾರ ವೇಷ ಧರಿಸಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿ, ದಾಂಧಲೆ ನಡೆಸಿದೆ. ಆಸ್ಪತ್ರೆಯ ಹಲವಾರು ಆಸ್ತಿಯನ್ನು ಧ್ವಂಸಗೊಳಿಸಿದೆ. ಪೊಲೀಸ್ ಸಿಬ್ಬಂದಿಯ ಮೇಲೆ ಕೂಡ ಕಲ್ಲು ತೂರಾಟ ನಡೆಸಲಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ವಾಹನ ಮತ್ತು ಸ್ಥಳದಲ್ಲಿದ್ದ ಕೆಲವು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಹಲವು ಪೊಲೀಸ್ ಅಧಿಕಾರಿಗಳಿಗೆ ಗಾಯವಾಗಿದೆ. ಸಾಕಷ್ಟು ಸಂಖ್ಯೆಯ ಸಿಬ್ಬಂದಿಯನ್ನು ಆಸ್ಪತ್ರೆಯ ಹೊರಗೆ ನಿಯೋಜಿಸಿದ್ದೇವೆ. ಪರಿಸ್ಥಿತಿಯನ್ನು ನಿಭಾಯಿಸಲು ಅವರಿಗೆ ಸೂಚನೆ ನೀಡಲಾಗಿದೆ ಎಂದು ಕೋಲ್ಕತ್ತಾ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈದ್ಯೆಯ ಹತ್ಯೆ ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ‘ರಿಕ್ಲೈಮ್ ದಿ ನೈಟ್’ ಎಂಬ ಅಭಿಯಾನ ನಡೆಯುತ್ತಿದೆ. ಇದರಿಂದ ಉತ್ತೇಜಿತವಾದ ಗುಂಪು ರಾತ್ರಿ 11.55ಕ್ಕೆ ಆಸ್ಪತ್ರೆಯ ಆವರ ಪ್ರವೇಶಿಸಿ ದಾಂಧಲೆ ಆರಂಭಿಸಿತು. ಸ್ವಾತಂತ್ರ್ಯ ದಿನಾಚರಣೆಯ ದಿನವೇ ದೊಡ್ಡ ಪ್ರಮಾಣದಲ್ಲಿ ಗಲಾಟೆ ಉಂಟು ಮಾಡುವುದು ಇವರ ಉದ್ದೇಶ ಇರಬಹುದು ಎಂದು ಶಂಕಿಸಲಾಗಿದೆ.
ರಾಜ್ಯಪಾಲರಿಂದ ಪರಿಶೀಲನೆ : ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಧರಣಿ ನಿರತ ವೈದ್ಯರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ನಡೆದ ವಿಧ್ವಂಸಕ ಕೃತ್ಯ ನಾಚಿಕೆಗೇಡಿನ ಸಂಗತಿಯಾಗಿದೆ. ರಕ್ತಪಾತವನ್ನು ತಕ್ಷಣವೇ ನಿಲ್ಲಿಸಬೇಕು. ನಾನು ನಿಮ್ಮೊಂದಿಗಿದ್ದೇನೆ. ಇದನ್ನು ಪರಿಹರಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ನಾನು ನಿಮಗೆ ನ್ಯಾಯದ ಭರವಸೆ ನೀಡುತ್ತೇನೆ ಎಂದು ಅವರು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
9 ಮಂದಿ ಬಂಧನ: ಆಸ್ಪತ್ರೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು 9 ಮಂದಿಯನ್ನು ಬಂಧನ ಮಾಡಿದ್ದಾರೆ. ಆದರೆ ಇವರು ಗುರುತುಗಳನ್ನು ಬಹಿರಂಗ ಮಾಡಿಲ್ಲ. ಮತ್ತೊಂದೆಡೆ ದಾಳಿಕೋರರ ಚಿತ್ರಗಳನ್ನು ಆನ್ಲೈನ್ ಮೂಲಕ ಬಿಡುಗಡೆ ಮಾಡಲಾಗಿದ್ದು, ಅವರ ಬಗ್ಗೆ ವಿವರ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಪ್ರಕಟಿಸಲಾದ ಚಿತ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಕೆಲ ವೈದ್ಯರ ಫೋಟೊಗಳೂ ಇವೆ. ಹೀಗಾಗಿ ನಿಜವಾದ ಆರೋಪಿಗಳಿಗೆ ಕೆಲವರು ರಕ್ಷಣೆ ನೀಡುತ್ತಿರುವ ಸಾಧ್ಯತೆ ಇದೆ ಎಂದು ಕೆಲ ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ಸಿಎಂ ಮಮತಾ ವಿರುದ್ಧ ಬಿಜೆಪಿ ವಾಗ್ದಾಳಿ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಳುಹಿಸಿದ ಟಿಎಂಸಿ ಗೂಂಡಾಗಳು ಈ ವಿಧ್ವಂಸಕ ಕೃತ್ಯವನ್ನು ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಗೂಂಡಾಗಳನ್ನು ಪ್ರತಿಭಟನಾ ರ್ಯಾಲಿಗೆ ಕಳುಹಿಸಿದ್ದಾರೆ. ತಾವು ಇಡೀ ವಿಶ್ವದಲ್ಲೇ ಅತ್ಯಂತ ಚಾಣಾಕ್ಷ ವ್ಯಕ್ತಿ ಎಂದು ಅವರು ಭಾವಿಸಿದ್ದಾರೆ. ಅವರ ಗೂಂಡಾಗಳ ಕುತಂತ್ರವನ್ನು ಜನರು ಕಂಡುಹಿಡಿದಿದ್ದಾರೆ. ಪ್ರತಿಭಟನಾಕಾರರಂತೆ ಜನಸಂದಣಿಯೊಂದಿಗೆ ಬೆರೆತು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ. ದುಷ್ಕರ್ವಿುಗಳಿಗೆ ಪೊಲೀಸರು ಸಹಕಾರ ನೀಡಿದ್ದಾರೆ. ದಾಂಧಲೆ ಬಳಿಕ ತಪ್ಪಿಸಿಕೊಳ್ಳಲು ನೆರವು ನೀಡಿದ್ದಾರೆ ಎಂದು ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಸಾಕ್ಷ ನಾಶ ಮಾಡಲು ಯತ್ನ?: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಈ ಪ್ರಕರಣದ ಸಾಕ್ಷಗಳನ್ನು ನಾಶಪಡಿಸುವ ಉದ್ದೇಶದಿಂದ ಆಸ್ಪತ್ರೆ ಮೇಲೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿವೆ. ಅಪರಾಧ ನಡೆದ ಸ್ಥಳ (ಕ್ರೖೆಂ ಸೀನ್)ನಲ್ಲಿರುವ ಮಹತ್ವದ ಸಾಕ್ಷಗಳನ್ನು ನಾಶ ಪಡೆಸುವುದು ಇವರ ಪ್ರಮುಖ ಟಾರ್ಗೆಟ್ ಆಗಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಯಾವುದೇ ಸಾಕ್ಷ ನಾಶ ಆಗಿಲ್ಲ. ಅಪರಾಧ ನಡೆದ ಸ್ಥಳಕ್ಕೆ ಸಾಕಷ್ಟು ಭದ್ರತೆ ನೀಡಲಾಗಿದೆ ಎಂದಿದ್ದಾರೆ. ಈ ನಡುವೆ ಸಂತ್ರಸ್ತೆಯ ಮನೆಗೆ ಭೇಟಿ ನೀಡಿರುವ ಸಿಬಿಐ ತಂಡ ಅವರ ಮನೆಯವರ ಹೇಳಿಕೆ ದಾಖಲು ಮಾಡಿಕೊಂಡಿದೆ.