ಕೊಪ್ಪ: ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಡ್ಲು ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಕೋಲಾಟದ ಮೂಲಕ ಬಲಿಂಧ್ರನನ್ನು 5 ದಿನಗಳ ಪರ್ಯಂತ ವಿಶೇಷವಾಗಿ ಆರಾಧಿಸಲಾಯಿತು.
ದೀಪಾವಳಿ ಅಮಾವಾಸ್ಯೆ ಹಿಂದಿನ ರಾತ್ರಿ ಕೌರಿ, ಹಲಸು, ಗಂಧ, ಕಾಮ್ಟೆ ಕೋಲುಗಳನ್ನು ಪೂಜಿಸಲಾಯಿತು. ಕೋಲಾಟಕ್ಕೆ ಕಾಫಿ ಕೋಲುಗಳನ್ನು ಬಳಸಲಾಯಿತು. ಕೊಪ್ಪ, ತೀರ್ಥಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಮನೆಗಳಿಗೆ ತೆರಳಿ ಕೋಲಾಟ ಆಡಲಾಯಿತು. ಬಳಿಕ ಪಲ್ಲಕ್ಕಿ ಉತ್ಸವದ ಮೂಲಕ ಶೆಟ್ಟಿಹಡ್ಲು ಹಳ್ಳದಲ್ಲಿ ಕೋಲುಗಳನ್ನು ವಿಸರ್ಜಿಸಲಾಯಿತು. ಗ್ರಾಮದ ಮನೆಗಳಿಗೆ ಕೋಲಾಟಕ್ಕೆ ತೆರಳಿದ್ದಾಗ ಜನರು ಬಲೀಂಧ್ರ ದೇವರಿಗೆ ದೀಪ ಹಚ್ಚಿ, ಆರತಿ ಬೆಳಗಿ, ಹಣ್ಣು ಕಾಯಿ ಪೂಜೆ ಸಲ್ಲಿಸಿದರು. ಗುರುವಾರ ಸಂಜೆ ಕೋಲುಗಳ ವಿಸರ್ಜನೆಯ ಭಾಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು. ವಾದ್ಯ, ಹಲಗೆ, ಬ್ಯಾಂಡ್ ಸೆಟ್ ವಾದನ ಪಲ್ಲಕ್ಕಿ ಉತ್ಸವಕ್ಕೆ ಮೆರುಗು ನೀಡಿತ್ತು.