ಲಿಂಗಸುಗೂರು: ಕೋಠಾ ಗ್ರಾಪಂ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕು ಮತ್ತು ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ತಾಪಂ ವ್ಯವಸ್ಥಾಪಕ ಮಲ್ಲಿಕಾರ್ಜುನಗೆ ಮನವಿ ಸಲ್ಲಿಸಿದರು.
ಕೋಠಾ ಗ್ರಾಪಂ ವ್ಯಾಪ್ತಿಯ ಮೇದಿನಾಪುರ ಗ್ರಾಮದಲ್ಲಿ ಪಿಡಿಒ ಗ್ರಾಮ ಸಭೆ ನಡೆಸದೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಪಂ ಸದಸ್ಯರಾದ ದ್ಯಾಮಮ್ಮ ಶೀಲವಂತ ಹಾಗೂ ನಾಗಪ್ಪ ಅವರ ತಾಯಿಯ ಹೆಸರಲ್ಲಿ ರಾಜೀವಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ. ಇನ್ನು ಕೆಲ ಸದಸ್ಯರು ಮನೆ ಕಟ್ಟಿಕೊಳ್ಳದೆ ಬೇರೆ ಕಟ್ಟಡಗಳ ಮುಂದೆ ನಿಂತು ಫೋಟೋ ತೆಗೆಯಿಸಿಕೊಂಡು ಮನೆ ಕಟ್ಟಿಸಿಕೊಂಡಂತೆ ಸರ್ಕಾರದ ಹಣ ಲೂಟಿ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.