ಚಿತ್ರದುರ್ಗ: ಒನಕೆಯನ್ನೇ ಆಯುಧವಾಗಿಸಿಕೊಂಡು, ಶತ್ರು ಸೈನ್ಯ ಸದೆಬಡಿದು, ಐತಿಹಾಸಿಕ ಚಿತ್ರದುರ್ಗ ಕೋಟೆ ರಕ್ಷಿಸಿ, ನಾಡಪ್ರಭುವಿನ ನಿಷ್ಠೆಗೆ ಹೆಸರಾದ ಓಬವ್ವ ಕರ್ನಾಟಕದ ಹೆಮ್ಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತರಾಸು ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.
ದುರ್ಗದ ಓಬವ್ವ ನಿಸ್ವಾರ್ಥ ನಾಡಪ್ರೇಮ ಹೊಂದಿದ್ದು, ಚರಿತ್ರೆಯಲ್ಲಿ ಅಜರಾಮರವಾಗಿದ್ದಾರೆ. ನಾರಿಶಕ್ತಿಯ ಸಂಕೇತವಾಗಿ, ಪ್ರಾಮಾಣಿಕ ಕರ್ತವ್ಯನಿಷ್ಠೆಯೊಂದಿಗೆ ಬಹುದೊಡ್ಡ ಸಾಕ್ಷಿ ಪ್ರಜ್ಞೆಯ ಧ್ಯೋತಕವಾಗಿ ಈಗಲೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.
ಕನ್ನಡ ನಾಡಿಗೆ ಹಾಗೂ ಸಮಾಜಕ್ಕೆ ಮಹನೀಯರು, ಮಹಿಳೆಯರು ನೀಡಿದ ಕೊಡುಗೆ, ತ್ಯಾಗ, ಬಲಿದಾನ, ಸಾಧನೆ, ಸಾರ್ಥಕ ಸೇವೆ ಗುರುತಿಸಿ ಸರ್ಕಾರದ ನಿಯಮದಡಿ ಜಯಂತಿ ಆಚರಿಸಲಾಗುತ್ತಿದೆ. ಅಂತಹ ತ್ಯಾಗ, ನಿಷ್ಠೆ, ಧೈರ್ಯದ ತ್ರಿವೇಣಿ ಸಂಗಮವಾದ ಓಬವ್ವ ದುರ್ಗದ ಶಕ್ತಿಯ ಸ್ವರೂಪ ಎಂದು ವರ್ಣಿಸಿದರು.
ಯುದ್ಧದ ಕುರಿತು ಪರಿವೇ ಇಲ್ಲದೆ, ಸಮಯ ಪ್ರಜ್ಞೆ, ಸಾಹಸದಿಂದ ಹೈದರಾಲಿ ಸೈನಿಕರ ವಿರುದ್ಧ ಹೋರಾಡಿದ ಓಬವ್ವ ಆದರ್ಶ ನಮ್ಮೆಲ್ಲರಿಗೂ ದಾರಿದೀಪ. ಕರ್ನಾಟಕ ಇತಿಹಾಸದ ಚರಿತ್ರೆಯಲ್ಲಿ ಕಿತ್ತೂರು ರಾಣಿಚೆನ್ನಮ್ಮ, ಝಾನ್ಸಿ ರಾಣಿ, ಅಬ್ಬಕ್ಕ, ದುರ್ಗದ ರಾಣಿ ಓಬವ್ವನಾಗತಿ ಇವರೆಲ್ಲರೂ ಶತ್ರುಗಳ ವಿರುದ್ಧ ಸೆಣಸಾಡಿದ ವೀರಾಗ್ರಣಿಗಳು. ಅಂತಹ ಸಾಲಿಗೆ ಓಬವ್ವ ಸೇರಿದ್ದು, ಗರ್ವಾಭಿಮಾನದ ಸಂಗತಿ. ಆಕೆ ನಾಡಿನ ಮಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ನಗರದ ಹೊಳಲ್ಕೆರೆ ರಸ್ತೆಯ ಒನಕೆ ಓಬವ್ವ ದೇಗುಲದ ಜೀರ್ಣೋದ್ಧಾರಕ್ಕೆ ಎಲ್ಲ ರೀತಿಯ ಸಹಕಾರ, ಸೌಲಭ್ಯವನ್ನು ಸರ್ಕಾರದಿಂದ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಓಬವ್ವ ಅವರ ಜೀವನ, ಸಾಹಸ, ಶೌರ್ಯ ಹಾಗೂ ದುರ್ಗದ ಇತಿಹಾಸವನ್ನು ದೇಶಕ್ಕೆ ‘ನಾಗರಹಾವು’ ಚಿತ್ರದ ಮೂಲಕ ಪರಿಚಯಿಸಿದ ಕೀರ್ತಿ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ತಾಂತ್ರಿಕ ವಿದ್ಯಮಾನಗಳಿಂದ ನಮ್ಮ ಸಂಸ್ಕೃತಿ, ಪರಂಪರೆಯನ್ನು ಈಗಿನ ಯುವಸಮೂಹ ಮರೆಯುತ್ತಿದ್ದು, ಅದನ್ನು ಬಿತ್ತುವ ಕೆಲಸವಾಗಬೇಕಿದೆ. ಎಲ್ಲ ಕ್ಷೇತ್ರಗಳಲ್ಲೂ ಪಾಲ್ಗೊಂಡು ಸಾಧನೆಗೆ ಮುಂದಾಗಬೇಕಿದೆ. ಮಹಾಮಾತೆ ಓಬವ್ವ ಆದರ್ಶ ಮೈಗೂಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಕೋಟೆನಾಡು ಚಿತ್ರದುರ್ಗ, ರಾಜವೀರ ಮದಕರಿನಾಯಕರಿಗೆ ಗೌರವ ತಂದುಕೊಟ್ಟ ಕೀರ್ತಿ ಒನಕೆ ಓಬವ್ವಗೆ ಸಲ್ಲುತ್ತದೆ ಎಂದರು.
ಡಾ.ತಿಪ್ಪೇಸ್ವಾಮಿ ಮತ್ಸಮುದ್ರ ಮಾತನಾಡಿ, ಛಲಗಾತಿ ಓಬವ್ವ ಛಲವಾದಿ ಸಮುದಾಯನ್ನು ಚರಿತ್ರೆಯಲ್ಲಿ ದಾಖಲಾಗುವಂತೆ ಮಾಡಿದ ಮಹಾತಾಯಿ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಎಎಸ್‌ಪಿ ಕುಮಾರಸ್ವಾಮಿ, ಎಸಿ ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಡಿಡಿಪಿಐ ಮಂಜುನಾಥ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಛಲವಾದಿ ಸಮುದಾಯದ ಮುಖಂಡರಾದ ನಿರಂಜನಮೂರ್ತಿ, ಭಾರ್ಗವಿ ದ್ರಾವಿಡ್, ಆರ್.ನಾಗರಾಜ್, ಶೇಷಪ್ಪ, ಎಸ್.ಎಲ್.ರವಿಕುಮಾರ್, ಸಿ.ಟಿ.ಕೃಷ್ಣಮೂರ್ತಿ ಇತರರಿದ್ದರು.