ಕೋಲಾರ ಬಂದ್ ಶಾಂತಿಯುತ

ಕೋಲಾರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆ ಮೇಲಿನ ಉಗ್ರರ ದಾಳಿ ಖಂಡಿಸಿ ಶ್ರೀರಾಮಸೇನೆ ಮಂಗಳವಾರ ಕರೆ ನೀಡಿದ್ದ ಕೋಲಾರ ಬಂದ್ ಶಾಂತಿಯುತವಾಗಿ ನಡೆದರೆ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟು ಮುಚ್ಚಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೈಕ್ ರ್ಯಾಲಿಗೆ ಶ್ರೀರಾಮಸೇನೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಮುಖಂಡರು ಹಾಗೂ ಎಬಿವಿಪಿ ಕಾರ್ಯಕರ್ತರು ಕೇಸರಿ ಬಾವುಟ ಹಿಡಿದು ಉಗ್ರರನ್ನು ಪೋಷಿಸುತ್ತಿರುವ ರಾಷ್ಟ್ರದ ವಿರುದ್ಧ ಘೊಷಣೆಯೊಂದಿಗೆ ಕಾಲ್ನಡಿಗೆಯಲ್ಲೇ ಸಂಚರಿಸಿ ಬಂದ್​ಗೆ ಸಹಕರಿಸುವಂತೆ ಅಂಗಡಿ ಮಾಲೀಕರಿಗೆ ಮನವಿ ಮಾಡಿದರು.

ಸೇನೆ ಜಿಲ್ಲಾ ಸಂಘಟಕ ರಮೇಶ್​ರಾಜ್, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್, ನಗರಾಧ್ಯಕ್ಷ ಮಹೇಶ್, ಎಬಿವಿಪಿ ಜಿಲ್ಲಾ ಸಂಚಾಲಕ ನವೀನ್, ತಾಲೂಕು ಸಂಚಾಲಕ ಅರುಣ್, ಚೇತನ್, ಸಹ ಸಂಚಾಲಕ ಮನೋಹರ್, ಕೀರ್ತಿ, ರಾಧಾಕೃಷ್ಣ ಇತರರು ನೇತೃತ್ವ ವಹಿಸಿದ್ದರು.

ವರ್ತಕರ ಸಂಘಗಳ ಒಕ್ಕೂಟ: ಜಿಲ್ಲಾ ವರ್ತಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ವರ್ತಕರು ಬೆಳಗ್ಗೆಯೇ ಅಂಗಡಿ ಮುಂಗಟ್ಟು ಮುಚ್ಚಿ ಗಾಂಧಿವನದಲ್ಲಿ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದರು. ಎಂ.ಬಿ.ರಸ್ತೆ, ಕಾಳಮ್ಮಗುಡಿ ಬೀದಿ, ಕಾಲೇಜು ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಬಿ.ಸುರೇಶ್ ಮಾತನಾಡಿ, ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ಖಂಡನೀಯ. ಭಯೋತ್ಪಾದನೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಠಿಣ ಕ್ರಮದ ಜತೆಗೆ ಉಗ್ರರಿಗೆ ಆಶ್ರಯದಾತರಾಗಿರುವವರನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.

ಭಾರತೀಯ ಸೇನೆ ಬಗ್ಗೆ ಅರಿವು ಮೂಡಿಸಿ ಜನರಲ್ಲಿ ರಾಷ್ಟ್ರಭಕ್ತಿ ಬೆಳೆಸಲು ಶಾಲಾ-ಕಾಲೇಜುಗಳಲ್ಲಿ ಎನ್​ಸಿಸಿ ಕಡ್ಡಾಯಗೊಳಿಸಬೇಕು. ಸೇನೆ ಬಗ್ಗೆ ಪಠ್ಯದಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿದ ವರ್ತಕರು ಧರಣಿ ನಡೆಸಿ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಎ.ಎಸ್. ಛಲಪತಿ, ವರ್ತಕರ ಸಂಘಗಳ ಒಕ್ಕೂಟ ಕಾರ್ಯದರ್ಶಿ ಮನೋಹರ್, ಪದಾಧಿಕಾರಿಗಳಾದ ಬದ್ರಿನಾಥ್, ಪ್ರಭಾಕರ್, ಗೋವಿಂದರಾಜು ನೇತೃತ್ವ ವಹಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಂಜೆ 4 ಗಂಟೆ ನಂತರ ಅಂಗಡಿ-ಮುಂಗಟ್ಟು ಬಾಗಿಲು ತೆರೆಯಲಾಗಿತ್ತು. 

ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ನೀಡಿರುವ ವಿಶೇಷ ಸ್ಥಾನಮಾನ ವಾಪಸ್ ಪಡೆಯುವ ಮೂಲಕ ಇಡೀ ಭಾರತಕ್ಕೆ ಒಂದೇ ಸಂವಿಧಾನವನ್ನು ಅನ್ವಯಿಸಬೇಕು.

| ಶ್ರೀಧರ್, ವರ್ತಕರ ಸಂಘದ ಒಕ್ಕೂಟದ ಅಧ್ಯಕ್ಷ

ಸಾರ್ವಜನಿಕರ ಓಡಾಟಕ್ಕೆ ತೊಂದರೆಯಿಲ್ಲ: ಬಂದ್ ಕೆರೆಗೆ ಸ್ಪಂದಿಸಿದ ಪ್ರಮುಖ ಹೋಟೆಲ್ ಹಾಗೂ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದರು. ಸಾರಿಗೆ ಬಸ್, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿರಲಿಲ್ಲ. ಶಾಲಾ ಕಾಲೇಜುಗಳು ತೆರೆದಿದ್ದವಾದರೂ ಬಂದ್ ಎಂಬ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.