ಕೋಲಾರ ಜಿಲ್ಲೆಯ ಭಕ್ತರಿಂದ ಗುರುನಮನ

ಕೋಲಾರ: ಗುರು ಪೂರ್ಣಿಮೆ ಅಂಗವಾಗಿ ನಗರದ ಸಾಯಿಬಾಬಾ ಮಂದಿರಕ್ಕೆ ಮಂಗಳವಾರ ಸುಮಾರು 25 ಸಾವಿರಕ್ಕೂ ಮೀರಿದ ಭಕ್ತ ಸಾಗರ ಹರಿದು ಬಂದಿತ್ತು.

ಚಂದ್ರಗ್ರಹಣದ ಕಾರಣಕ್ಕೆ ಸಂಜೆ 4 ಗಂಟೆಗೇ ದೇವಾಲಯದ ಬಾಗಿಲು ಮುಚ್ಚುವ ಹಿನ್ನೆಲೆಯಲ್ಲಿ ಬೆಳಗಿನ ಜಾವವೇ ಬಂದಿದ್ದ ಭಕ್ತರ ದಂಡು ಸರತಿ ಸಾಲಿನಲ್ಲಿ ನಿಂತು ಗುರುವಿನ ದರ್ಶನ ಪಡೆಯಿತು. ಸರತಿ ಸಾಲು ಪ್ರವಾಸಿ ಮಂದಿರದ ಮುಂಭಾಗದವರೆಗೂ ಸಾಗಿತ್ತು.

ಮುಂಜಾನೆಯ ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕೈಂಕರ್ಯ, ಹೂವಿನ ಅಲಂಕಾರ, ವಾದ್ಯಗೋಷ್ಠಿ ನಡೆಯಿತು. ದೇವಾಲಯ ಹಾಗೂ ಸಾಯಿಬಾಬಾ ಮೂರ್ತಿಯನ್ನು ಪ್ಲವರ್ ಡೆಕೋರೇಟರ್ಸ್ ಸಂಘದಿಂದ ವಿಧವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಲ್ಲ ಭಕ್ತರಿಗೂ ಪ್ರಸಾದ, ಸಿಹಿ ಊಟದ ವ್ಯವಸ್ಥೆ ಮಾಡಿಸಿದ್ದರು.

ಪೋಲೀಸರೊಂದಿಗೆ 50ಕ್ಕೂ ಹೆಚ್ಚು ಬಾಬಾ ಭಕ್ತರ ಸೇವಾದಳ ಕಾರ್ಯಕರ್ತರು ಸುಗಮ ದರ್ಶನದ ವ್ಯವಸ್ಥೆ, ಭಕ್ತರಿಗೆ ವಿಭೂತಿ, ತೀರ್ಥ, ಪ್ರಸಾದ ನೀಡುವ ಉಸ್ತುವಾರಿ ವಹಿಸಿದ್ದರು.

ಪೂಜೆ, ಭಕ್ತರ ನಿರ್ವಹಣೆ ಉಸ್ತುವಾರಿಯನ್ನು ದೇವಾಲಯ ಮಂಡಳಿಯ ಜಿ.ಪಿ.ಮುನಿಸ್ವಾಮಿ, ರವಿಶಂಕರ್ ಗುಪ್ತಾ, ಬಣಕನಹಳ್ಳಿ ನಟರಾಜ್, ಶ್ರೀರಾಮ ಕಾಫಿವರ್ಕ್ಸ್​ನ ಶ್ರೀನಾಥ್, ಲಿಂಗನರಸಯ್ಯ, ಕಾಂತಮ್ಮ, ಜ್ಯೋತಿರೆಡ್ಡಿ, ನಾಗರತ್ನಾ, ಸರೋಜಮ್ಮ ಮತ್ತಿತರರು ವಹಿಸಿದ್ದರು.

ಅನ್ನದಾನ: ಬಾಬಾ ಮಂದಿರ ಸಮೀಪದ ರೈಲು ನಿಲ್ದಾಣ ಮುಂಭಾಗದ ಮೈದಾನದಲ್ಲಿ ಅನ್ನದಾನ ನಡೆಯಿತು. ಭಕ್ತರಿಗೆ ಸಿಹಿ ಊಟ ತಯಾರಿಸುವ ಕಾರ್ಯದಲ್ಲಿ 300ಕ್ಕೂ ಹೆಚ್ಚು ಬಾಣಸಿಗರು ದುಡಿದರೆ, ಬಡಿಸುವ ಕಾರ್ಯದಲ್ಲಿ ನೂರಾರು ಯುವಕರು ಪಾಲ್ಗೊಂಡರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್ ಕುಮಾರ್, ಸಹಕಾರಿ ಯೂನಿಯನ್ ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಪಿಎಲ್​ಡಿ ಬ್ಯಾಂಕ್ ನಿರ್ದೇಶಕ ಚೆಂಜಿಮಲೆ ರಮೇಶ್, ಮುಖಂಡರಾದ ಅಣ್ಣಿಹಳ್ಳಿ ನಾಗರಾಜ್, ದೊಡ್ನಹಳ್ಳಿ ವೆಂಕಟೇಶಪ್ಪ, ಮೂರಂಡಹಳ್ಳಿ ಗೋಪಾಲ್, ಅನ್ವರ್ ಪಾಷಾ, ತುರಾಂಡಹಳ್ಳಿ ಸರ್ವೆಶ್, ಮಟ್ನಹಳ್ಳಿ ಸೊಣ್ಣೇಗೌಡ, ಪಿ.ವಿ.ರಾಕೇಶ್, ಸುಗಟೂರು ಚಲಪತಿ, ಶ್ರೀಧರ್, ಆಟೋ ನಾರಾಯಣಸ್ವಾಮಿ, ವಲ್ಲಬಿಪ್ರಸನ್ನ, ಮಂಜುನಾಥ್, ವಾನರಾಶಿ ಮುನಿವೆಂಕಟಪ್ಪ, ಬ್ಯಾಲಹಳ್ಳಿ ಶ್ರೀನಾಥ್, ವಿಶ್ವನಾಥ್, ಕೋರ್ಟ್ ಶಿವು ನೆನುಮನಹಳ್ಳಿ ಚಂದ್ರಶೇಖರ್, ಬ್ಯಾಲಹಳ್ಳಿ ವೆಂಕಟೇಶ್ ವಹಿಸಿದ್ದರು.

ಊಟದಲ್ಲೂ ವಿಶಿಷ್ಟತೆ: ಬಾಳೆ ಎಲೆಯಲ್ಲಿ ಮಲ್ಲಿಗೆ ಇಡ್ಲಿ, ರಾಗಿದೋಸೆ, ಉಚ್ಚೆಳ್ಳು ಚಟ್ನಿ, ಪಕೋಡಾ, ಕಡಬು, ತರಕಾರಿ ಬಾತ್, ಅನ್ನರಸ, ಅನ್ನಮಜ್ಜಿಗೆ ಬಡಿಸಿ ಭಕ್ತರನ್ನು ತೃಪ್ತಿ ಪಡಿಸಲಾಯಿತು. ಊಟ ಬಡಿಸುವ ಕಾರ್ಯದಲ್ಲಿ ಲೋಪವಾಗದಂತೆ ವ್ಯವಸ್ಥೆಯ ಉಸ್ತುವಾರಿಯನ್ನು ಬ್ಯಾಲಹಳ್ಳಿ ಗೋವಿಂದಗೌಡ ನೇತೃತ್ವದ ತಂಡ ವಹಿಸಿತ್ತು. ಸುಮಾರು 20,000ಕ್ಕೂ ಹೆಚ್ಚು ಮಂದಿ ಪ್ರಸಾದ ಸವಿದರು.

Leave a Reply

Your email address will not be published. Required fields are marked *