ಕೋಲಾರ ಕ್ಷೇತ್ರಕ್ಕೆ ಮುನಿಯಪ್ಪ ಕೊಡುಗೆ ಶೂನ್ಯ

ಕೋಲಾರ: ಕಳೆದ 28 ವರ್ಷಗಳಿಂದ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಕ್ಷೇತ್ರದಲ್ಲಿ ಯಾವುದೇ ಒಂದು ಶಾಶ್ವತ ಅಭಿವೃದ್ಧಿ ಕಾರ್ಯ ಮಾಡದಿರುವುದರಿಂದ ಈ ಬಾರಿ ಮತದಾರರು ಬೆಂಬಲ ನೀಡುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕೆಸಿ ವ್ಯಾಲಿ ಯೋಜನೆಗೆ ಅಡ್ಡಗಾಲು ಹಾಕಿರುವ ರಾಜಕಾರಣಿಯನ್ನು ಮತ್ತೊಮ್ಮೆ ಗೆಲ್ಲಿಸಲು ಮತದಾರರು ಮೂರ್ಖರಲ್ಲ ಎಂದರು. ನಾನು ಕೋಲಾರ ಜಿಲ್ಲೆಯ ಮಣ್ಣಿನ ಮಗ. ನನಗೂ ಜಿಲ್ಲೆಯ ಕೆಲವು ಕಡೆ ಆಸ್ತಿ ಇದೆ. ಚುನಾವಣೆಯಲ್ಲಿ ಗೆದ್ದಲ್ಲಿ ಜ್ವಲಂತ ಸಮಸ್ಯೆಯಾದ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಜನ ಕೊಟ್ಟ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಮುನಿಯಪ್ಪ ನೂರಾರು ಕೋಟಿ ಆಸ್ತಿ ಮಾಡಿದ್ದಾರೆಂದು ಆರೋಪಿಸಿದ ಅವರು, ಸದ್ಯಕ್ಕೆ ಲಭ್ಯವಿರುವ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮತದಾರರಿಗೂ ಮುನಿಯಪ್ಪನವರ ಅಕ್ರಮಗಳ ಅರಿವಾಗಿದ್ದು, ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಹಿರಿಯ ಮುಖಂಡರಾದ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕರು ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದರು. ಪಕ್ಷದ ವರಿಷ್ಠರು ನನಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ನನ್ನ ಗೆಲುವಿಗೆ ಶ್ರಮಿಸುವಂತೆ ಎಲ್ಲ ಮುಖಂಡರನ್ನು ಕೋರಿದ್ದೇನೆ. ನಾನು ಡಮ್ಮಿ ಅಭ್ಯರ್ಥಿ ಅಲ್ಲ, ಚುನಾವಣಾ ಕಣದಿಂದ ನಿರ್ಗಮಿಸುವ ಪ್ರಶ್ನೆಯೇ ಇಲ್ಲ. ಡಿ.ಎಸ್.ವೀರಯ್ಯ ಎರಡು ಬಾರಿ ಎಮ್ಮೆಲ್ಸಿಯಾಗಿ, ಅಂಬೇಡ್ಕರ್ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದಾರೆ. ಇವರಿಗೆ ಕೋಲಾರ ಕ್ಷೇತ್ರದ ಮೇಲೆ ಋಣ ಇರುವುದರಿಂದ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದರು.

ಆರೋಪ ನಿರಾಕರಣೆ: ಮಹಿಳೆಯೊಬ್ಬರ ಜತೆ ಅನುಚಿತ ವರ್ತನೆಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಆರೋಪಗಳು ಸಹಜ. ನನ್ನ ವಾರ್ಡ್​ನ ಕಾಮಗಾರಿ ನಡೆಸುವ ವೇಳೆ ಕೆಲವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ನನ್ನ ವಿರುದ್ಧ ನೀಡಿದ್ದ ದೂರಿನ ವಿಚಾರಣೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ನೀಡಿದ್ದಾರೆ. ನಮ್ಮ ಬಳಿಯೂ ಆಗಿನ ಘಟನೆಯ ಬಗ್ಗೆ ದಾಖಲೆಗಳಿವೆ. ವಿರೋಧಿಗಳು ಜನರ ದಿಕ್ಕು ತಪ್ಪಿಸಲು ಹಳೇ ಪ್ರಕರಣವನ್ನು ಈಗ ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಾ. 25ರಂದು ನಾಮಪತ್ರ ಸಲ್ಲಿಕೆ: ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಮಾ.25ರಂದು ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಚುನಾವಣೆ ಉಸ್ತುವಾರಿ ಹೊತ್ತಿರುವ ಎಮ್ಮೆಲ್ಸಿ ವೈ.ಎ.ನಾರಾಯಣಸ್ವಾಮಿ ಕೋರಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಕೋಲಾರದಿಂದ ನಮ್ಮ ಅಭ್ಯರ್ಥಿ ಗೆಲ್ಲುವುದು ಮುಖ್ಯ ಎಂದರು.

ಕ್ಷೇತ್ರದ ಸಂಚಾಲಕ ಕೃಷ್ಣಾರೆಡ್ಡಿ, ಮಾಜಿ ಶಾಸಕ ವೈ. ಸಂಪಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಡಿ.ರಾಮಚಂದ್ರ, ವಾಸುದೇವ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ನಗರಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಮುಖಂಡರಾದ ಮಮತಾ, ಕೆಂಬೋಡಿ ನಾರಾಯಣಸ್ವಾಮಿ, ಜಯಂತಿಲಾಲ್​ಜೈನ್ ಇತರರಿದ್ದರು.