ಕೋಲಾರದಲ್ಲಿ ಭೂಕಂಪನ ಅನುಭವ

ಕೋಲಾರ:  ನಗರ ಹೊರವಲಯ ಟಮಕ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಸರಿಸುಮಾರು 12.45ರಿಂದ 1 ಗಂಟೆಯ ಅವಧಿಯಲ್ಲಿ ಭಾರೀ ಶಬ್ದ ಕೇಳಿಬಂದಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ.ಈ ನಿಗೂಢ ಶಬ್ದ ಯಾವುದು ಎಂದು ಇದುವರೆಗೂ ತಿಳಿದುಬಂದಿಲ್ಲ. ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಕೊಠಡಿ ಮತ್ತು ಕಂಪ್ಯೂಟರ್ ವಿಭಾಗದಲ್ಲಿ ಇದ್ದವರಿಗೆ ಕಂಪನದ ಅನುಭವವಾಗಿ ಕಟ್ಟಡದಿಂದ ಹೊರಬಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಸುತ್ತಮುತ್ತ ಯಾವುದೇ ಕಲ್ಲುಗಣಿಗಾರಿಕೆ ಪ್ರದೇಶಗಳಿಲ್ಲ. ಶಬ್ದದಿಂದಾಗಿ ಕಟ್ಟಡದಲ್ಲಿ ಎರಡರಿಂದ ಮೂರು ಸೆಕೆಂಡ್ ಕಂಪನದ ಅನುಭವವಾಗಿದೆ. ಕಾಲೇಜಿಗೆ ರಜೆ ಇದ್ದುದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಡೀನ್ ಡಾ.ಬಿ.ಜಿ. ಪ್ರಕಾಶ್ ಕೊಠಡಿಯ ಗೋಡೆಯಲ್ಲಿ ಈ ಮುಂಚೆಯೇ ಸಣ್ಣ ಬಿರುಕು ಉಂಟಾಗಿತ್ತು. ಭಾರೀ ಶಬ್ದದಿಂದ ಬಿರುಕು ಹೆಚ್ಚಾಗಿದೆ ಎಂದು ಸ್ವತಃ ಡೀನ್ ವಿಜಯವಾಣಿಗೆ ತಿಳಿಸಿದ್ದಾರೆ. ಕಂಪ್ಯೂಟರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಪ್ರಾಧ್ಯಾಪಕ ಧನಂಜಯ ಅವರಿಗೆ ಶಬ್ದದಿಂದ ಒಂದು ಕ್ಷಣ ತಲೆ ಸುತ್ತಿದ ಅನುಭವವಾಗಿದೆೆ ಎಂದು ತಿಳಿಸಿದ್ದಾರೆ.

ಭೂ ಕಂಪನದ ರೀತಿಯಲ್ಲಿ ನಮ್ಮ ಕಾಲೇಜಿನ ಕಟ್ಟಡ ಒಂದೆರಡು ಸೆಕೆಂಡ್ ಅಲುಗಾಡಿದಂತಾಯಿತು. ಕೊಠಡಿಯಿಂದ ಹೊರಹೋಗಿ ಕಾವಲುಗಾರರನ್ನು ವಿಚಾರಿಸಿದಾಗ ಭೂ ಕಂಪನವಲ್ಲ ಎಂದರು ಎಂದು ಕಂಪ್ಯೂಟರ್ ವಿಭಾಗದ ಸಿಬ್ಬಂದಿ ಕಲಂದರ್ ಹೇಳಿದ್ದಾರೆ.

ಕಾಲೇಜು ಪಕ್ಕದಲ್ಲಿರುವ ಆರ್.ಎಲ್. ಜಾಲಪ್ಪ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳಿಗೂ ಶಬ್ದ ಕೇಳಿಸಿದೆ. ಟಮಕ ಸಮೀಪದಲ್ಲೇ ಇರುವ ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ಉತ್ತರ ವಿವಿಗೂ ಶಬ್ದ ಕೇಳಿಸಿದೆ. ಬಹುಶಃ ಗುಡುಗಿರಬಹುದೆಂದು ಭಾವಿಸಿದೆವು ಎಂದು ಗಣಿತ ಉಪನ್ಯಾಸಕಿ ಶ್ರೀಲತಾ ತಿಳಿಸಿದ್ದಾರೆ.

ನಾವು ಅಳವಡಿಸಿರುವ ಯಾವುದೇ ಭೂಕಂಪನ ಮಾಪನ ಕೇಂದ್ರಗಳಲ್ಲಿ ಕಂಪನ ದಾಖಲಾಗಿಲ್ಲ. ಸ್ಥಳೀಯ ಕ್ವಾರಿ ಅಥವಾ ಇನ್ನಿತರ ಕಾರಣದಿಂದ ಶಬ್ದ ಕೇಳಿರಬಹುದು ಅಥವಾ ಕಂಪನವಾಗಿರಬಹುದು.

ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ

ಯಾವುದೇ ದೂರು ಬಂದಿಲ್ಲ:  ಮಧ್ಯಾಹ್ನ 1 ಗಂಟೆ ಸಮಯದಲ್ಲಿ ದೊಡ್ಡ ಶಬ್ದ ಕೇಳಿತೆಂದು ನಮ್ಮ ಕಚೇರಿ ಸಿಬ್ಬಂದಿ ಸುಚೇತ್ ತಿಳಿಸಿದ್ದಾರೆ. ಸಾರ್ವಜನಿಕರಿಂದ ಈ ಕುರಿತು ದೂರುಗಳು ಬಂದಿಲ್ಲ. ತೋಟಗಾರಿಕೆ ಇಲಾಖೆ ಕಟ್ಟಡ ಕಂಪಿಸಿದ್ದೂ ನನ್ನ ಗಮನಕ್ಕೆ ಬಂದಿಲ್ಲ. ಆದರೂ ಕಾರಣ ತಿಳಿಯಲು ಪ್ರಯತ್ನಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಿರಿಯ ಭೂ ವಿಜ್ಞಾನಿ ವಿಶ್ವನಾಥ್ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *