ಕೋರಂ ಅಭಾವ, ತಾಪಂ ಸಾಮಾನ್ಯ ಸಭೆ ಮುಂದಕ್ಕೆ

ಶಿರಹಟ್ಟಿ: ಪಟ್ಟಣದ ಸಾಮರ್ಥ್ಯಸೌಧದಲ್ಲಿ ಬುಧವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಗೆ ಕೆಲ ಅಧಿಕಾರಿಗಳ ಗೈರು ಹಾಜರಿ ಖಂಡಿಸಿ ಹಾಗೂ ಸಭೆಯ ನೋಟಿಸ್ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸದಸ್ಯರು ಹೊರನಡೆದರು. 14ರಲ್ಲಿ 8 ಸದಸ್ಯರ ನಿರ್ಗಮನದಿಂದ ಕೋರಂ ಅಭಾವವಾಗಿ ಸಭೆ ಮುಂದೂಡಲ್ಪಟ್ಟಿತು.

ಅಶೋಕ ಮುಳಗುಂದಮಠ, ನಿಂಗಪ್ಪ ಜಾಲವಾಡಗಿ, ಉಮಾ ಹೊನಗಣ್ಣವರ ಮಾತನಾಡಿ, ಮೂರು ತಿಂಗಳ ಬಳಿಕ ನಡೆಯಲಿರುವ ಸಭೆಗೆ ಎಷ್ಟು ಇಲಾಖೆಗಳ ಮುಖ್ಯ ಅಧಿಕಾರಿಗಳು ಬಂದಿದ್ದಾರೆ? ಕಚೇರಿ ಸಹಾಯಕರು ಬಂದಿದ್ದರೆ ಅವರ ಅಗತ್ಯವಿಲ್ಲ. ಮಳೆ, ನೆರೆ ಹಾವಳಿಗೆ ಹಾನಿಯಾದ ಬಗ್ಗೆ ನಿಖರ ಮಾಹಿತಿ, ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕೆ ಶಿರಹಟ್ಟಿ, ಲಕ್ಷ್ಮೇಶ್ವರ ತಹಸೀಲ್ದಾರರು, ಕೃಷಿ ಅಧಿಕಾರಿಗಳು, ಆಹಾರ ಶಿರಸ್ತೇದಾರ್ ಅವರನ್ನು ಕರೆಯಿಸಿ. ಇಲ್ಲದಿದ್ದರೆ ಕಾಟಾಚಾರಕ್ಕೆ ಸಭೆ ನಡೆಸಬೇಡಿ ಎಂದು ತಾಪಂ ಇಒ ರಾಹುಲ್ ಕಾಂಬಳೆ ಅವರಿಗೆ ಹೇಳಿದರು.

ಇಒ ಫೋನ್ ಮೂಲಕ ಅಧಿಕಾರಿಗಳಿಗೆ ತಿಳಿಸಿದಾಗ ಅನ್ಯಕಾರ್ಯದ ನಿಮಿತ್ತ ಸಭೆಗೆ ಬರಲು ತಡವಾಗುತ್ತದೆ ಎಂದರು. ಅದನ್ನು ಸಭೆಯ ಗಮನಕ್ಕೆ ತಂದಾಗ ಆಕ್ರೋಶಗೊಂಡ ಸದಸ್ಯರು, ಇಂದಿನ ಸಭೆಯ ನೋಟಿಸ್ ಕೆಲವರಿಗೆ ಮಂಗಳವಾರ ಮುಟ್ಟಿದರೆ ಮತ್ತೆ ಕೆಲವರಿಗೆ ತಲುಪಿಲ್ಲ. ವಾಟ್ಸಾಪ್​ನಲ್ಲಿ ಹಾಕಿದ ಸುದ್ದಿ ನೋಡಿ ಬಂದಿದ್ದೇವೆ. ಜನರ ಸಮಸ್ಯೆಗಳ ಬಗ್ಗೆ ರ್ಚಚಿಸಿ ಪರಿಹಾರ ಕಂಡುಕೊಳ್ಳಲು ಬಂದಿದ್ದೇವೆ ಹೊರತು ಊಟ, ಚಹಾ ಕುಡಿದು ಮಜಾ ಮಾಡಲಿಕ್ಕಲ್ಲ. ಅಧಿಕಾರಿಗಳೇ ಬಂದಿಲ್ಲವೆಂದ ಮೇಲೆ ಸಭೆ ನಡೆಸುವ ಅಗತ್ಯವಿಲ್ಲ ಎಂದು ಸಭೆ ಬಹಿಷ್ಕರಿಸಿ ಕಾಂಗ್ರೆಸ್, ಬಿಜೆಪಿ 8 ಸದಸ್ಯರು ಹೊರನಡೆದರು. ಆಗ ಪರಸಪ್ಪ ಇಮ್ಮಡಿ, ಇಒ ರಾಹುಲ್ ಕಾಂಬಳೆ ಅವರು, ಇದೊಂದು ಸಲ ಸಭೆ ನಡೆಸಿ. ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳ ಗಮನ ಸೆಳೆಯೋಣ ಎಂದು ವಿನಂತಿಸಿದರೂ ಪ್ರಯೋಜನವಾಗಲಿಲ್ಲ.

ಅಧ್ಯಕ್ಷೆ ಸುಶೀಲವ್ವ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ಮಂಜುನಾಥ ಜೋಗಿ, ಗಿರಿಜಾ ಲಮಾಣಿ ಮಾತ್ರ ಸಭೆಯಲ್ಲಿದ್ದರು. ಹೀಗಾಗಿ ಇಒ ಕೋರಂ ಅಭಾವದಿಂದ ಸಭೆ ನಡೆಸುವಂತಿಲ್ಲ. ಶೀಘ್ರದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು, ಉಭಯ ತಹಸೀಲ್ದಾರರ ಉಪಸ್ಥಿತಿಯಲ್ಲಿ ಸಭೆ ಕರೆಯಲಾಗುವುದು ಎಂದರು.

ಅಧಿಕಾರಿಗಳಿಗೆ ಎಚ್ಚರಿಕೆ

ಸಾಮಾನ್ಯ, ಕೆಡಿಪಿ ಸಭೆಯ ನೋಟಿಸ್ 8 ದಿನ ಮುಂಚಿತವಾಗಿ ಎಲ್ಲ ಸದಸ್ಯರಿಗೆ ತಲುಪಿಸುವಂತೆ ತಾಪಂ ಕಚೇರಿ ಸಹಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪ್ರತಿ ಸಭೆಗೆ ಇಲಾಖೆ ಅಧಿಕಾರಿಗಳೇ ಎಲ್ಲ ಮಾಹಿತಿಯೊಂದಿಗೆ ಹಾಜರಿರದಿದ್ದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಇಒ ರಾಹುಲ್ ಕಾಂಬಳೆ ಹೇಳಿದರು.Leave a Reply

Your email address will not be published. Required fields are marked *