ಕೋಮು ಸೌಹಾರ್ದದ ಅಗ್ನಿಕೊಂಡೋತ್ಸವ

| ಮಹದೇವಸ್ವಾಮಿ ಕುಣಿಗಲ್

ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿರುವ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಚೌಡೇಶ್ವರಿ ದೇವಿಯ ಬೃಹತ್ ಅಗ್ನಿಕೊಂಡೋತ್ಸವ ಏ.24ರ ಬೆಳಗ್ಗಿನ ಜಾವ 5 ಗಂಟೆಗೆ ನಡೆಯಲಿದೆ.

ದೇವಿ ಅಗ್ನಿಕೊಂಡೋತ್ಸವಕ್ಕೆ ಸುತ್ತಲ ಹಳ್ಳಿಗಳ ಗ್ರಾಮಸ್ಥರು ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಗಳಲ್ಲಿ ಸೌದೆ ತಂದು ಹಾಕುತ್ತಾರೆ. ಚೌಡೇಶ್ವರಿ ದೇವಿ ದೇವಸ್ಥಾನದ ಎತ್ತರಕ್ಕೂ ಮೀರಿ ಸೌದೆ ಜೋಡಿಸಲಾಗುತ್ತದೆ. ಇಷ್ಟು ಸೌದೆಯೂ ಬೆಳಗಿನ ಜಾವದ ವೇಳೆಗೆ ಉರಿದು ಕೆಂಡವಾಗುತ್ತದೆ. ರಾಶಿ ರಾಶಿ ಕೆಂಡ ತುಂಬಿದ ಅತೀ ಉದ್ದದ ಅಗ್ನಿಕೊಂಡದಲ್ಲಿ ದೇವರನ್ನು ಹೊತ್ತು ಪೂಜಾರಿಗಳು, ಹಬ್ಬಕ್ಕಾಗಿ ಜನಿವಾರ ಧರಿಸಿ ಬ್ರಾಹ್ಮಣರಾಗುವ ಹೆಬ್ಬಾರ ಗುಡ್ಡರು(ದಲಿತರು) ಹಾಗೂ ಮುಸ್ಲಿಂ ಸಮುದಾಯದ ಬಾಬಯ್ಯರು ಎಲ್ಲರೂ ಕೆಂಡ ಹಾಯುವ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶ ಸಾರುತ್ತಾರೆ.

ದಲಿತರು ಇಲ್ಲದೇ ಇಲ್ಲಿ ಹಬ್ಬ ನಡೆಯುವುದಿಲ್ಲ. ಗ್ರಾಮದಲ್ಲಿ ಪ್ರತಿವರ್ಷ 15 ದಿನ ಚೌಡೇಶ್ವರಿ ಹಬ್ಬ ನಡೆಯುತ್ತದೆ. ಮುಸ್ಲಿಂ ಸಮುದಾಯದ ಐದು ಜೋಡಿ ಕೊಂಡ ಹಾಯುತ್ತದೆ. ಕಂಬ ಹಾಕಿದ ದಿನದಿಂದಲೇ ಹೆಬ್ಬಾರೆ ಅಮ್ಮನ ಕರಗ ಹೊರಲು ‘ಹೆಬ್ಬಾರ ಗುಡ್ಡರು’ ಎಂದು ಕರೆಸಿಕೊಳ್ಳುವ ಆರು ದಲಿತರು ಬಿಳಿ ಕಚ್ಚೆ ಧರಿಸಿ ಚೌಡಮ್ಮನ ಪೂಜಾರಿಯಿಂದ ಹೋಮ ಮಾಡಿದ ತೀರ್ಥ ಸ್ವೀಕರಿಸಿ ಜನಿವಾರ ಧರಿಸುತ್ತಾರೆ.

ಇಲ್ಲಿನ ಮತ್ತೊಂದು ವಿಶೇಷವೆಂದರೆ ಮುಸ್ಲಿಂ ಸಮುದಾಯದ ಐದು ದಂಪತಿ ತಲೆ ಮೇಲೆ ಸಿಂಗರಿಸಿದ ಗಡಿಗೆ ಹೊತ್ತು ಕುಣಿಯುತ್ತ ಕೊಂಡ ಹಾಯುವುದು. ಹಬ್ಬಕ್ಕೆ ಕಂಬ ನೆಟ್ಟ ದಿನದಿಂದ ಊರಿನಲ್ಲಿ ಯಾರೂ ಕಂಟು ಹಾಕುವಂತಿಲ್ಲ. ಮೆಣಸಿನಕಾಯಿ ಸುಡುವಂತಿಲ್ಲ. ಇದು ಊರಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಕಟ್ಟುನಿಟ್ಟಿನ ಸಂಪ್ರದಾಯ.

Leave a Reply

Your email address will not be published. Required fields are marked *