ಕೋತಿಗಳಿಗೆ ಸಿಗುತ್ತಿಲ್ಲ ನೀರು, ಆಹಾರ

ಚಿಂತಾಮಣಿ: ಸತತ ಭರದಿಂದ ತತ್ತರಿಸಿರುವ ತಾಲೂಕಿನಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುತ್ತಿರುವುದು ಒಂದೆಡೆಯಾದರೆ, ಕಾಡು, ಬೆಟ್ಟ-ಗುಡ್ಡಗಳಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳು ಸಹ ನೀರು, ಆಹಾರ ಸಿಗದೆ ಪರದಾಡುವಂತಾಗಿದೆ.

ಇದಕ್ಕೆ ಉದಾಹರಣೆ ಕೈವಾರ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಕೋತಿ ಮತ್ತಿತರ ಪ್ರಾಣಿ ಪಕ್ಷಿಗಳು ಆಹಾರ, ನೀರಿಗಾಗಿ ಹುಡುಕಾಡುತ್ತಿರುವುದು. ಗವಿನರಸಿಂಹಸ್ವಾಮಿ ದೇವಾಲಯ ಸುತ್ತಮುತ್ತಲಿನ ಬೆಟ್ಟದಲ್ಲಿ ನೂರಾರು ಕೋತಿಗಳಿದ್ದು, ಒಣಗಿದ ಮರ, ತೊರೆಗಳಲ್ಲಿ ಆಹಾರ ಮತ್ತು ನೀರಿಗಾಗಿ ಹುಡುಕಾಟ ನಡೆಸುತ್ತಿದ್ದು, ನೋಡುಗರ ಮನಕುಲಕುವಂತಿದೆ. ಬೆಟ್ಟ ಮತ್ತು ಕಾಡಿನಲ್ಲಿ ಏನೂ ಸಿಗದ ಕಾರಣ ಗವಿಯಿಂದ ಚಿಂತಾಮಣಿಗೆ ಹೋಗುವ ರಸ್ತೆ ಬದಿ ಕೋತಿಗಳು ಬಂದು ಕುಳಿತುಕೊಳ್ಳುತ್ತವೆ. ಈ ಮಾರ್ಗದಲ್ಲಿ ತೆರಳುವ ಸಾರ್ವಜನಿಕರು ಏನಾದರೂ ತಿನ್ನಲು ಆಹಾರ ನೀಡುತ್ತಾರೆ ಎಂದು ಕೋತಿಗಳ ಹಿಂಡು ದಾರಿಹೋಕರನ್ನು ಎದುರು ನೋಡುವ ದೃಶ್ಯ ಎಂತಹ ಕಲ್ಲು ಹೃದಯದವರನ್ನೂ ಕರಗಿಸುವಂತೆ ಕಂಡುಬರುತ್ತಿದೆ.

ಮೈಲಾಪುರದ ಕೆಲವರು ಗವಿ ಬಳಿ ಕೋತಿಗಳಿಗಾಗಿ ಚಿಕ್ಕ ತೊಟ್ಟಿಗಳನ್ನು ನಿರ್ವಿುಸಿ ನೀರು ತುಂಬಿಸಿದ್ದಾರೆ. ಆದರೆ, 15-20 ದಿನಗಳಿಂದೀಚೆಗೆ ನೀರು ತುಂಬಿಸದ ಪರಿಣಾಮ ನೀರು ದುರ್ನಾತ ಬೀರುತ್ತಿದ್ದು, ಕೋತಿಗಳು ಆ ನೀರನ್ನು ಕುಡಿಯುತ್ತಿಲ್ಲ. ಕೋತಿಗಳು ಆಹಾರ, ನೀರಿಗಾಗಿ ರಸ್ತೆ ಬದಿ ಕಾಯುತ್ತಿರುವುದನ್ನು ಆರಿತು ಕೆಲವರು ನೀರು, ಆಹಾರ ನೀಡಿ ಮಾನವೀಯತೆ ಮರೆಯುತ್ತಿದ್ದಾರೆ. ಆದರೆ, ಇದು ಏನೇನು ಸಾಲದು. ಸಂಘ-ಸಂಸ್ಥೆಗಳು, ಸಮಾಜ ಸೇವಕರು ಈ ಮೂಕ ಪ್ರಾಣಿಗಳ ಜೀವ ಉಳಿಸಲು ಮುಂದಾಗಬೇಕಾಗಿದೆ.