ಕೋಟಿ ರೂ. ಯಂತ್ರ 1.47 ಲಕ್ಷಕ್ಕೆ ಮಾರಾಟ

ಮುಂಡರಗಿ: ತಾಲೂಕಿನ ಶಿಂಗಟಾಲೂರ ಗ್ರಾಮದ ಬಳಿಯ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಪಂಪ್​ಹೌಸ್ ಘಟಕದಲ್ಲಿ ನಿಷ್ಕ್ರಿಯಗೊಂಡ ಪಂಪಿಂಗ್ ಮಶಿನ್, ಯಂತ್ರೋಪಕರಣಗಳು, ಪೈಪ್, ಮೊದಲಾದ ಸಾಮಗ್ರಿಗಳನ್ನು ಮನಸೋ ಇಚ್ಛೆ ಮಾರಾಟ ಮಾಡುತ್ತಿರುವ ಸಣ್ಣ ನೀರಾವರಿ ಇಲಾಖೆಯ ಕ್ರಮ ಖಂಡಿಸಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಮೈಲಾರಪ್ಪ ಉದಂಡಿ ಮಾತನಾಡಿ, ‘2008ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಶಿಂಗಟಾಲೂರ, ಗಂಗಪೂರ, ಶೀರನಹಳ್ಳಿ ಗ್ರಾಮಗಳ 5 ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಕಲ್ಪಿಸಲು 1 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಆರಂಭಿಸಲಾಯಿತು. ಆದರೆ, ಕೆಲವೇ ದಿನಗಳಲ್ಲಿ ಪಂಪ್​ಹೌಸ್ ಘಟಕ ಬಂದ್ ಆಯಿತು. ಪಂಪ್​ಹೌಸ್ ಘಟಕ ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ ಈ ಭಾಗದ ರೈತರು ನದಿಯಿಂದ ನೇರವಾಗಿ ಪೈಪ್​ಲೈನ್ ಮಾಡಿಕೊಂಡು ನೀರಾವರಿ ಮಾಡಿಕೊಂಡರು. ಆಗ ದುರಸ್ತಿಯಲ್ಲಿದ್ದ ಘಟಕದ ಬಗೆಗೆ ಯಾರೊಬ್ಬರೂ ಗಮನ ಹರಿಸಿರಲಿಲ್ಲ ಎಂದರು.

ಹೋರಾಟಗಾರ ವೈ.ಎನ್. ಗೌಡರ ಮಾತನಾಡಿ, ಸಾರ್ವಜನಿಕರ ತೆರಿಗೆ ಹಣಕ್ಕೆ ಬೆಲೆ ಇಲ್ಲದಂತಾಗಿದೆ. ದುರಸ್ತಿಯಲ್ಲಿರುವ ಘಟಕವನ್ನು ಸರಿಪಡಿಸುವುದನ್ನು ಬಿಟ್ಟು ಯಾರ ಗಮನಕ್ಕೂ ತರದೇ ಟೆಂಡರ್ ಕರೆದು, 1 ಕೋಟಿ ರೂ. ಬೆಲೆಬಾಳುವ ಮೋಟರ್, ಪಂಪ್ ಮಶಿನ್ ಮೊದಲಾದ ಯಂತ್ರೋಪಕರಣವನ್ನು ಈಗ ಕೇವಲ 1.47ಲಕ್ಷ ರೂ.ಗೆ ಸಣ್ಣ ನೀರಾವರಿ ಇಲಾಖೆಯವರಿಗೆ ಟೆಂಡರ್​ಗೆ ನೀಡಿರುವುದು ಖಂಡನೀಯ’ ಎಂದರು.

ಶಿಂಗಟಾಲೂರ ಗ್ರಾಮಸ್ಥ ಫಕೀರೆಡ್ಡಿ ನೀರಲಗಿ ಮಾತನಾಡಿ, ಘಟಕದಲ್ಲಿದ್ದ 125ಎಚ್​ಪಿ, 115 ಎಚ್​ಪಿ ಮೋಟರ್, ಮೊದಲಾದವುಗಳನ್ನು ಕೇವಲ 1.47ಲಕ್ಷ ರೂ.ಗೆ ಟೆಂಡರ್ ಮಾಡಿರುವುದು ಯಾವ ನ್ಯಾಯ. ಇದು ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುವ ಕೆಲಸವಾಗಿದೆ ಎಂದರು.

ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಎಂ.ಎಫ್.ನದಾಫ್ ಪ್ರತಿಕ್ರಿಯಿಸಿ, ಮೇಲಾಧಿಕಾರಿಗಳ ಆದೇಶದಂತೆ ನಿಷ್ಕ್ರಿಯಗೊಂಡಿರುವ ಘಟಕದ ಯಂತ್ರೋಪಕರಣ, ಪೈಪ್, ಮೊದಲಾದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಘಟಕವನ್ನು ಮರು ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿವರೆಗೂ ಇಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು.

ಎಪಿಎಂಸಿ ಸದಸ್ಯ ಕೊಟ್ರೇಶ ಬೊಳ್ಳೊಳ್ಳಿ, ಪ್ರಭಯ್ಯ ಹಿರೇಮಠ, ಶಿವಪ್ಪ ಚಿಕ್ಕಣ್ಣವರ, ಸುಭಾಷಪ್ಪ ಬಾಗೇವಾಡಿ, ನಾಗರಾಜ ಮಲ್ಲಾಪೂರ, ಮುದುಕಪ್ಪ ಶೆಟ್ಟರ್, ಮಾದೇಶ ರಡ್ಡೇರ ಇತರರು ಇದ್ದರು.

Leave a Reply

Your email address will not be published. Required fields are marked *