ಕೋಟಿ ಕಳೆದುಕೊಂಡು ಮೈಸೂರು ಬಡವಾಯ್ತು

ಕನ್ನಡದ ವಿಷಯದಲ್ಲಿ ಅಚಲನಿಷ್ಠೆ, ಅಗಾಧ ಬದ್ಧತೆಯಿದ್ದ ರಾಜಶೇಖರ ಕೋಟಿಯವರು ಕನ್ನಡ ಪರವಾದ ಯಾವ ಹೋರಾಟವಾದರೂ ಹಾಜರಿದ್ದು ಅದು ದಡಮುಟ್ಟುವ ತನಕ ಅಲ್ಲೇ ಇದ್ದುಬಿಡುತ್ತಿದ್ದರು. ಅವರು ‘ಆಂದೋಲನ’ ಪತ್ರಿಕೆಯನ್ನು ಒಂದು ಉದ್ಯಮವಾಗಿ ಬೆಳೆಸಿದರು. ಆದರೆ ಅದಕ್ಕಿಂತಲೂ ಅದು ಒಂದು ‘ಆಂದೋಲನವೇ’ ಎಂಬುದನ್ನು ಹೆಜ್ಜೆಹೆಜ್ಜೆಗೂ ಎಚ್ಚರವಾಗಿದ್ದು ನಡೆಸಿಕೊಂಡು ಬಂದರು.

ನವೆಂಬರ್ 23ನೇ ತಾರೀಕು, ಗುರುವಾರ ಬೆಳಗ್ಗೆ ಸುಮಾರು ಎಂಟು ಗಂಟೆ ಸಮಯ-ಕಾರು ಚನ್ನಪಟ್ಟಣ ದಾಟಿತ್ತು. ಏರ್​ಪೋರ್ಟಿಗೆ ಹೋಗ್ತಾ ಇದ್ದೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಅಂತ ಆವತ್ತು ಒಮಾನ್ ದೇಶದ ಮಸ್ಕತ್​ಗೆ ಪ್ರಯಾಣ ಮಾಡಬೇಕಿತ್ತು. ಅದರ ಮರುದಿನವೇ ಮೈಸೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಸಮ್ಮೇಳನದ ದಿನಾಂಕ ನನಗೆ ಗೊತ್ತಾಗುವ ಮೊದಲೇ ನವೆಂಬರ್ 24ರಂದು ಮಸ್ಕತ್​ನಲ್ಲಿ, 25ರಂದು ಆ ದೇಶದ ಮತ್ತೊಂದು ನಗರ ಸೊಹಾರ್​ನಲ್ಲಿ ನಡೆಯುವ ಒಮಾನ್ ಕನ್ನಡಿಗರ ರಾಜ್ಯೋತ್ಸವ ಸಮಾರಂಭಗಳಿಗೆ ಹೋಗಲು ಒಪ್ಪಿಕೊಂಡುಬಿಟ್ಟಿದ್ದೆ. ಅಲ್ಲಿಯವರು ನನ್ನ ವೀಸಾ ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿಬಿಟ್ಟಿದ್ದರು. ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿದೆ, ನಾನು ಇಲ್ಲಿರಲೇಬೇಕು ಅನ್ನಿಸುತ್ತಿತ್ತು. ಸಮ್ಮೇಳನದಲ್ಲಿ ನಾನು ವಹಿಸಲೇಬೇಕಾದ ದೊಡ್ಡ ಪಾತ್ರ ಏನಿಲ್ಲವಾದರೂ ಅದೊಂದು ಕನ್ನಡದ ಜಾತ್ರೆ. ನನ್ನ ಕನ್ನಡದ ಇಷ್ಟಮಿತ್ರರೆಲ್ಲಾ ಅಲ್ಲಿ ಸಿಗುತ್ತಾರೆ. ಚಂದ್ರಶೇಖರ ಪಾಟೀಲರು ಸಮ್ಮೇಳನಾಧ್ಯಕ್ಷರು ಅಂದಮೇಲೆ ಅಲ್ಲೊಂದಿಷ್ಟು ಕಲಹ, ಕುಚೋದ್ಯ ಇವೆಲ್ಲಾ ಇದ್ದೇ ಇರುತ್ತವೆ. ಆದರೆ ಒಮಾನ್ ಕನ್ನಡಿಗರಿಗೆ ಆ ಹಂತದಲ್ಲಿ ಕೈಕೊಡುವಂತಿರಲಿಲ್ಲ. ಸರಿ, ಅಲ್ಲಿ ಮೂರೇ ದಿನ ಇದ್ದು ಸಮ್ಮೇಳನದ ಕೊನೆದಿನಕ್ಕೆ ಬಂದುಬಿಟ್ಟರಾಯಿತು ಅಂದುಕೊಂಡು ಹೊರಟುಬಿಟ್ಟೆ.

ಮೊಬೈಲು ‘ಪಿಂಗ್’ ಅಂತು. ವಾಟ್ಸಾಪ್ ತೆಗೆದೆ. ನಮ್ಮ ಜೈನಹಳ್ಳಿ ಸತ್ಯನಾರಾಯಣಗೌಡರು ಕಳಿಸಿದ್ದ ಸುದ್ದಿ- ‘ರಾಜಶೇಖರ ಕೋಟಿಯವರು ಇನ್ನಿಲ್ಲ’. ಎದೆ ಧಸಕ್ಕೆಂದಿತು. ಇದು ತಪು್ಪಸುದ್ದಿಯೇ ಆಗಿರಲಿ ಅಂತ ಹಾರೈಸಿದೆ. ಹೊಟ್ಟೆಯೊಳಗೊಂದು ಬಗೆ ಸಂಕಟ ಶುರುವಾಯಿತು. ಡ್ರೖೆವರ್​ಗೆ ‘ಸ್ವಲ್ಪ ಕಾರ್ ನಿಲ್ಸಪ್ಪ’ ಅಂದೆ. ಮೈಸೂರಿನ ಗೆಳೆಯರಿಗೆ ಫೋನುಮಾಡಿ ‘ಸುದ್ದಿ ನಿಜವಾ?’ ಅಂದೆ. ‘ಹೌದು ಸಾರ್, ನಿಜ. ಕೋಟಿಯವರು ತೀರಿಕೊಂಡಿದ್ದಾರೆ. ನಿನ್ನೆ ಬೆಂಗಳೂರಿಗೆ ಹೋಗಿ ಅಲ್ಲೇ ಉಳಕೊಂಡಿದ್ದರಂತೆ. ಬೆಳಗಿನ ಜಾವ ಹಾರ್ಟ್ ಅಟ್ಯಾಕ್ ಆಯ್ತಂತೆ. ಮೈಸೂರಿಗೆ, ಪತ್ರಿಕೋದ್ಯಮಕ್ಕೆ, ಕನ್ನಡಕ್ಕೆ ಎಂಥ ಲಾಸ್ ಅಲ್ವಾ ಸಾರ್!’ ಅಂದರು. ಹೊಟ್ಟೆ ಸಂಕಟ ಹೆಚ್ಚಾಯಿತು. ಡ್ರೖೆವರ್​ಗೆ, ‘ರಾಜಶೇಖರ ಕೋಟಿಯವರು ತೀರಿಕೊಂಡ್ರಂತೆ ಕಣಪ್ಪಾ’ ಅಂದೆ. ‘ಅದೇ, ಆಂದೋಲನ ಪೇಪರ್ ಬರುತ್ತಲ್ಲ, ಅವರಲ್ವ ಸಾರ್? ಸಕ್ಕತ್ ದೊಡ್ಡ ಮನುಷ್ಯರಂತೆ ಸಾರ್. ನಮ್ಮಂತಾ ಬಡವು›-ಬಗ್ಗರು ಅಂದ್ರೆ ತುಂಬಾ ಪ್ರೀತಿಯಂತೆ. ನಾನೂ ಒಂದ್ ಟೈಮ್ ಎರಡ್ ಟೈಮ್ ನೋಡಿದ್ದೀನಿ ಅವುರ್ನ! ಯಾವಾಗ್ಲೂ ಒಳ್ಳೆಯವರಿಗೇ ಸಾರ್ ಹಿಂಗಾಗೋದು…’ ಹಾಗಂತ ಅವನಿಗೆ ತಿಳಿದದ್ದನ್ನು ಹೇಳಿದ. ನಾನು ಮೈಸೂರಿಗೆ ವಾಪಸ್ ಬರುವ ಹಾಗಿರಲಿಲ್ಲ. ಹನ್ನೊಂದೂವರೆ ಗಂಟೆಗೆ ಬೆಂಗಳೂರು ಏರ್​ಪೋರ್ಟ್​ನಲ್ಲಿರಬೇಕಾಗಿತ್ತು. ದಾರಿಯುದ್ದಕ್ಕೂ ಮೈಸೂರಿನ ಗೆಳೆಯರಿಗೆ ಫೋನು ಮಾಡುತ್ತಾ ರಾಜಶೇಖರ ಕೋಟಿಯವರ ಬಗ್ಗೆ ಬಹಳಷ್ಟು ಮಾತಾಡುತ್ತಾ ಹೋದೆ. ‘ಕೋಟಿ ಕಳಕೊಂಡು ಮೈಸೂರು ಬಡವಾಗಿದೆ ಅನ್ಸುತ್ತೆ ಅಲ್ವಾ?’ ಅಂದೆ ಒಬ್ಬ ಗೆಳೆಯರೊಂದಿಗೆ. ‘ಹೌದು ಸಾರ್, ಕೋಟಿ ಸಂಪಾದಿಸಿದ್ದೂ ಮೈಸೂರೇ, ಕೋಟಿ ಕಳಕೊಂಡಿದ್ದೂ ಮೈಸೂರೇ! ಮೈಸೂರು ಬಡವಾಯ್ತು ಅನ್ನಿಸ್ತಾ ಇದೆ ಸಾರ್!’ ಅಂದರು.

ಕೋಟಿಯವರು ಮೂಲತಃ ಮೈಸೂರಿನವರಲ್ಲ. ಗದಗ ಜಿಲ್ಲೆಯ ಹುಯಿಲಗೋಳದವರು. ಜಮೀನ್ದಾರ್ ಕುಟುಂಬದಲ್ಲಿ ಜನಿಸಿದವರು. ಗದಗದಲ್ಲಿ ವಿದ್ಯಾಭ್ಯಾಸ ಮುಗಿಸಿ ಚಿಕ್ಕ ವಯಸ್ಸಿನಲ್ಲೇ ಪತ್ರಿಕೋದ್ಯಮದಿಂದ ಆಕರ್ಷಿತರಾದರು. ಹಾಗಾಗಿ ಅಲ್ಲಿಂದ ಧಾರವಾಡಕ್ಕೆ ಬಂದು ಅಲ್ಲಿ ಪಾಟೀಲ ಪುಟ್ಟಪ್ಪನವರ ‘ವಿಶ್ವವಾಣಿ’ ಮತ್ತು ‘ಪ್ರಪಂಚ’ ಪತ್ರಿಕೆಗಳಲ್ಲಿ ಸ್ವಲ್ಪಕಾಲ ಕೆಲಸ ಮಾಡಿದರು. ಆಗಲೇ ಅವರು ಸಮಾಜವಾದಿ ಚಳವಳಿಯಿಂದ ಪ್ರಭಾವಿತರಾಗಿ 1972ರಲ್ಲಿ ‘ಆಂದೋಲನ’ ಪತ್ರಿಕೆ ಆರಂಭಿಸಿದರು. ಸಮಾಜವಾದಿ ಚಳವಳಿ ಸೇರಿದ್ದರಿಂದಾಗಿಯೇ ಅವರಿಗೆ ಶಾಂತವೇರಿ ಗೋಪಾಲಗೌಡ, ಜೆ.ಎಚ್. ಪಟೇಲ್, ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಸಾಹಿತಿ ಪೂರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ, ರಾಮದಾಸ್, ದೇವನೂರ ಮಹಾದೇವ ಮುಂತಾದವರ ಸಂಪರ್ಕ ಲಭ್ಯವಾಯಿತು.

ಧಾರವಾಡದಲ್ಲಿ ಕೆಲವು ಕಾಲವಿದ್ದ ಕೋಟಿಯವರು ಚಳವಳಿ, ಹೋರಾಟಗಳನ್ನು ಧ್ಯೇಯವಾಗಿಟ್ಟುಕೊಂಡೇ ಮೈಸೂರಿಗೂ ಬಂದರು. ಕೈಯಲ್ಲಿ ದುಡ್ಡಿನ ಗಂಟಿಟ್ಟುಕೊಂಡು ಬರಲಿಲ್ಲ ರಾಜಶೇಖರ ಕೋಟಿ. ಅವರ ಕೈಯಲ್ಲಿದ್ದುದು ‘ಆಂದೋಲನ’ ಪತ್ರಿಕೆಯ ಟೈಟಲ್ ಮಾತ್ರ.

ಒಂದು ಸಲ ಬಾಯಲ್ಲಿ ‘ಆಂದೋಲನ’ ಅಂದುಕೊಂಡು ನೋಡಿ. ಸಾಮಾನ್ಯ ಜನರ ಬಾಯಲ್ಲಿ ಸುಲಭಕ್ಕೆ ತಿರುಗುವ ಹೆಸರಲ್ಲ ಅದು. ಅಂಥದೊಂದು ಹೆಸರಿಟ್ಟುಕೊಂಡು ಈ ಪತ್ರಿಕೆಯನ್ನು ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಸಾಮಾನ್ಯಾತಿಸಾಮಾನ್ಯರ ಮನೆ-ಮನಸ್ಸುಗಳನ್ನು ಮುಟ್ಟಿದವರು ರಾಜಶೇಖರ ಕೋಟಿ. ಆ ಪತ್ರಿಕೆಯ ಆರಂಭದ ದಿನಗಳನ್ನು ನಾನೂ ಕಂಡಿದ್ದೇನೆ. ಆಗ ಮೈಸೂರಿನಲ್ಲಿ ನಾನಿನ್ನೂ ಕಾಲೇಜು ವಿದ್ಯಾರ್ಥಿ. ಸೈಕಲ್ ಕ್ಯಾರಿಯರ್​ನಲ್ಲಿ ಪತ್ರಿಕೆಯ ಬಂಡಲ್ ಕಟ್ಟಿಕೊಂಡು ಪೆಡಲು ಒತ್ತುತ್ತಿದ್ದ ಕೋಟಿಯವರನ್ನು ನೋಡಿದ್ದೇನೆ. ತೆಳು ಶರೀರ, ಸಾಧಾರಣ ಬಟ್ಟೆ-ಬರೆ, ಮೊಕದ ಮೇಲೆ ದಟ್ಟವಾಗಿದ್ದ ಕಪು್ಪಗಡ್ಡ, ಬಡತನದ ಆಕಾರರೂಪದಂತೆ ಕಾಣುತ್ತಿದ್ದರು ಕೋಟಿ. ಆ ಬಡತನವನ್ನು ತಾವಾಗಿಯೇ ತಂದುಕೊಂಡು ಆಸ್ವಾದಿಸುತ್ತಿರುವವರಂತೆಯೂ ತೋರುತ್ತಿತ್ತು. ನಮ್ಮ ಮೈಸೂರಿನ ಸರಸ್ವತಿಪುರಂ ಫಸ್ಟ್​ಮೇನ್​ನಲ್ಲಿತ್ತು ಅವರ ಪ್ರೆಸ್ಸು. ಅನಂತರ ಕೆಲವು ದಿನ ಒಂಟಿಕೊಪ್ಪಲಿನಲ್ಲೂ ಇತ್ತು.

ಅವರ ಪ್ರೆಸ್ಸು ಒಂಟಿಕೊಪ್ಪಲಿನಲ್ಲಿದ್ದಾಗ ನನ್ನ ಗೆಳೆಯ ಅ.ಕೆ. ಪ್ರಕಾಶ ಅಲ್ಲಿ ಕೆಲಸ ಮಾಡುತ್ತಿದ್ದ. ಪ್ರಕಾಶ ಆಗಷ್ಟೇ ಕನ್ನಡ ಎಂ.ಎ. ಮುಗಿಸಿದ್ದ. ವಿದ್ಯಾರ್ಥಿ ಕವಿಯಾಗಿಯೂ, ಲೇಖಕನಾಗಿಯೂ ಒಳ್ಳೆಯ ಹೆಸರು ಮಾಡಿದ್ದ ಪ್ರಕಾಶನಿಗೆ ನೂರೈವತ್ತೋ, ಇನ್ನೂರೋ ರೂಪಾಯಿಗಳ ಸಂಬಳ ಆಂದೋಲನ ಪ್ರೆಸ್ಸಿನಲ್ಲಿ. ಆದರೆ ಕೋಟಿಯವರಿಗೆ ಮೂರ್ನಾಲ್ಕು ತಿಂಗಳು ಸಂಬಳ ಕೊಡುವುದಕ್ಕೇ ಸಾಧ್ಯವಾಗುತ್ತಿರಲಿಲ್ಲ. ಆಗ ಪ್ರಕಾಶ, ‘ಕೋಟಿಯವರು ನನಗಿನ್ನೂ ಸಂಬಳಾನೇ ಕೊಟ್ಟಿಲ್ಲ’ ಅಂತ ಹಲ್ಲಲ್ಲು ಕಿರಿಯುತ್ತಿದ್ದ. ಆಗ ನಾವು, ‘ನೀನು ಸ್ವಲ್ಪ ಜಗ್ಗಿಸಿ ಕೇಳಬೇಕು ಕಣೋ!’ ಅನ್ನುತ್ತಿದ್ದೆವು. ಅವನು ‘ಕೇಳಿದೆ ಕಣೊ. ಅವುರತ್ರ ಇದ್ರೆ ತಾನೇ ನನಗೆ ಕೊಡೋದು. ಅವರೇ ಮೊಳೆ ತರೋಕೆ, ಇಂಕು ತರೋಕೆ, ಪೇಪರು ತರೋಕೆ ಒದ್ದಾಡ್ತಾ ಇರ್ತಾರೆ. ಜಗ್ಗಿಸಿ ಕೇಳು ಅಂದ್ರೆ ನಾನೆಂಗೆ ಕೇಳಲೋ?!’ ಅಂತಿದ್ದ. ‘ಕೋಟಿ ತುಂಬಾ ಒಳ್ಳೆಯ ಮನುಷ್ಯ. ನಾನು ಕೇಳೋಕೆ ಮೊದಲೇ- ‘ಪ್ರಕಾಶ್, ದಯವಿಟ್ಟು ಬೇಜಾರ್ ಮಾಡ್ಕೋಬೇಡಿಪ್ಪ. ಈ ತಿಂಗಳು ನಿಮಗೆ ಸಂಬಳ ಕೊಡೋಕ್ಕಾಗ್ತಾ ಇಲ್ಲ. ಮುಂದಿನ ತಿಂಗಳು ಹೇಗಾದ್ರೂ ಮಾಡಿ ಕೊಡ್ತೀನ್ರಪ್ಪಾ. ನೀವು ದುಡಿದ ದುಡ್ಡು ನಿಮ್ದು ಕಣಪ್ಪ. ಕೊಡ್ತೀನಿ, ಕೊಡ್ತೀನಿ. ಇದೊಂದು ತಿಂಗ್ಳು ಅನುಸರಿಸಿಕೊಳ್ಳಿ’- ಅಂತ ಅಂದುಬಿಡ್ತಾರೆ. ನಾನೇನು ಮಾಡ್ಲೋ?!’ ಅಂತಲೂ ಅವನೇ ಹೇಳ್ತಾ ಇದ್ದ. ಅದು ಕೋಟಿಯವರ ಆಗಿನ ಸ್ಥಿತಿ.

ಅನಂತರ 1981ರಲ್ಲಿ ಕೋಟಿಯವರ ಓಡಾಟಗಳನ್ನು ಸ್ವಲ್ಪ ಹತ್ತಿರದಿಂದ ನೋಡುವ ಅವಕಾಶ ಬಂತು. ಆಗ ಗೋಕಾಕ್ ವರದಿ ಚಳವಳಿಯ ಸಮಯ. ಕೋಟಿಯವರು ಮತ್ತು ಅವರ ‘ಆಂದೋಲನ’ ಕನ್ನಡ ಚಳವಳಿಯ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ಆಗ ಲಂಕೇಶ್ ಪತ್ರಿಕೆಯಲ್ಲಿ ಕೋಟಿಯವರದ್ದೊಂದು ಫೋಟೋ ಹಾಕಿ ‘ಕೋಟಿ ಮನಸ್ಸುಗಳು ಅರಳಲಿ’ ಅಂತ ಶೀರ್ಷಿಕೆ ಕೊಟ್ಟು ಕನ್ನಡಪರ ಚಳವಳಿಗಳಿಗೆ ಕೋಟಿಯವರಂಥವರು ಎಷ್ಟು ಮುಖ್ಯ ಅಂತ ಬರೆದಿದ್ದರು.

ಉತ್ತರ ಕರ್ನಾಟಕದಿಂದ ಮೈಸೂರಿಗೆ ಬಂದ ಕೋಟಿಯವರು ಆಮೇಲಾಮೇಲೆ ಮೈಸೂರಿನವರೇ ಆಗಿಬಿಟ್ಟರು ಮಾತ್ರವಲ್ಲ, ಮೈಸೂರಿನ ದನಿಯಾದರು, ಸಾಕ್ಷಿಪ್ರಜ್ಞೆಯಾದರು. ತೆವಳಿಕೊಂಡು, ಕುಂಟಿಕೊಂಡು ನಡೆಯುತ್ತಿದ್ದ ಆಂದೋಲನ ತನ್ನ ಕಾಲಮೇಲೆ ತಾನು ನಿಂತಿತು. ಓಡಾಡಲು ಶುರುಮಾಡಿತು.

ಆಂದೋಲನಕ್ಕೊಂದು ನಿಲುವಿತ್ತು, ಒಲವಿತ್ತು, ಬದ್ಧತೆಯಿತ್ತು. ಅದು ದಮನಿತರ, ಶೋಷಿತರ, ರೈತರ ಪರವಾಗಿ ದೊಡ್ಡ ದನಿಯಾಯಿತು. ಕನ್ನಡಕ್ಕಂತೂ ಒಂದು ದೊಡ್ಡ ಆಧಾರಸ್ತಂಭವಾಯಿತು. ಹಲವಾರು ಪತ್ರಕರ್ತರನ್ನು ತಯಾರಿಸುವ ಕಮ್ಮಟಶಾಲೆಯಾಯಿತು. ಇಡೀ ಭಾರತದಲ್ಲಿ ಅತಿಹೆಚ್ಚು ಪ್ರಸಾರವುಳ್ಳ ಜಿಲ್ಲಾಮಟ್ಟದ ಪತ್ರಿಕೆ ಎಂಬ ಹೆಗ್ಗಳಿಕೆಯನ್ನೂ ಸ್ಥಾಪಿಸಿತು. ಮೈಸೂರಿನಲ್ಲಿ ಯಾವ ಸಾಹಿತಿ, ಪ್ರಜ್ಞಾವಂತರ ಮನೆಗೆ ಹೋದರೂ ಆಂದೋಲನ ಇದ್ದೇ ಇರುತ್ತಿತ್ತು. ಮಾತ್ರವಲ್ಲ, ಹಳ್ಳಿಯ ಟೀ ಅಂಗಡಿಗಳಲ್ಲೂ, ಗುಡಿಸಲು ಮನೆಗಳಲ್ಲೂ ಆಂದೋಲನ ಜಾಗಮಾಡಿಕೊಂಡಿತ್ತು.

ಪತ್ರಿಕೆ ಬೆಳೆದಂತೆ ಕೋಟಿ ಶ್ರೀಮಂತರೂ ಆದರು. ತಾವೇ ಜಪಾನ್, ಸಿಂಗಪೂರ್, ಕೊರಿಯಾ ಮುಂತಾದ ದೇಶಗಳಿಗೆ ಹೋಗಿ ಅತ್ಯಾಧುನಿಕವಾದ ಮುದ್ರಣಯಂತ್ರಗಳನ್ನು ತಂದು ಸ್ಥಾಪಿಸಿದರು. ಚಂದದ ಮನೆ ಕಟ್ಟಿಸಿದರು. ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಓಡಾಡುತ್ತಿದ್ದರು. ಆದರೂ ತುತ್ತು ಅನ್ನಕ್ಕೂ ತತ್ವಾರವಾಗಿದ್ದ ಬಡತನದ ನೆನಪುಗಳನ್ನು ಜೋಪಾನವಾಗಿ ಕಾಪಿಟ್ಟುಕೊಂಡರು. ಹೊರಗೆ ಐಷಾರಾಮಿ ಬದುಕು ನಡೆಸುತ್ತಿದ್ದರೂ ಎಲ್ಲರ ಜತೆಗೂ ಸರಳಾತಿಸರಳರಾಗಿ ಬೆರೆಯುತ್ತಿದ್ದರು. ಎಂಥ ಬಡವನೂ, ದಿಕ್ಕೆಟ್ಟವನೂ ಅವರ ಮನೆಗೆ ಹೋಗಿ ಅವರೊಂದಿಗೆ ಸರಿಸಮಾನವಾಗಿ ಕೂತು ತನ್ನ ಕಷ್ಟ-ಸುಖ ಹೇಳಿಕೊಳ್ಳಬಹುದಿತ್ತು. ಶ್ರೀಮಂತರಿಗಿಂತ ಸಾಮಾನ್ಯರಿಗೆ, ‘ಇಂಗ್ಲಿಷಿನವರಿ’ಗಿಂತ ಕನ್ನಡಿಗರಿಗೆ ಅವರಲ್ಲಿ ಗೌರವವಿತ್ತು, ಮನ್ನಣೆಯಿತ್ತು.

ರಾಜಶೇಖರ ಕೋಟಿಯವರು ಆರಂಭದಲ್ಲಿ ಭಾಷಣಕಾರರಾಗಿರಲಿಲ್ಲ. ಯಾವ ಸಭೆಗೆ ಹೋದರೂ ಎರಡು ಮೂರು ನಿಮಿಷದಲ್ಲೇ ಮಾತು ಮುಗಿಸುತ್ತಿದ್ದರು. ಆಮೇಲಾಮೇಲೆ ಅವರು ಒಳ್ಳೆಯ ಭಾಷಣಕಾರರಾಗಿಬಿಟ್ಟರು. ಅವರು ಜಪಾನ್, ಕೊರಿಯಾ, ಸಿಂಗಪೂರ್ ಮುಂತಾದ ದೇಶಗಳನ್ನು ಸುತ್ತಾಡಿ ಬಂದ ಮೇಲೆ ಆ ದೇಶದವರ ಶ್ರದ್ಧೆ, ಕರ್ತವ್ಯಪ್ರಜ್ಞೆ, ಸ್ವಚ್ಛ ಪರಿಸರದ ಬಗ್ಗೆ ತುಂಬಾ ತುಂಬಾ ಮಾತಾಡುತ್ತಿದ್ದರು. ‘ಅವರಿಗೆ ಸಾಧ್ಯ ಇರೋದು ನಮಗ ಸಾಧ್ಯವಿಲ್ಲ ಯಾಕ?’ ಅಂತ ಅದೊಂದು ದುಗುಡದಿಂದ, ದುಃಖದಿಂದ ಪ್ರಶ್ನಿಸುತ್ತಿದ್ದರು. ‘ನಮ್ಮ ದೇಶಾ ದೊಡ್ಡದು, ನಾವು ದೊಡ್ಡವರು ಅಂತ ಬೀಗಿದರ ಪ್ರಯೋಜನ ಆಗೂದಿಲ್ಲ. ನಾವು ಅವರ ಹಾಂಗ ದುಡಿದು ದೇಶಾನ ಕಟ್ಟಬೇಕ್ರಪಾ. ದುಡಿಯದೆ ಶ್ರೀಮಂತರಾಗಬೇಕನ್ನೂದು ಪಾಪ. ಬರೀ ಈ ಜಾತಿ-ಮತ-ಪಂಥ ಅಂತ ಕಾದಾಡಿಕೊಂಡೇ ನಮ್ಮ ಶಕ್ತೀನೆಲ್ಲ ಪೋಲುಮಾಡ್ತಾ ಅದೀವಿ. ಹಿಂಗಾದ್ರ ಹೆಂಗಪಾ ಅನ್ನಿಸ್ತದ ನನಗ. ಪ್ರಾಮಾಣಿಕತೆಯಿಂದ ಕಟ್ಟದ ದೇಶ, ದೇಶ ಅಲ್ರಪಾ’ ಅಂತ ಪದೇಪದೆ ಹೇಳುತ್ತಿದ್ದರು.

ಕನ್ನಡದ ವಿಷಯಕ್ಕೆ ಬಂದರಂತೂ ಅವರದು ಅಚಲನಿಷ್ಠೆ. ಅಗಾಧ ಬದ್ಧತೆ. ಕನ್ನಡ ಪರವಾದ ಯಾವ ಹೋರಾಟ ಅಂದರೂ ಅಲ್ಲಿ ಕೋಟಿ ಹಾಜರಿರುತ್ತಿದ್ದರು. ಅದು ದಡ ಮುಟ್ಟುವ ತನಕ ಅಲ್ಲೇ ಇದ್ದುಬಿಡುತ್ತಿದ್ದರು.

ಇದೆಲ್ಲದಕ್ಕಿಂತ ಕೋಟಿಯವರು ನನಗೆ ಇಷ್ಟವಾಗುತ್ತಿದ್ದುದು ಅವರ ಭಾಷೆ ಮತ್ತು ನಡವಳಿಕೆಗಳಲ್ಲಿದ್ದ ಸಂಯಮಕ್ಕೆ. ಯಾಕೆಂದರೆ ಮಾತು ಸಂಯಮ ಕಳೆದುಕೊಂಡರೆ ಜಗಳವನ್ನಷ್ಟೇ ಹುಟ್ಟಿಸುತ್ತದೆ. ಜಗಳ ಅನ್ನುವುದು ಸಭ್ಯತೆಯ ಗಡಿಯಿಂದಾಚೆ ಹೋಗುತ್ತಿದ್ದಂತೆಯೇ ಆಗಬೇಕಾದ ಕೆಲಸ ಆಗುವುದಿಲ್ಲ. ಆಗುವುದು ಜಗಳ ಮಾತ್ರವೇ! ಅದರಿಂದ ಎಂತೆಂಥ ಅವಿವೇಕಿಗಳೂ ನಾಯಕರಾಗಿಬಿಡುವ ಅಪಾಯವಿರುತ್ತದೆ. ಈ ವಿಷಯದಲ್ಲಿ ಸಾಮಾನ್ಯರಿರಲಿ, ನಮ್ಮ ಎಷ್ಟೋ ಪ್ರಜ್ಞಾವಂತರೆನ್ನಿಸಿಕೊಂಡವರೂ ಎಚ್ಚರ ತಪು್ಪತ್ತಿದ್ದಾರೆ. ನಾನು ‘ಜಗಳಗಂಟ’ ಎನ್ನುವುದನ್ನೇ ಒಂದು ದೊಡ್ಡ ಗುಣ ಅಂತ ತುತ್ತೂರಿ ಊದುವ ‘ಪ್ರಜ್ಞಾವಂತ’ರಿದ್ದಾರೆ ನಮ್ಮಲ್ಲಿ.

ನಾನು ಈ ವಿಷಯಕ್ಕೇ ಯಾಕಿಷ್ಟು ಒತ್ತುಕೊಟ್ಟು ಬರೆಯುತ್ತಿದ್ದೇನೆಂದರೆ, ಮಾತು ನಾಗರಿಕ ಜಗತ್ತಿನ ಬಹುದೊಡ್ಡ ಆಸ್ತಿ. ಅದಕ್ಕೆ ಎದುರಾಳಿಯನ್ನು ಒಪ್ಪಿಸುವ ಮತ್ತು ಒಲಿಸಿಕೊಳ್ಳುವ ಪ್ರಬಲವಾದ ಶಕ್ತಿ ಇರುತ್ತದೆ. ಮನುಷ್ಯಕುಲ ಆರಂಭದ ಎಷ್ಟೋ ವರ್ಷಗಳು ಹೊಡೆದಾಡಿ ಬಡಿದಾಡಿಕೊಂಡು ಬಂದು, ಮತ್ತೆಷ್ಟೋ ವರ್ಷ ಕಾದಾಡಿ, ಕಲಹ ಮಾಡಿಕೊಂಡು ಬಂದು ಈಗ ಮಾತಾಡುವ, ರ್ಚಚಿಸುವ, ವಾದಮಾಡುವ ಸ್ಥಿತಿಗೆ ವಿಕಾಸಗೊಂಡಿದೆ. ಮಾತು, ಚರ್ಚೆ, ವಾದಗಳನ್ನು ನಡೆಸುವುದಕ್ಕೆ ಅಗಾಧ ಸಂಯಮ ಬೇಕು. ವ್ಯಕ್ತಿತ್ವದಲ್ಲೊಂದು ಶೀಲ ಇರಬೇಕು. ಇದು ಬಹುತ್ವದ ಜಗತ್ತು. ನನಗೆ ಇಷ್ಟವಿಲ್ಲದಿರುವ, ನಾನು ಒಪ್ಪದಿರುವ ಹಲವಾರು ಸಂಗತಿಗಳು, ನಂಬಿಕೆಗಳು, ನಡವಳಿಕೆಗಳು ಈ ಜಗತ್ತಿನಲ್ಲಿರುತ್ತವೆ. ಜಗತ್ತು ಸದಾಕಾಲ ಈ ವೈರುಧ್ಧ್ಯಳ ಸಂಘರ್ಷದಿಂದಲೇ ನಡೆಯುತ್ತದೆಂಬುದನ್ನು ನಾವು ಒಪ್ಪಿಕೊಳ್ಳಬೇಕು. ಈವತ್ತು ಎಡ, ಬಲ ಅಂತ ವಾದಿಸುವವರಿಗೆ ತಮಗೆ ವಿರುದ್ಧವೆನಿಸುವಂಥದು ಈ ಜಗತ್ತಿನಲ್ಲಿರುತ್ತದೆ, ಇದು ತನ್ನ ಮೂಗಿನ ನೇರಕ್ಕೆ ನಡೆಯುವಷ್ಟು ಸರಳವಾದುದಲ್ಲ ಎಂಬ ಪ್ರಬುದ್ಧತೆ ಬೇಕು. ಒಂದು ಗುಂಪಿನವರು ತಮ್ಮ ಅರಿವುಗೇಡಿ ಮಾತುಗಳಿಂದ, ನಡವಳಿಕೆಗಳಿಂದ, ಹಾವಭಾವಗಳಿಂದ ಇನ್ನೊಂದು ಗುಂಪನ್ನು ಕೆರಳಿಸುವುದರಲ್ಲೇ ಆನಂದಪಡುವುದಾದರೆ ಅದರಿಂದ ಎರಡೂ ಗುಂಪುಗಳಲ್ಲಿ ಅರಿವುಗೇಡಿಗಳ ಪಡೆ ಬೆಳೆಯುತ್ತದೆ. ಜನರು ಸಣ್ಣಸಣ್ಣ ವಿಷಯಗಳಿಗೆಲ್ಲಾ ಕೆರಳುತ್ತಾರೆ. ವಿವೇಕಹೀನರು ಕೆರಳಿದರೆ ವಿವೇಕಿಗಳು ಅಸಹಾಯಕರಂತೆ ಕಾಣುತ್ತಾರೆ. ಇಂಥದೊಂದು ಸ್ಥಿತಿಗೆ ನಮ್ಮ ಸಮಾಜವನ್ನು ಸಂಪ್ರದಾಯವಾದಿಗಳಾಗಲೀ, ಬುದ್ಧಿಜೀವಿಗಳಾಗಲೀ ದೂಡಬಾರದು. ಇದು ನನ್ನ ನಿಲುವು, ಆಸೆ. ಕೋಟಿಯವರು ತಮ್ಮ ನಂಬಿಕೆಗಳನ್ನು, ಬದ್ಧತೆಗಳನ್ನು ಅತ್ಯಂತ ದೃಢವಾಗಿ ಇಟ್ಟುಕೊಂಡೇ ಎಲ್ಲರೊಂದಿಗೂ ಒಡನಾಡಬಲ್ಲವರಾಗಿದ್ದರು. ಇಂಥದೊಂದು ಗುಣಕ್ಕೆ ಮಾದರಿಯಾಗಿ ಅವರು ನಮ್ಮೊಂದಿಗೆ ಇನ್ನಷ್ಟು ಕಾಲ ಬದುಕಿರಬೇಕಿತ್ತು ಅನಿಸುತ್ತಿದೆ. ಆದ್ದರಿಂದಲೇ ಅವರ ಸಾವು ನಮಗೆ, ಮೈಸೂರಿನವರಿಗೆ ದೊಡ್ಡ ನಷ್ಟ ಅನ್ನಿಸುತ್ತಿದೆ.

ಶಿಕ್ಷಣ, ಆರೋಗ್ಯ, ಪತ್ರಿಕೆ ಈ ಮುಂತಾದವು ಈಗ ಸೇವೆ, ನಿಷ್ಠೆ, ಶ್ರದ್ಧೆ ಎನ್ನುವುದಕ್ಕಿಂತಲೂ ಉದ್ಯಮಗಳಾಗಿಬಿಟ್ಟಿವೆ. ಇವೆಲ್ಲವೂ ಉದ್ಯಮವೇ ಆಗುವುದು ಅನಿವಾರ್ಯ ಎನ್ನುವಂಥ ಸ್ಥಿತಿ ಇದ್ದರೂ ಅದರ ಮೂಲ ಅಸ್ತಿಭಾರವಾಗಬೇಕಾದದ್ದು ಸೇವೆ, ಬದ್ಧತೆ, ನಿಷ್ಠೆ. ಕೋಟಿಯವರು ‘ಆಂದೋಲನ’ ಪತ್ರಿಕೆಯನ್ನು ಒಂದು ಉದ್ಯಮವಾಗಿ ಬೆಳೆಸಿದರು. ಆದರೆ ಅದಕ್ಕಿಂತಲೂ ಅದು ಒಂದು ‘ಆಂದೋಲನವೇ’ ಎಂಬುದನ್ನು ಹೆಜ್ಜೆಹೆಜ್ಜೆಗೂ ಎಚ್ಚರವಾಗಿದ್ದು ನಡೆಸಿಕೊಂಡು ಬಂದರು. ಮೈಸೂರು ಸರಳಾತಿಸರಳನಾದ ಒಬ್ಬ ವಿಐಪಿಯನ್ನು, ಒಡಲಲ್ಲಿ ಕಿಡಿಯಿಟ್ಟುಕೊಂಡಿದ್ದ ಒಂದು ಹಿಮಗಡ್ಡೆಯನ್ನು, ಸೇವಾಬದ್ಧತೆಯಿದ್ದ ಓರ್ವ ಉದ್ಯಮಿಯನ್ನು, ಪ್ರೀತಿಯನ್ನೇ ಅಂತಃಕರಣವಾಗುಳ್ಳ ಓರ್ವ ವಿಚಾರವಾದಿಯನ್ನು, ಬಡವರ ಶೋಷಿತರ ಪರವಾಗಿಯೇ ಚಿಂತಿಸುವ ಓರ್ವ ಶ್ರೀಮಂತನನ್ನು ಕಳೆದುಕೊಂಡಿದೆ. ಈಗ ಅವರ ಮಗ ರವಿ ಕೋಟಿ ಆಂದೋಲನವನ್ನು ಮುನ್ನಡೆಸುತ್ತಿದ್ದಾರೆ. ಅಪ್ಪನ ಆದರ್ಶದಲ್ಲೇ ಬೆಳೆದ ಮಗ ಜಾಡುತಪ್ಪದೆ ಮುನ್ನಡೆಸುತ್ತಾನೆಂಬ ವಿಶ್ವಾಸವಿದೆ. ಒಟ್ಟಿನಲ್ಲಿ, ಕೋಟಿ ಕಳೆದುಕೊಂಡು ಮೈಸೂರು ಬಡವಾಗಿದೆ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *