ಕೋಚಿಮುಲ್ ಸಾರಥಿಯಾಗಲು ಪೈಪೋಟಿ

ಕೋಲಾರ: ಮೇ 25ರಂದು ನಡೆಯಲಿರುವ ಕೋಚಿಮುಲ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಅವಿಭಜಿತ ಜಿಲ್ಲೆಯ 7 ನಿರ್ದೇಶಕರು ಆಕಾಂಕ್ಷಿಗಳಾಗಿದ್ದಾರೆ.

ಗೆದ್ದಿರುವ 13 ನಿರ್ದೇಶಕರಲ್ಲಿ 11 ಮಂದಿ ಕಾಂಗ್ರೆಸ್ಸಿಗರಾಗಿದ್ದು, ಅಧಿಕಾರಕ್ಕಾಗಿ ಪಕ್ಷದ ಶಾಸಕರು, ಸಂಸದರು ಹಾಗೂ ಮುಖಂಡರ ನೆರವು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.

ಮಾಲೂರಿನ ಶಾಸಕ ಕೆ.ವೈ.ನಂಜೇಗೌಡ ಮತ್ತೊಮ್ಮೆ ಅಧ್ಯಕ್ಷರಾಗಲು ಇಚ್ಛಿಸಿ, ಕೆ.ಎಚ್.ಮುನಿಯಪ್ಪ ಸೇರಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಕೈ ಮತ್ತು ಜೆಡಿಎಸ್ ಶಾಸಕರ ಬೆಂಬಲ ಯಾಚಿಸುವ ನಿಟ್ಟಿನಲ್ಲಿ ಕೆಲವರನ್ನು ಭೇಟಿಯಾಗಿದ್ದಾರೆ.

ಎರಡನೇ ಬಾರಿ ಅಧ್ಯಕ್ಷರಾಗಿ ಕನಸಿನ ಯೋಜನೆಗಳನ್ನು ಸಾಕಾರಗೊಳಿಸುವ ಆಸೆ ನಂಜೇಗೌಡರಿಗೆ ಇರಬಹುದು. ಆದರೆ ಯಾವುದೇ ಕಾರಣಕ್ಕೂ ಕೆಎಚ್ ಜತೆ ಗುರುತಿಸಿಕೊಂಡಿರುವವರಿಗೆ ಅಧಿಕಾರ ಸಿಗಬಾರದು ಎಂದು ವಿರೋಧಿಗಳು ಹಠ ಹಿಡಿದಿರುವುದರಿಂದ ನಂಜೇಗೌಡ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಬಂಗಾರಪೇಟೆಯಿಂದ ಅವಿರೋಧ ಆಯ್ಕೆಯಾಗಿರುವ ಜಯಸಿಂಹ ಕೃಷ್ಣಪ್ಪ ಅವರು ಹಿರಿತನ ಹಾಗೂ ಆಡಳಿತದ ಅನುಭವ ಆಧರಿಸಿ ಅವಕಾಶ ನೀಡಬೇಕೆಂದು ಕೈ ಮುಖಂಡರಲ್ಲಿ ಬೇಡಿಕೆ ಇಟ್ಟಿದ್ದಾರೆ.

ಈ ಬಾರಿ ಚಿಕ್ಕಬಳ್ಳಾಪುರಕ್ಕೆ ಅಧ್ಯಕ್ಷ ಸ್ಥಾನ ನೀಡುವುದಾದರೆ ಕೆಎಂಎಫ್​ಗೆ ನಾಮ ನಿರ್ದೇಶಕನನ್ನಾಗಿ ಆರಿಸಿ ಕಳುಹಿಸಲಿ ಎಂಬುದು ಜಯಸಿಂಹ ಅಭಿಮಾನಿಗಳ ಒತ್ತಾಯವಾಗಿದ್ದು, ಮೇ 23ಕ್ಕೆ ಲೋಕ ಸಮರದ ಫಲಿತಾಂಶ ಹೊರ ಬೀಳುವ ಹಿನ್ನೆಲೆ ಅದರತ್ತ ಹೆಚ್ಚಿನ ಗಮನಹರಿಸಿರುವ ಮುಖಂಡರು ಆಕಾಂಕ್ಷಿಗಳಿಗೆ ಭರವಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಎರಡು ಬಾರಿ ಆಯ್ಕೆಯಾಗಿರುವ ಚಿಂತಾಮಣಿಯ ವೈ.ಬಿ.ಅಶ್ವತ್ಥನಾರಾಯಣ ಕೆಎಂಎಫ್​ನಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಸಮರ್ಥವಾಗಿ ಹೋರಾಡಲು, ಹಾಲು ಉತ್ಪಾದಕರಿಗೆ ಹಾಗೂ ಗ್ರಾಹಕರಿಗೆ ಅಗತ್ಯ ಸವಲತ್ತು ಕಲ್ಪಿಸಲು ಹೋರಾಟ ಮನೋಭಾವದ ಅಧ್ಯಕ್ಷ ಬೇಕಿದೆ. ಈ ಹಿಂದೆ ತಾವು ನಡೆಸಿರುವ ನ್ಯಾಯ ಸಮ್ಮತ ಹೋರಾಟ ಪರಿಗಣಿಸಿ ಅಧಿಕಾರ ನೀಡಬೇಕೆಂದು ಕೈ ಶಾಸಕರು, ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಕೋಲಾರದ ವಡಗೂರು ಡಿ.ವಿ.ಹರೀಶ್ ಪ್ರಬಲ ಆಕಾಂಕ್ಷಿಯಾಗಿದ್ದು, ತಮ್ಮ ಆಯ್ಕೆಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಸಚಿವರು, ಶಾಸಕರನ್ನು ಭೇಟಿಯಾಗಿ ಮನದ ಇಂಗಿತ ವ್ಯಕ್ತಪಡಿಸಿ, ಅಸ್ಥಿತ್ವಕ್ಕಾಗಿ ಜಿಲ್ಲೆಯ ಸಮರ್ಥ ನಾಯಕರೊಂದಿಗೆ ಗುರುತಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಜಿಪಂ ಉಪಾಧ್ಯಕ್ಷನಾಗಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿರುವುದರಿಂದ ಕೋಚಿಮುಲ್ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಕಷ್ಟವಾಗಲ್ಲವೆಂದು ಮುಖಂಡರ ಬಳಿ ಪ್ರತಿಪಾದಿಸಿದ್ದಾರೆ.

ಲಾಬಿ ಅನಿವಾರ್ಯ: ಮಾಜಿ ಅಧ್ಯಕ್ಷ ಗೌರಿಬಿದನೂರಿನ ಕಾಂತರಾಜ್, ಬಾಗೇಪಲ್ಲಿಯ ಮಂಜುನಾಥರೆಡ್ಡಿ, ಗುಡಿಬಂಡೆಯ ಅಶ್ವತ್ಥರೆಡ್ಡಿ ಸಾರಥಿಯಾಗಲು ಪೈಪೋಟಿ ನಡೆಸುತ್ತಿದ್ದು ಈ ನಡುವೆ ಜೆಡಿಎಸ್​ನ ಕಾಡೇನಹಳ್ಳಿ ನಾಗರಾಜು ಅವಕಾಶ ಸಿಕ್ಕರೆ ಜವಾಬ್ದಾರಿ ನಿರ್ವಹಿಸಲು ಸೈ ಎಂದಿದ್ದಾರೆ. ಮೇ 23ರ ಫಲಿತಾಂಶದಲ್ಲಿ ಮೇಲುಗೈ ಸಾಧಿಸುವವರು ಕೋಚಿಮುಲ್ ಅಧ್ಯಕ್ಷರ ಚುನಾವಣೆ ವಿಚಾರದಲ್ಲಿ ಪ್ರಭಾವ ಬೀರಲಿದ್ದು ಅಲ್ಲಿಯವರೆಗೆ ಆಕಾಂಕ್ಷಿಗಳು ಲಾಬಿ ಮುಂದುವರಿಸುವುದು ಅನಿವಾರ್ಯ.

Leave a Reply

Your email address will not be published. Required fields are marked *