ಕೊಹ್ಲಿ ಪಡೆಗೆ ಸರಣಿ ಗೆಲುವಿನ ಟೆಸ್ಟ್

ಮುಂಬೈ: ಭಾರತ ತಂಡ ಕೊನೆಯ ಬಾರಿಗೆ ಇಂಗ್ಲೆಂಡ್ ತಂಡದ ವಿರುದ್ಧ ವಾಂಖೆಡೆ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆದ್ದಾಗ ಹಾಲಿ ನಾಯಕ ವಿರಾಟ್ ಕೊಹ್ಲಿಗಿನ್ನು 4 ವರ್ಷ! 1993ರ ಫೆಬ್ರವರಿಯಲ್ಲಿ ಬಂದ ಆ ಗೆಲುವಿನ ಬಳಿಕ ಇಂಗ್ಲೆಂಡ್ ವಿರುದ್ಧ ವಾಂಖೆಡೆಯಲ್ಲಿ ಆಡಿದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಭಾರತ ಸೋತಿದೆ. 23 ವರ್ಷದ ಬಳಿಕ ಇಂಗ್ಲೆಂಡ್ ವಿರುದ್ಧ ವಾಂಖೆಡೆ ಟೆಸ್ಟ್ನಲ್ಲಿ ಗೆಲುವು ಸಾಧಿಸುವುದರೊಂದಿಗೆ ಸರಣಿ ವಶಪಡಿಸಿಕೊಳ್ಳುವ ಗುರಿಯಲ್ಲಿ ಭಾರತ ತಂಡ ಗುರುವಾರ ಆರಂಭವಾಗಲಿರುವ ಸರಣಿಯ ನಾಲ್ಕನೇ ಟೆಸ್ಟ್ನಲ್ಲಿ ಕಣಕ್ಕಿಳಿಯಲಿದೆ.

ಐದು ಪಂದ್ಯಗಳ ಸರಣಿಯಲ್ಲಿ ಮುಗಿದಿರುವ 3 ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ 2-0 ಮುನ್ನಡೆಯಲ್ಲಿದೆ. ರಾಜ್ಕೋಟ್ನಲ್ಲಿ ಸೋಲಿನ ದವಡೆಯಿಂದ ಪಾರಾಗಿದ್ದ ಭಾರತ ತಂಡ, ವಿಶಾಖಪಟ್ಟಣ ಹಾಗೂ ಮೊಹಾಲಿಯನ್ನು ಆಂಗ್ಲರ ತಂಡವನ್ನು ಬೆಂಡೆತ್ತಿತ್ತು. ಈಗ ಸತತ ಐದನೇ ಟೆಸ್ಟ್ ಸರಣಿ ಗೆಲುವಿನ ಅಂಚಿನಲ್ಲಿ ಭಾರತ ತಂಡವಿದೆ. ಇನ್ನೊಂದೆಡೆ ಇಂಗ್ಲೆಂಡ್ ತಂಡಕ್ಕೆ ಸರಣಿಯಲ್ಲಿ ಸಮಬಲ ಸಾಧಿಸುವ ಆಸೆಯನ್ನು ಉಳಿಸಿಕೊಳ್ಳಬೇಕಾದರೆ ಮುಂಬೈ ಟೆಸ್ಟ್ನಲ್ಲಿ ವಿಜಯದ ನಗು ಬೀರುವುದು ಅನಿವಾರ್ಯ. ಎಲ್ಲಕ್ಕಿಂತ ಮುಖ್ಯವಾಗಿ ಎರಡೂ ತಂಡಗಳಿಗೂ ದೊಡ್ಡ ಹೊರೆಯಾಗಿ ಪರಿಣಮಿಸಿರುವುದು ಪ್ರಮುಖ ಆಟಗಾರರ ಗಾಯದ ಸಮಸ್ಯೆ. -ಪಿಟಿಐ/ಏಜೆನ್ಸೀಸ್

ಸಂಭಾವ್ಯ ತಂಡ

ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಕರುಣ್ ನಾಯರ್, ಆರ್.ಅಶ್ವಿನ್, ಪಾರ್ಥಿವ್ ಪಟೇಲ್ (ವಿ,ಕೀ), ರವೀಂದ್ರ ಜಡೇಜಾ, ಜಯಂತ್ ಯಾದವ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್.

ಅಲಸ್ಟೈರ್ ಕುಕ್ (ನಾಯಕ), ಕೀಟನ್ ಜೆನ್ನಿಂಗ್ಸ್, ಜೋ ರೂಟ್, ಮೊಯಿನ್ ಅಲಿ, ಜಾನಿ ಬೇರ್ಸ್ಟೋ (ವಿ.ಕೀ), ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್, ಸ್ಟುವರ್ಟ್ ಬ್ರಾಡ್/ಜೇಕ್ ಬಾಲ್, ಆದಿಲ್ ರಶೀದ್, ಜೇಮ್್ಸ ಆಂಡರ್ಸನ್.

 

ರೇ ಜೆನ್ನಿಂಗ್ಸ್ ಪುತ್ರನ ಪದಾರ್ಪಣೆ

ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡ ಹಾಗೂ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಕೋಚ್ ಆಗಿದ್ದ ರೇ ಜೆನ್ನಿಂಗ್ಸ್ ಪುತ್ರ ಕೀಟನ್ ಜೆನ್ನಿಂಗ್ಸ್ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ. ಹಸೀಬ್ ಹಮೀದ್ ಗಾಯಾಳುವಾಗಿ ತವರಿಗೆ ತೆರಳಿರುವ ಕಾರಣ ಅಲಸ್ಟೈರ್ ಕುಕ್ಗೆ ಆರಂಭಿಕರಾಗಿ ಕೀಟನ್ ಕಣಕ್ಕಿಳಿಯಲಿದ್ದಾರೆ. ಜೊಹಾನ್ಸ್ಬರ್ಗ್ನಲ್ಲಿ ಹುಟ್ಟಿದ ಕೀಟನ್ 2011ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ದಕ್ಷಿಣ ಆಫ್ರಿಕಾ 19 ವಯೋಮಿತಿ ತಂಡದ ನಾಯಕನಾಗಿದ್ದರು. ಆ ಬಳಿಕ ಇಂಗ್ಲೆಂಡ್ಗೆ ವಾಸ್ತವ್ಯ ಬದಲಾಯಿಸಿದ ಕೀಟನ್, ಸ್ಥಳೀಯ ಡರ್ಹ್ಯಾಂ ಕೌಂಟಿ ತಂಡದ ಪರ ಆಡುತ್ತಿದ್ದಾರೆ.

41 – ವಿರಾಟ್ ಕೊಹ್ಲಿ ಇನ್ನು 41 ರನ್ ಬಾರಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 4 ಸಾವಿರ ರನ್ ಪೂರ್ತಿಗೊಳಿಸಲಿದ್ದಾರೆ. ತಮ್ಮ 89ನೇ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದರೆ, ಅತಿವೇಗವಾಗಿ ಟೆಸ್ಟ್ನಲ್ಲಿ 4 ಸಾವಿರ ರನ್ ಪೂರ್ತಿ ಮಾಡಿದ 6ನೇ ಭಾರತೀಯ ಎನಿಸಲಿದ್ದಾರೆ. ವೀರೇಂದ್ರ ಸೆಹ್ವಾಗ್ 79 ಇನಿಂಗ್ಸ್ಗಳಲ್ಲಿ 4 ಸಾವಿರ ರನ್ ಪೂರೈಸಿ ಅಗ್ರಸ್ಥಾನದಲ್ಲಿದ್ದಾರೆ.

ಪಿಚ್ ರಿಪೋರ್ಟ್

ಸರಣಿಯ ಹಿಂದಿನ ಪಂದ್ಯಗಳಂತೆ ಈ ಪಿಚ್ ಇರಲಿದ್ದು, ಮೊದಲ ಎರಡು ದಿನ ಬ್ಯಾಟ್ಸ್ಮನ್ ಹಾಗೂ ವೇಗಿಗಳಿಗೆ ನೆರವೀಯಲಿದೆ. 3ನೇ ದಿನದಿಂದ ಸ್ಪಿನ್ನರ್ಗಳಿಗೆ ನೆರವು ನೀಡಲಿದೆ ಎಂದು ಪಿಚ್ ಕ್ಯುರೇಟರ್ ತಿಳಿಸಿದ್ದಾರೆ.

ಭಾರತಕ್ಕೆ ಗಾಯದ ಸಮಸ್ಯೆ

ತಂಡದ ಮುಖ್ಯ ವೇಗಿ ಮೊಹಮದ್ ಶಮಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಗಾಯಾಳುಗಳ ಪಟ್ಟಿ ಸೇರಿದ್ದಾರೆ. ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಹಾಗೂ ಕನ್ನಡಿಗ ಮನೀಷ್ ಪಾಂಡೆಗೆ ತಂಡ ಕೂಡಿಕೊಳ್ಳುವಂತೆ ಕರೆ ಬಂದಿದೆ. ಇನ್ನು ಇಂಗ್ಲೆಂಡ್ ತಂಡಕ್ಕೆ ಪ್ರಮುಖ ವೇಗಿ ಸ್ಟುವರ್ಟ್ ಬ್ರಾಡ್, ಗಮನಸೆಳೆಯುವ ಆಟವಾಡಿದ್ದ ಯುವ ಆರಂಭಿಕ ಹಸೀಬ್ ಹಮೀದ್ ಗಾಯಗೊಂಡಿದ್ದಾರೆ. ಕಾಯಂ ಆರಂಭಿಕ ಆಟಗಾರ ಕೆಎಲ್ ರಾಹುಲ್ ತಂಡಕ್ಕೆ ಮರಳಿದ್ದು ಕೊಹ್ಲಿಗೆ ಸಮಾಧಾನ ನೀಡಿದ ಅಂಶ. ರಾಹುಲ್ ಆಗಮನದಿಂದ ಮೊಹಾಲಿ ಟೆಸ್ಟ್ನಲ್ಲಿ ಆರಂಭಿಕರಾಗಿ ಪಾರ್ಥಿವ್ ಪಟೇಲ್ ಉತ್ತಮ ನಿರ್ವಹಣೆ ತೋರಿದ್ದರೂ ಕೆಳ ಕ್ರಮಾಂಕದಲ್ಲಿ ಆಡಬೇಕಿದೆ. ಮನೀಷ್ ಪಾಂಡೆ ತಂಡಕ್ಕೆ ಆಗಮಿಸಿದ್ದರೂ, ಕರುಣ್ ನಾಯರ್ ಮೇಲೆ ಕೊಹ್ಲಿ ವಿಶ್ವಾಸ ಇಡುವ ಸಾಧ್ಯತೆ ಇದೆ. ಕುಕ್ ಟೀಮ್ ನಾಲ್ವರು ವೇಗಿಗಳ ಬೌಲಿಂಗ್ ವಿಭಾಗವನ್ನು ಕಣಕ್ಕಿಳಿಸಲಿದೆ. ಬ್ರಾಡ್ ಆಡುವ ಬಗ್ಗೆ ಇನ್ನೂ ಅನುಮಾನಗಳಿದ್ದರೆ, ಕ್ರಿಸ್ ವೋಕ್ಸ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. 3ನೇ ಟೆಸ್ಟ್ನಂತೆ ಬ್ರಾಡ್ ಈ ಪಂದ್ಯಕ್ಕೂ ವಿಶ್ರಾಂತಿ ಪಡೆದಲ್ಲಿ, ಜೇಕ್ ಬಾಲ್ ಅಥವಾ ಸ್ಟೀವನ್ ಫಿನ್ ಮೈದಾನಕ್ಕೆ ಇಳಿಯಲಿದ್ದಾರೆ.

ವಾಂಖೆಡೆ ಮೈದಾನದಲ್ಲಿ ಇಂಗ್ಲೆಂಡ್ ತಂಡ ಆಡಿದ ಕಳೆದ 2 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮಣಿಸಿದೆ. 2006ರಲ್ಲಿ ಭಾರತ 212 ರನ್ಗಳಿಂದ ಸೋತಿದ್ದರೆ, 2012ರಲ್ಲಿ 10 ವಿಕೆಟ್ಗಳಿಂದ ಶರಣಾಗಿತ್ತು.

ಮನೀಷ್, ಶಾರ್ದೂಲ್ಗೆ ದಿಢೀರ್ ಬುಲಾವ್

ಅಜಿಂಕ್ಯ ರಹಾನೆ ಹಾಗೂ ಮೊಹಮದ್ ಶಮಿ ಗಾಯಗೊಂಡ ಕಾರಣ ಕರ್ನಾಟಕದ ಮನೀಷ್ ಪಾಂಡೆ ಹಾಗೂ ಮುಂಬೈ ವೇಗಿ ಶಾರ್ದೂಲ್ ಠಾಕೂರ್ಗೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವಂತೆ ಬಿಸಿಸಿಐ ಸೂಚಿಸಿದೆ. ರಹಾನೆ ಅಭ್ಯಾಸ ನಡೆಸುವ ವೇಳೆ ಕೈಬೆರಳಿನ ಮುರಿತಕ್ಕೆ ಒಳಗಾಗಿದ್ದರೆ, ಕಳೆದ ವರ್ಷ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೊಹಮದ್ ಶಮಿಗೆ ಮತ್ತೆ ನೋವು ಕಾಣಿಸಿಕೊಂಡಿದೆ. ಇವರಿಬ್ಬರೂ ನಾಲ್ಕನೇ ಟೆಸ್ಟ್ಗೆ ಲಭ್ಯರಿಲ್ಲ ಎಂದು ಟೀಮ್ ಮ್ಯಾನೇಜ್ವೆುಂಟ್ ಖಚಿತಪಡಿಸಿದೆ. ಇದರಿಂದಾಗಿ ತವರಿನ ಮೈದಾನದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡುವ ಅವಕಾಶದಿಂದ ರಹಾನೆ ಮತ್ತೊಮ್ಮೆ ವಂಚಿತರಾಗಿದ್ದಾರೆ. ರಹಾನೆ ಅಂತಿಮ ಟೆಸ್ಟ್ಗೂ ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಇನ್ನೊಂದೆಡೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸುದ್ದಿ ತಲುಪುತ್ತಿದ್ದಂತೆ ಮನೀಷ್ ಹಾಗೂ ಶಾರ್ದೂಲ್ ರಣಜಿ ಟ್ರೋಫಿ ಪಂದ್ಯ ಬಿಟ್ಟು ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Leave a Reply

Your email address will not be published. Required fields are marked *