ಕೊಳ್ಳೇಗಾಲ: ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ ಸಚಿವ ಸಂಪುಟ ಸಭೆಯಲ್ಲಿ ಕೊಳ್ಳೇಗಾಲಕ್ಕೆ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಾಣ ತೀರ್ಮಾನದ ಘೋಷಣೆ ಹಿನ್ನೆಲೆ ಆಸ್ಪತ್ರೆ ಮಂಗಳವಾರ ಅಧಿಕಾರಿಗಳ ಜತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಥಳ ಪರಿಶೀಲಿಸಿದರು.

ಈ ವೇಳೆ ಮಾತನಾಡಿ, ಮೆಡಿಕಲ್ ಕಾಲೇಜು ಇರುವ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಸ್ಪತ್ರೆ ನೀಡಲು ಸರ್ಕಾರ ಚಿಂತನೆ ನಡೆಸಿದ್ದು. ಅಂತೆಯೇ ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಕೊಳ್ಳೇಗಾಲಕ್ಕೆ ಜಿಲ್ಲಾಸ್ಪತ್ರೆ ಘೋಷಣೆ ಮಾಡಿತ್ತು. ಆಗಾಗಿ ಪಟ್ಟಣದ ಮುಡಿಗುಂಡದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ 13 ಎಕರೆಗೂ ಹೆಚ್ಚು ವಿಸ್ತೀರ್ಣದ ಜಾಗದಲ್ಲಿ ಕಚೇರಿ, ಫೌರಂ ಹೌಸ್ ಆಗಲಿ, ಚಾಕಿ ಸೆಂಟರ್ ಇರುವುದಿಲ್ಲ.
ಹಲವಾರು ವರ್ಷಗಳಿಂದ ಇಲ್ಲಿ ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಪ್ರಶಾಂತವಾಗಿರುವ ಈ ಜಾಗ ಜಿಲ್ಲಾ ಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತವಾದ ಜಾಗ ಎಂದು ಪರಿಗಣಿಸಲಾಗಿದೆ ಎಂದರು.
ಈ ವೇಳೆ ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರ ಸೇರಿದಂತೆ ರೇಷ್ಮೆ ಇಲಾಖೆ ಅಧಿಕಾರಿ, ಕಂದಾಯ ಅಧಿಕಾರಿ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳ ಜತೆ ಸ್ಥಳದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಆದಷ್ಟು ಬೇಗ ಆಸ್ಪತ್ರೆ ನಿರ್ಮಾಣ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿ ರಾಜ್ಯ ಸರ್ಕಾರದ ತಾಂತ್ರಿಕ ಯೋಜನಾಧಿಕಾರಿಗಳ ಪರಿಶೀಲನೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಸಹ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳದ ಪರಿಶೀಲನೆ ಆಗಮಿಸಲಿದ್ದಾರೆ. ಅವರಿಂದಲೂ ಕೂಡ ಸರ್ಕಾರಕ್ಕೆ ಶಿಫಾರಸು ಮಾಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಇಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆ ನಿರ್ಮಾಣ ಕ್ಷೇತ್ರದ ಜನತೆಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಲಭಿಸುತ್ತದೆ. ಈ ಆಸ್ಪತ್ರೆ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಶಂಕರ್, ಸದಸ್ಯರಾದ ಪ್ರಕಾಶ್ ಶಂಕನಪುರ, ಶಾಂತರಾಜು, ಮಂಜುನಾಥ್, ಡಿಎಚ್‌ಒ ಡಾ.ಚಿದಂಬರ, ತಹಸೀಲ್ದಾರ್ ಬಸವರಾಜು, ರೇಷ್ಮೆ ಇಲಾಖೆ ಉಪನಿರ್ದೇಶಕ ರಾಚಪ್ಪಾಜಿ, ಸರ್ವೇ ಅಧಿಕಾರಿಗಳು ಇದ್ದರು.