ಕೊಳೆಯುತ್ತಿದೆ ಕೊಯ್ಲಿಗೆ ಬಂದ ಬೆಳೆ

blank

ಕುಂದಗೋಳ: ಕೊಯ್ಲು ಬಂದಿರುವ ಶೇಂಗಾ, ಗೋವಿನಜೋಳ, ಸೋಯಾಬೀನ್ ಬೆಳೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಳೆಯುವ ಸ್ಥಿತಿ ತಲುಪಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಉಂಟಾಗಿದೆ.

ಕಳೆದ ತಿಂಗಳು ಎಡೆಬಿಡದೇ ಸುರಿದ ಮಳೆ, ಮತ್ತೆ ಕಳೆದ ಒಂದು ವಾರದಿಂದ ಪ್ರತಿದಿನವೂ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತಿಗೆ ಸುರಿಯುತ್ತಿದೆ. ತಾಲೂಕಿನಾದ್ಯಂತ ವಿಪರೀತ ಮಳೆಯಿಂದಾಗಿ ಮುಂಗಾರು ಬೆಳೆಗಳಾದ ಶೇಂಗಾ, ಬಿಟಿ ಹತ್ತಿ, ಗೋವಿನ ಜೋಳ, ಸೋಯಾಬೀನ್ ಹಾಗೂ ತೋಟಗಾರಿಕೆ ಬೆಳೆ ಮೆಣಸಿನಕಾಯಿ ಗಿಡಕ್ಕೆ ತಾಪತ್ರಯ ಎದುರಾಗಿದೆ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 41600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದರಲ್ಲಿ ಬಿಟಿ ಹತ್ತಿ 18600, ಶೇಂಗಾ 14500, ಗೋವಿನಜೋಳ ಹಾಗೂ ಸೋಯಾಬೀನ್ 3000 ಹಾಗೂ ಮೆಣಸಿನಕಾಯಿ ಗಿಡ 5000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಕುಂದಗೋಳ ತಾಲೂಕು ಬಹುತೇಕ ಕೆಂಪು ಮಣ್ಣಿನ ಭೂಮಿ ಹೊಂದಿದೆ. ಅಧಿಕ ಮಳೆಯಾಗುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಜವುಳು ಉಂಟಾಗಿದೆ. ಹೀಗಾಗಿ ಬೆಳೆಗಳ ಬೇರು ಕೊಳೆತು, ಹಾನಿಯಾಗುತ್ತಿದೆ. ಹತ್ತಿ ಬೆಳೆಯಂತೂ ಅಧಿಕ ಮಳೆಯಿಂದಾಗಿ ಕೆಂಪಾಗಿ ಹೋಗಿದೆ. ಇನ್ನೊಂದೆಡೆ ಶೇಂಗಾ ಬೆಳೆ ಕೀಳುವ ಹಂತಕ್ಕೆ ಬಂದಿದ್ದು, ಸತತ ಮಳೆಯಿಂದಾಗಿ ಭೂಮಿ ಒಣಗುತ್ತಿಲ್ಲ. ಇದರಿಂದ ನೆಲದಡಿಯೇ ಶೇಂಗಾ ಕಾಯಿ ಮೊಳಕೆಯೊಡೆದು ಕೊಳೆಯುತ್ತಿದೆ. ಎರಡು ವರ್ಷಗಳಿಂದ ಅತಿವೃಷ್ಟಿಯಿಂದ ರೈತರು ಎಲ್ಲ ರೀತಿ ಹಾನಿ ಅನುಭವಿಸಿದ್ದಾರೆ. ಪ್ರಸ್ತುತ ಹಂಗಾಮಿನ ವಿಪರೀತ ಮಳೆಯಿಂದಾಗಿ ಬೆಣ್ಣಿ ಹಳ್ಳದ ಪ್ರವಾಹದಿಂದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ.

ಈ ಬಾರಿ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಸೆಪ್ಟೆಂಬರ್​ನಲ್ಲಿ ವಾಡಿಕೆ ಮಳೆ 104 ಮಿಮೀ ಆಗಬೇಕಾಗಿತ್ತು. ಆದರೆ, 173 ಮಿಮೀ (ಶೇ. 67ರಷ್ಟು ಅಧಿಕ) ಮಳೆಯಾಗಿದೆ. ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆ ಮಳೆ 385 ಮಿಮೀ ಆಗಬೇಕಾಗಿತ್ತು. ಆದರೆ, ವಾಡಿಕೆ ಮಳೆಗಿಂತ ಅಧಿಕ 3 ತಿಂಗಳ ಸರಾಸರಿ 606 ಮಿಮೀ ಮಳೆಯಾಗಿದೆ. ಅಧಿಕ ಮಳೆಯಿಂದಾಗಿ ಶೇಂಗಾ, ಹೆಸರು, ಉದ್ದು, ಸೋಯಾಬೀನ್ ಬೆಳೆಗಳ ಇಳುವರಿ ಕುಂಠಿತವಾಗಿದ್ದರೆ, ಮಳೆಯಿಂದ ಕಾಳಿಗೆ ಹಾನಿಯಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ರೈತರಿಗೆ ಪರಿಹಾರ ಒದಗಿಸುವ ಕೆಲಸ ಆಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಅಧಿಕ ಮಳೆಯಿಂದ ಬಹುತೇಕ ಮುಂಗಾರು ಬೆಳೆ ಹಾನಿಯಾಗಿದ್ದು, ಪ್ರತಿ ಹೆಕ್ಟೇರ್​ಗೆ ಸರ್ಕಾರ 25 ಸಾವಿರ ರೂ. ಪರಿಹಾರ ನೀಡಬೇಕು. ಸಂಕಷ್ಟದ ಸಂದರ್ಭದಲ್ಲಿ ಸೂಕ್ತ ಪರಿಹಾರ ಹಾಗೂ ಪ್ಯಾಕೇಜ್ ಮೂಲಕ ಸರ್ಕಾರ ರೈತರ ಕೈಹಿಡಿಯಬೇಕು.
| ಸೋಮು ದೇಸಾಯಿ, ತಾಲೂಕು ರೈತ ಸಂಘದ ಅಧ್ಯಕ್ಷ

Share This Article

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…