ಕೊಳೆಗೇರಿ ನಿವಾಸಿಗಳ ಮುಖದಲ್ಲಿ ಮಂದಹಾಸದ ಕಳೆ

ಹಳಿಯಾಳ: ಹಲವು ವರ್ಷಗಳಿಂದ ನನೆಗುದಿಗೆ ಬಿದಿದ್ದ ಕೊಳೆಗೇರಿ ನಿವಾಸಿಗಳ ಮನೆ ಹಕ್ಕು ಪತ್ರ ವಿತರಣೆ ಪ್ರಕರಣ ಇತ್ಯರ್ಥ ವಾಗುವ ಸಾಧ್ಯತೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ಮಟ್ಟದಲ್ಲಿ ಮೊದಲ ಹಂತದ ಆಡಳಿತಾತ್ಮಕ ಪ್ರಕ್ರಿಯೆಗಳು ಆರಂಭಗೊಂಡಿವೆ.

ಪುರಸಭೆ ಗುರುತಿಸಿದ ಅಧಿಕೃತ ಒಟ್ಟು ಒಂಬತ್ತು ಕೊಳೆಗೇರಿ ಪ್ರದೇಶಗಳು ಪಟ್ಟಣದಲ್ಲಿವೆ. ಯಲ್ಲಾಪುರ-ಧಾರವಾಡ ರಸ್ತೆ, ಬ್ಲಾಕ್ ನಂ 24, ಕಾನ್ವೆಂಟ್ ಬಳಿಯಿರುವ ಬ್ಲಾಕ್ ನಂ. 18, 20, 22, ಹೊಸೂರ ಗಲ್ಲಿ ಬ್ಲಾಕ್ ನಂ 47, ಹುಲ್ಲಟ್ಟಿ ಭಾಗ 1, ಹುಲ್ಲಟ್ಟಿ ಭಾಗ 2, ಆಸ್ಪತ್ರೆ ಕೆರೆ, ಗುಡ್ನಾಪುರ, ಹೊರಗಿನ ಗುತ್ತಿಗೇರಿ ಪ್ರದೇಶ ಕೊಳೆಗೇರಿ ಪ್ರದೇಶಗಳಾಗಿದ್ದು, ಕೊಳಚೆ ನಿಮೂಲನಾ ಮಂಡಳಿಯ ವ್ಯಾಪ್ತಿಯಲ್ಲಿ ಬರುತ್ತವೆ.

ಸದ್ಯ ಕಾನ್ವೆಂಟ್ ಬಳಿಯಿರುವ ಬ್ಲಾಕ್ ನಂ 18, 20, 22ರಲ್ಲಿನ ಕೊಳೆಗೇರಿಯಲ್ಲಿ ನೆಲೆಸಿರುವ ಸುಮಾರು 70 ನಿವಾಸಿಗಳು ಮನೆ ಹಕ್ಕು ಪತ್ರದಿಂದ ವಂಚಿತರಾಗಿದ್ದಾರೆ. ಇವರಲ್ಲಿ ಬಹುಪಾಲು ಬಡತನ ರೇಖೆಗಿಂತ ಮೇಲಿನವರು (ಎಪಿಎಲ್) ಹಾಗೂ ಸರ್ಕಾರಿ ಸೇವೆಯಲ್ಲಿ ಇರುವವರು ಇದ್ದಾರೆ. ಅಲ್ಲದೆ, ನಿಯಮಾವಳಿ ಮೀರಿ ಮನೆ ನಿರ್ಮಾಣ ಮಾಡಿದ್ದರಿಂದ ಮನೆ ಹಕ್ಕು ಪತ್ರ ನೀಡಲಾಗುತ್ತಿಲ್ಲ ಎಂಬುದು ಪುರಸಭೆಯ ವಾದವಾಗಿದೆ.

ಪೌರಾಡಳಿತ ನಿರ್ದೇಶನಾಲಯ 5-2-2018ರಂದು ಸುತ್ತೋಲೆ ಹೊರಡಿಸಿ, ನಿಯಮ ಬಾಹಿರವಾಗಿ ನಿರ್ವಿುಸಿರುವ ಮನೆಗಳ ತೆರಿಗೆಯನ್ನು ಸ್ವೀಕರಿಸದಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆಯು ಪಟ್ಟಣದ ವಿವಿಧೆಡೆ ನಿಯಮ ಬಾಹಿರವಾಗಿ ನಿರ್ವಣಗೊಂಡಿರುವ 155 ಮನೆಗಳ (ಇದರಲ್ಲಿ ಕೊಳೆಗೇರಿಯ 70 ಮನೆಗಳು ಸೇರಿ) ಖಾತೆಯನ್ನು ರದ್ದುಪಡಿಸಿತು. ಪುರಸಭೆಯು ತೆರಿಗೆ ಸ್ವೀಕರಿಸುವುದನ್ನು ನಿಲ್ಲಿಸಿದ ಮೇಲೆ ಎಚ್ಚೆತ್ತ ಕೊಳೆಗೇರಿ ನಿವಾಸಿಗಳು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಮನೆ ಹಕ್ಕುಪತ್ರ ಹೋರಾಟವನ್ನು ಮರು ಆರಂಭಿಸಿದರು. ಸ್ಥಳೀಯ ವಾರ್ಡ್ ಜನಪ್ರತಿನಿಧಿ, ಪುರಸಭೆ ಅಧ್ಯಕ್ಷರಿಗೆ ತಮ್ಮ ಬೇಡಿಕೆ ಸಲ್ಲಿಸಿ ಸೋತಿದ್ದ ಕೊಳೆಗೇರಿ ವಾಸಿಗಳು ಕಳೆದ ತಿಂಗಳು ಹಳಿಯಾಳಕ್ಕೆ ಆಗಮಿಸಿದ ಸಚಿವರನ್ನು ಭೇಟಿಯಾಗಿ ಮನೆ ಹಕ್ಕು ಪತ್ರಕ್ಕಾಗಿ ಅಹವಾಲು ಸಲ್ಲಿಸಿ, ಸಚಿವರಿಂದ ನೆರವಿನ ಭರವಸೆ ಪಡೆದುಕೊಂಡಿದ್ದರು.

ಸಭೆಗಳು: ಸಚಿವರ ಸೂಚನೆ ಹಿನ್ನೆಲೆೆಯಲ್ಲಿ ಕೊಳೆ ಗೇರಿ ನಿವಾಸಿಗಳ ಅಹವಾಲು ಆಧರಿಸಿ ತಹಸೀಲ್ದಾರ್ ನೇತೃತ್ವದಲ್ಲಿ ಪುರಸಭೆ ಹಾಗೂ ಕೊಳಚೆ ನಿಮೂಲನಾ ಮಂಡಳಿಯ ಎರಡು ಸಭೆಗಳು ನಡೆದವು. ಹಕ್ಕು ಪತ್ರ ವಿತರಣೆಗೆ ಎದುರಾಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದು ಮೊದಲ ಹಂತದ ಆಡಳಿತಾತ್ಮಕ ಪತ್ರ ವ್ಯವಹಾರ ಆರಂಭಗೊಂಡಿದೆ. ಮನೆ ಹಕ್ಕುಪತ್ರ ದೊರೆಯುವುದರಿಂದ ಸರ್ಕಾರ ಇಲ್ಲವೇ ಇತರೇ ಬ್ಯಾಂಕ್ ಆರ್ಥಿಕ ಸಾಲ ಸೌಲಭ್ಯಗಳು ಇವರಿಗೆ ದೊರೆಯಲಿವೆ. ಮನೆ ಹಕ್ಕು ಪತ್ರ ವಿತರಣೆ ಪ್ರಕ್ರಿಯೆಯು ಕೊಳೆಗೇರಿ ನಿವಾಸಿಗಳಲ್ಲಿ ಉತ್ಸಾಹ ಮೂಡಿಸಿದೆ.

ಇಂದಿರಾನಗರದ ನಿವಾಸಿಗಳಿಗೆ ಮನೆ ಹಕ್ಕು ಪತ್ರ ನೀಡಿದ ಮಾದರಿ ಯಲ್ಲಿಯೇ ಸರ್ಕಾರದ ಮಟ್ಟದಲ್ಲಿ ವಿಶೇಷ ಮಸೂದೆ ತಂದು ಕೊಳೆಗೇರಿ ನಿವಾಸಿಗಳಿಗೂ ಮನೆ ಹಕ್ಕುಪತ್ರ ನೀಡುವ ಪ್ರಯತ್ನವನ್ನು ಸಚಿವರು ಆರಂಭಿಸಿದ್ದಾರೆ.

| ಅಜರ್ ಬಸರಿಕಟ್ಟಿ ಪುರಸಭೆ ಸದಸ್ಯ

ಕೊಳಚೆ ನಿಮೂಲನಾ ಮಂಡಳಿಗೆ ಬೇಕಾಗಿರುವ ದಾಖಲೆ ಪತ್ರಗಳನ್ನು ಪುರಸಭೆ ರವಾನಿ ಸಿದ್ದು, ಕೊಳಚೆ ಮಂಡಳಿಯು ಹಕ್ಕು ಪತ್ರ ನೀಡುವ ನಿಟ್ಟಿನಲ್ಲಿ ಆರಂಭಿಸಿರುವ ಆಡಳಿತಾತ್ಮಕ ಪ್ರಕ್ರಿಯೆಗಳ ಮಾಹಿತಿ ಪತ್ರವನ್ನು ಪುರಸಭೆಗೆ ಕಳುಹಿಸಿದೆ.

| ಕೇಶವ ಚೌಗುಲೆ ಪುರಸಭೆ ಮುಖ್ಯಾಧಿಕಾರಿ

Leave a Reply

Your email address will not be published. Required fields are marked *