ಕೊಲೆಸ್ಟರಾಲ್ ಅರ್ಥ ಮಾಡಿಕೊಳ್ಳೋಣ

ಕೊಬ್ಬು ಹಾಗೂ ಪಿಷ್ಟ ಪದಾರ್ಥಗಳಿಂದ ಒಗ್ಗೂಡಿದ ಕಾರ್ಯಚಟುವಟಿಕೆಗಳು ಶರೀರದಲ್ಲಿ ಕೊಬ್ಬನ್ನು ಶೇಖರಿಸಿಡುವ ಅತ್ಯಂತ ಶಕ್ತಿಯುತ ವಾಹಕಗಳಾಗಿವೆ. ರಿಫೈನ್ಡ್ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತವೆ.

ದಪ್ಪಗಿರುವ ವ್ಯಕ್ತಿಯ ಹೊಟ್ಟೆಯ ಕೆಳಭಾಗ ಹಾಗೂ ಸೊಂಟದ ಸುತ್ತ ಶೇಖರಗೊಂಡಿರುವ ಕೊಬ್ಬಿನ ಜೀವಕೋಶಗಳು ಇನ್ಸುಲಿನ್​ನ ಕಾರ್ಯಕ್ಷಮತೆಯನ್ನು ತಗ್ಗಿಸುವುದರಿಂದ ಇಂತಹ ವ್ಯಕ್ತಿಗಳಲ್ಲಿ ಶೇ. 2ರಿಂದ 5ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಇನ್ಸುಲಿನ್ ಬಿಡುಗಡೆಗೊಳ್ಳುತ್ತದೆ. ಶರೀರದಲ್ಲಿ ಇನ್ಸುಲಿನ್ ಹೆಚ್ಚು ಪ್ರಮಾಣ ಉತ್ಪತ್ತಿಯಾದಷ್ಟು ನಾವು ಸೇವಿಸುವ ಕ್ಯಾಲೋರಿಯನ್ನು ಅಧಿಕ ಪ್ರಮಾಣದಲ್ಲಿ ಕೊಬ್ಬನ್ನಾಗಿ ಪರಿವರ್ತಿಸುತ್ತಾ ಹೋಗುತ್ತದೆ. ನಾವು ಸಂಸ್ಕರಿಸಿದ ಕೊಬ್ಬುಯುಕ್ತ ಪದಾರ್ಥಗಳು ಹಾಗೂ ಸಂಸ್ಕರಿಸಿದ ಪಿಷ್ಟ ಪದಾರ್ಥಗಳನ್ನು ಸೇವಿಸುವುದರಿಂದ (ಮೈದಾ, ಸಕ್ಕರೆ ಇತ್ಯಾದಿ) ಶರೀರದಲ್ಲಿ ಕೊಬ್ಬನ್ನು ಸಂಗ್ರಹಿಸಿಡುವ ಹಾಮೋನುಗಳು ಅತಿಯಾಗಿ ಸ್ರವಿಸಲ್ಪಡುತ್ತದೆ. ಆಹಾರಪದಾರ್ಥಗಳನ್ನು ಸಂಸ್ಕರಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಜೀವಸತ್ವಗಳು, ಲವಣಗಳು, ಸೋರಿ ಹೋಗಿರುವುದರಿಂದ ನೈಸರ್ಗಿಕವಾಗಿ ನಾವು ಮತ್ತೂ ಹೆಚ್ಚಿನ ಆಹಾರವನ್ನು ಸೇವಿಸಲು ಅಣಿ ಮಾಡುತ್ತದೆ. ಸಂಸ್ಕರಿಸಿದ ಅಥವಾ ರಿಫೈನ್ಡ್ ಮಾಡಿದ ಎಲ್ಲಾ ಎಣ್ಣೆಗಳು ಹೆಚ್ಚಿನ ಶಕ್ತಿಯ ಪ್ರಮಾಣವನ್ನು (ಕ್ಯಾಲೋರಿ) ಹಾಗೂ ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತದೆ. ಯಾವುದೇ ಆಹಾರ ಪದಾರ್ಥಗಳನ್ನು ಎಣ್ಣೆಯಲ್ಲಿ ಕರಿದಾಗ ಅಥವಾ ಹುರಿದಾಗ ಅತಿ ಹೆಚ್ಚಿನ ಪ್ರಮಾಣ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಅದರಲ್ಲಿಯೂ ತರಕಾರಿಗಳನ್ನು ಎಣ್ಣೆಯಲ್ಲಿ ಕರಿದಾಗ ಇವು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಕಡಿಮೆ ಕ್ಯಾಲೋರಿ ಇರುವ ಆಹಾರ ಪದಾರ್ಥಗಳು ಸಹ ಸುಲಭವಾಗಿ ತೂಕವನ್ನು ಹೆಚ್ಚಿಸುವ ಆಹಾರಗಳಾಗಿ ಪರಿವರ್ತಿತವಾಗುತ್ತದೆ.

ಭಾರತೀಯರಲ್ಲಿ ಎಲ್ಲಾ ರೀತಿಯ ವೈವಿಧ್ಯಮಯ ಆಹಾರ ಪದಾರ್ಥಗಳು, ಆಹಾರ ತಯಾರಿಕಾ ವಿಧಾನಗಳಿದ್ದರೂ ಹಸಿ ಸೊಪ್ಪು ತರಕಾರಿಗಳು ಹಣ್ಣುಗಳನ್ನು ಆಹಾರವಾಗಿ ಸೇವಿಸುವವರು ಅತಿ ವಿರಳ.

ರಿಫೈನ್ಡ್ ಎಣ್ಣೆಯು ಈಗಾಗಲೇ ಹೆಚ್ಚು ತೂಕಹೊಂದಿರುವ ನಮ್ಮ ಶರೀರಕ್ಕೆ ಮತ್ತಷ್ಟು ಕೊಬ್ಬನ್ನು ಸೇರಿಸುತ್ತದೆ. ಇದು ಮಧುಮೇಹ ಹಾಗೂ ಹೃದಯಾಘಾತದಂತಹ ಕಾಯಿಲೆಗಳ ಬರುವಿಕೆಯನ್ನು ಹೆಚ್ಚಿಸುತ್ತದೆ. ಆಲೀವ್ ಆಯಿಲ್​ನಲ್ಲಿ ಹಾಗೂ ತೆಂಗಿನೆಣ್ಣೆಯಲ್ಲಿ, ಶೇಂಗಾ ಎಣ್ಣೆಯಲ್ಲಿ, ಎಳ್ಳೆಣ್ಣೆಯಲ್ಲಿ, ಸಾಸಿವೆ ಎಣ್ಣೆಯಲ್ಲಿ 14% ಪ್ರತಿಶತ ಸ್ಯಾಚುರೇಟೆಡ್ ಫ್ಯಾಟ್(ಸಂತೃಪ್ತ ಕೊಬ್ಬು) ಇದೆ. ಹಾಗಾಗಿ ಇದನ್ನೇ ಅಡುಗೆಯಲ್ಲಿ ಬಳಸುವುದು ಒಳ್ಳೆಯದು.

ಮನುಷ್ಯನ ಶರೀರಕ್ಕೆ ಕೊಬ್ಬು ಅತ್ಯವಶ್ಯಕ. ಆದರೆ ಇಂದಿನ ಆಹಾರ ಪದ್ಧತಿಯಲ್ಲಿ ನಾವು ಸೇವಿಸುತ್ತಿರುವ ಕೊಬ್ಬಿನ ಪ್ರಕಾರಗಳಿಂದ ಹಲವು ಬಗೆಯ ದೀರ್ಘಕಾಲೀನ ರೋಗಗಳು ಉತ್ಪತ್ತಿಯಾಗುತ್ತವೆಯೇ ಹೊರತು ನಮ್ಮ ಶರೀರಕ್ಕೆ ಇವು ಯಾವುದೇ ರೀತಿಯ ಉಪಯುಕ್ತವಲ್ಲ. ಹಾಗಾಗಿ ನಾವು ಸೇವಿಸುವ ಕೊಬ್ಬಿನ ವಿಧಾನಗಳನ್ನು ನೈಸರ್ಗಿಕ ಮೂಲಗಳಿಗೆ ಪರಿವರ್ತಿಸಿಕೊಳ್ಳಬೇಕಾಗಿದೆ. ಹಸಿ ಬೀಜಗಳು, ಕಾಯಿಗಳು, ಕಾಳುಗಳು ಇತ್ಯಾದಿಗಳಲ್ಲಿ ನಿಸರ್ಗದತ್ತವಾಗಿ ಕೊಬ್ಬಿನಂಶವು ದೊರೆಯುವುದಲ್ಲದೆ ಅನೈಸರ್ಗಿಕ ಅಥವಾ ಕೊಬ್ಬಿನ ಅತಿ ಸೇವನೆಯಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದು ಮತ್ತು ನೈಸರ್ಗಿಕ ಮೂಲಗಳನ್ನೇ ಬಳಸುವುದರಿಂದ ಬರಿ ಕೊಬ್ಬಿನಂಶವಷ್ಟೇ ಅಲ್ಲದೆ ಅವುಗಳಲ್ಲಿರುವ ಇತರ ಪೋಷಕಾಂಶಗಳು ಶರೀರಕ್ಕೆ ದೊರೆಯುತ್ತವೆ.

ಯಾವುದೇ ಎಣ್ಣೆಯಲ್ಲಿ ಅದರ ಬೀಜಗಳಲ್ಲಿದ್ದಷ್ಟು ಪೋಷಕಾಂಶಗಳು ಇರುವುದಿಲ್ಲ. ತರಕಾರಿ ಸೊಪ್ಪುಗಳನ್ನು ಎಣ್ಣೆಯಲ್ಲಿ ಹುರಿದು ಸೇವಿಸುವುದರಿಂದ ನಮ್ಮ ತೂಕವು ಮತ್ತಷ್ಟು ಹೆಚ್ಚಾಗುತ್ತದೇಯೇ ವಿನಾ ಕಡಿಮೆಯಾಗುವುದಿಲ್ಲ. ಹಾಗಾಗಿ ಹೆಚ್ಚಿನ ದೇಹತೂಕ ಇರುವವರು ಇವುಗಳ ಸೇವನೆಯನ್ನು ಆದಷ್ಟು ಹತೋಟಿಯಲ್ಲಿಟ್ಟುಕೊಳ್ಳುವುದು ಒಳ್ಳೆಯದು.

Leave a Reply

Your email address will not be published. Required fields are marked *