ಕೊಪ್ಪದ ಮಕ್ಕಿಯಲ್ಲಿ ಮೂರು ಶವಗಳ ಗುರುತು ಪತ್ತೆ, ಕೊಲೆಯ ಶಂಕೆ

ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದ ಮಕ್ಕಿಯಲ್ಲಿ ಸಿಕ್ಕಿದ್ದ ಮೂರು ಶವಗಳ ಗುರುತು ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನ ಯಶವಂತಪುರದ ಮೀನಾ, ಅವರ ಪುತ್ರಿಯರಾದ ಮನಿಶಾ ಹಾಗೂ ಕೋಮಲಾ ಎಂದು ತಿಳಿದುಬಂದಿದೆ. ಮೇ 13 ರಂದು ಈ ಮೂವರ ಶವ ಪತ್ತೆಯಾಗಿತ್ತು. ಮಂಕಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮೃತ ಮಹಿಳೆಯ ಸಹೋದರ ಜಗದೀಶ ಎಂಬುವವರು ಮಂಕಿ ಠಾಣೆಗೆ ದೂರು ನೀಡಿದ್ದು, ತನ್ನ ಭಾವನೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಗೊತ್ತಾಗಿದ್ದು ಹೇಗೆ?: ಮೃತರ ಗುರುತು ಪತ್ತೆಗಾಗಿ ಪೊಲೀಸ್ ಇಲಾಖೆ ರಾಜ್ಯದ ಎಲ್ಲ ಠಾಣೆಗಳಿಗೂ ಫೋಟೋವನ್ನು ಕಳಿಸಿ ಶೋಧ ಕಾರ್ಯ ನಡೆಸಿತ್ತು. ಮೇ 15ರಂದು ತುರುವೇಕೆರೆ ಪೋಲಿಸ್ ಠಾಣಿಯಲ್ಲಿ ದಾಖಲಾದ ದೂರು ತಿಳಿದ ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಮೃತ ಮಹಿಳೆಯ ಸಹೋದರ ಮತ್ತು ಅವರ ಕುಟುಂಬದವರು ಗುರುವಾರ ಮಂಕಿ ಆಸ್ಪತ್ರೆಯ ಶವಾಗಾರಕ್ಕೆ ಬಂದು ಶವಗಳನ್ನು ಗುರುತು ಹಿಡಿದಿದ್ದಾರೆ. ಉದ್ದೇಶ ಪೂರ್ವಕವಾಗಿ ಪ್ರವಾಸಕ್ಕೆ ಕರೆತಂದು ಪೂರ್ವನಿಯೋಜಿತವಾಗಿ ಹತ್ಯೆ ಮಾಡಿದ್ದಾನೆ ಎಂದು ಮೃತಳ ಪತಿ ಎಸ್. ನಾಗರಾಜು ಎಂಬುವವರ ಮೇಲೆ ದೂರಿದ್ದಾರೆ. ನಾಗರಾಜು ಮತ್ತು ಆತನ ತಾಯಿ ನೀಲಮ್ಮ ಇವರನ್ನು ಪೀಡಿಸುತ್ತಿದ್ದರು, ಹಿಂಸೆ ನೀಡುತ್ತಿದ್ದರು ಎಂದೂ ಆರೋಪಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಕನ್ನಲ್ಲಿ ಗ್ರಾಮದ ಸಿದ್ದಪ್ಪನವರ ಮಗ ಸುಮಾರು 41 ವಯಸ್ಸಿನ ಎಸ್. ನಾಗರಾಜು ಎಂಬುವವರಿಗೆ 16 ವರ್ಷಗಳ ಹಿಂದೆ ನನ್ನ ಅಕ್ಕ ಮೀನಾಳನ್ನು ಮದುವೆ ಮಾಡಿಕೊಡಲಾಗಿತ್ತು. ಸುಮಾರು 3-4 ವರ್ಷದ ಬಳಿ ಕುಟುಂಬದಲ್ಲಿ ವೈಷಮ್ಯ ಎದುರಾಗಿತ್ತು. ನಾವು ಅಕ್ಕನ ಮನೆಗೆ ಹೋಗಿಬರುತ್ತಿದ್ದೆವು. 10 ವರ್ಷಗಳಿಂದ ನನ್ನ ಅಕ್ಕನಿಗೆ ಬಹಳಷ್ಟು ಕಿರುಕುಳ ಕೊಟ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದ ನಾಗರಾಜು ಕಟ್ಟಿದ ತಾಳಿ ಕಿತ್ತುಹಾಕಿ ಹಣಕ್ಕೆ ಪೀಡಿಸುತ್ತಿದ್ದ. ನಾವು 2 ಲಕ್ಷ ರೂ. ಕೊಟ್ಟೆವು. ಆ ಹಣದಲ್ಲಿ ಇಂಡಿಕಾ ಕಾರು ಖರೀದಿಸಿ 3-4 ವರ್ಷ ಓಡಿಸಿದ್ದ. ಮತ್ತೆ ಮಾಂಗಲ್ಯ ಸರ ಕಿತ್ತು, ಚಿನ್ನದ ಸರ, ಬಳೆ ಕಸಿದುಕೊಂಡು ನಮ್ಮ ಮನೆಗೆ ಕಳುಹಿಸಿದ್ದ. ನಂತರ ನಮ್ಮ ಸಂಬಂಧಿ ಶಾಂತಾರಾಜು ಮತ್ತು ಇತರ ಪಂಚಾಯಿತಿದಾರರನ್ನು ಕೂಡಿಸಿ ಬುದ್ಧಿ ಹೇಳಿ ಕಳುಹಿಸಿದ್ದೆವು. ನಂತರ ನನ್ನ ಅಕ್ಕನಿಗೆ ನಾಗರಾಜು ಮತ್ತು ಆತನ ತಾಯಿ ಮತ್ತಷ್ಟ್ಟು ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.