ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿದ್ದು, ಸಿಎಂ ಯಡಿಯೂರಪ್ಪ ಮ್ಯಾಚ್ ಗೆಲ್ಲಿಸಲು ಕೊನೆಯ ಬಾಲ್ಗೆ ಸಿಕ್ಸ್ ಹೊಡೆದ ಸಂತಸದಲ್ಲಿ ಬೀಗಿದ್ದಾರೆ. ಮತ್ತೊಂದೆಡೆ ಸ್ಪೀಕರ್ ತೀರ್ಪನ್ನು ಸುಪ್ರೀಂ ಭಾಗಶಃ ಪುರಸ್ಕರಿಸಿದೆ ಎಂದು ಕಾಂಗ್ರೆಸ್ ನಾಯಕರು ಬೀಗಿದ್ದಾರೆ.
ತೀರ್ಪು ಏನೇ ಆದರೂ ನಮಗೇನು ಪರಿಣಾಮ ಬೀರುವುದಿಲ್ಲ ಎನ್ನುವ ಮನೋಭಾವನೆಯಲ್ಲಿದ್ದ ಜೆಡಿಎಸ್ ನಾಯಕರಲ್ಲಿ ಯಾವುದೇ ಟೆನ್ಷನ್ ಇಲ್ಲ. ಅನರ್ಹರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದರೂ ಸುಪ್ರೀಂ ತೀರ್ಪು ಬಾರದ ಕಾರಣಕ್ಕೆ ಸಿಎಂ ಒತ್ತಡಕ್ಕೆ ಸಿಲುಕಿದ್ದರು.
ಈ ನಡುವೆ, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ್ದ ಸಿ.ಡಿ. ಸುಪ್ರೀಂ ಅಂಗಳ ತಲುಪಿದ ಬಳಿಕ ಸಿಎಂ ಆತಂಕ ಇನ್ನೂ ಹೆಚ್ಚಾಗಿತ್ತು. ಮೊದಮೊದಲು ಸಂಭ್ರಮಿಸಿದ್ದ ಅನರ್ಹರು ನಂತರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಒಂದು ವೇಳೆ ಸ್ಪರ್ಧೆಗೆ ಅವಕಾಶ ನೀಡದೆ ಹೋದರೆ ಏನು ಮಾಡುವುದು? ಎನ್ನುವ ಚಿಂತೆ ಅವರನ್ನು ಕಾಡುತ್ತಿತ್ತು.
ದಟ್ಟವಾಗಿ ಕವಿದಿದ್ದ ಕಾಮೋಡ ಬದಿಗೆ ಸರಿದಿರುವುದು ಒಂದೆಡೆ ಬಿಜೆಪಿ ನಿಟ್ಟುಸಿರು ಬಿಡುವಂತೆ ಮಾಡಿದ್ದರೆ, ಮತ್ತೊಂದೆಡೆ ಅನರ್ಹರಿಗೂ ಸಂತಸ ತಂದಿದೆ. ಈ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಕನ್ನಡಿ. ಆತ್ಮಾವಲೋಕನ ಮಾಡಿಕೊಳ್ಳುವ ಮಹತ್ವದ ಘಟ್ಟ. ಈ ಅಂಶಗಳನ್ನು ಸುಪ್ರೀಂ ಒತ್ತಿ ಹೇಳಿದೆ. ನೈತಿಕತೆ ವಿಚಾರವನ್ನೂ ಪ್ರಸ್ತಾಪ ಮಾಡಿದೆ. ಪಕ್ಷಗಳು ಮೂಗಿನ ನೇರಕ್ಕೆ ತೀರ್ಪು ಅರ್ಥೈಸಿಕೊಂಡು ಬೀಗುತ್ತಿರುವುದು ವಿಶೇಷ. ಬಿಜೆಪಿ ಹೈಕಮಾಂಡ್ ಅನರ್ಹರೆಲ್ಲರಿಗೂ ಟಿಕೆಟ್ ಖಾತರಿ ಕೊಟ್ಟಿರುವ ಕಾರಣ ಎಲ್ಲರೂ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾಗುವ ಸಾಂಭವ್ಯ ಹೆಚ್ಚಾಗಿದೆ.
ಗೆಲುವಿನ ಮಂತ್ರ ಮುಖ್ಯಮಂತ್ರಿ ಕಾರ್ಯತಂತ್ರ
ಚುನಾವಣಾ ತಂತ್ರಗಾರಿಕೆ ರೂಪಿಸುವುದರಲ್ಲಿ ಎಲ್ಲ ಮುಖಂಡರಿಗಿಂತ ಒಂದು ಹೆಜ್ಜೆ ಮುಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸುಪ್ರೀಂಕೋರ್ಟ್ ತೀರ್ಫ ಹೊರಬೀಳುತ್ತಿದ್ದಂತೆ ಆ ನಿಟ್ಟಿನಲ್ಲಿ ಕಾರ್ಯೋನ್ಮುಕವಾಗಿದ್ದಾರೆ. 15 ಕ್ಷೇತ್ರಗಳಲ್ಲಿ ಕನಿಷ್ಠ 8 ಗೆದ್ದರೆ ಮಾತ್ರ ಸರ್ಕಾರವನ್ನು ಯಾರ ಹಂಗು ಇಲ್ಲದೆ ಉಳಿಸಿಕೊಳ್ಳಲು ಸಾಧ್ಯ. ಆದ್ದರಿಂದಲೇ ತೀರ್ಪು ಬರುವುದನ್ನೇ ಕಾಯುತ್ತಿದ್ದ ಯಡಿಯೂರಪ್ಪ ತಕ್ಷಣ ರಣತಂತ್ರ ರೂಪಿಸುವುದರತ್ತ ಗಮನ ಹರಿಸಿದರು. ಅನರ್ಹರನ್ನು ಪಕ್ಷದಲ್ಲಿನ ಅಸಮಾಧಾನಿತರ ನಡುವೆ ಗೆಲ್ಲಿಸಿಕೊಂಡು ಬರಬೇಕಾದರೆ ಎಲ್ಲರನ್ನೂ ಒಗ್ಗಟ್ಟಿನಿಂದ ನಡೆಸಿಕೊಳ್ಳಬೇಕಾಗಿದೆ. ಆದ್ದರಿಂದಲೇ ಯಡಿಯೂರಪ್ಪ ಬೆಂಗಳೂರಿನಲ್ಲಿದ್ದ ಸಚಿವರನ್ನು ಕರೆದು ಚರ್ಚೆ ನಡೆಸಿದರು. ಪಕ್ಷದಲ್ಲಿನ ಅಸಮಾಧಾನಿತರನ್ನು ಮೊದಲು ಸಮಾಧಾನ ಮಾಡಬೇಕು, ಆ ಕೆಲಸವನ್ನು ಜಿಲ್ಲಾ ಮಂತ್ರಿಗಳು, ಸ್ಥಳೀಯ ಮುಖಂಡರು ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರ ಜತೆಗೂ ದೂರವಾಣಿ ಮೂಲಕ ಮಾತುಕತೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು. ಎಲ್ಲ ಮುಖಂಡರು ಸೇರಿ ಒಗ್ಗಟ್ಟಿನಿಂದ ಗೆಲ್ಲಿಸಿಕೊಂಡು ಬರಬೇಕು. ಅನರ್ಹರು ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕೆ ಇಟ್ಟಿದ್ದರು. ಅವರ ಋಣವನ್ನು ಗೆಲ್ಲಿಸುವ ಮೂಲಕ ತೀರಿಸಬೇಕು. ನಮ್ಮ ಮೇಲೆ ಇರುವ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.