ಕೊತ ಕೊತ ಕುದಿಯುತ್ತಿದೆ ಉತ್ತರ ಕರ್ನಾಟಕ

ಹುಬ್ಬಳ್ಳಿ: ಉತ್ತರ ಕರ್ನಾಟಕ ಈಗ ಕೊತ ಕೊತ ಕುದಿಯುತ್ತಿದೆ. ಏಪ್ರಿಲ್ 30ರವರೆಗೂ ಇದೇ ಪರಿಸ್ಥಿತಿ. ಮೇ 1ರಿಂದ ತುಸು ಸುಧಾರಣೆಯಾದರೆ ಅದೃಷ್ಟ. ವರ್ಷದಿಂದ ವರ್ಷಕ್ಕೆ ಕಾಡು ಕಡಿಮೆಯಾಗುತ್ತಿರುವುದು, ಬರಗಾಲ.. ಅದೂ ಇದೂ ನೆವ ಹೇಳುತ್ತ ಹೊಸದಾಗಿ ಸಸಿ ನೆಟ್ಟು ಬೆಳೆಸುವಲ್ಲಿ ಹಿಂದೆ ಬಿದ್ದಿರುವುದರ ಪರಿಣಾಮಕ್ಕೆ ಈಗಿನ ವಾತಾವರಣ ಪ್ರಬಲ ಸಾಕ್ಷಿಯಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಗುರುವಾರದ ತಾಪಮಾನ ಗರಿಷ್ಠ 38, ಕನಿಷ್ಠ 24 ಇದ್ದರೂ, ಒಣ ಹವೆಯ ಪರಿಣಾಮವಾಗಿ ಮಧ್ಯಾಹ್ನ 40 ಡಿಗ್ರಿ ಸೆಲ್ಷಿಯಸ್​ನ ಅನುಭವವಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಶುಕ್ರವಾರ ಗರಿಷ್ಠ ತಾಪಮಾನ 40ಕ್ಕೇರಲಿದ್ದು, 43 ಡಿ.ಸೆ. ಇದ್ದಂತೆ ಭಾಸವಾಗಬಹುದು. ಕನಿಷ್ಠ ತಾಪಮಾನ 27 ಡಿ.ಸೆ. ಇರಲಿದ್ದು, ಗಾಳಿಯ ವೇಗ ಗಂಟೆಗೆ 8-9 ಕಿ.ಮೀ. ಇರುವುದರಿಂದ 29 ಡಿ.ಸೆ. ಇದೆಯೇನೊ ಎನಿಸಬಹುದು. ಏ. 27, 28ರದ್ದೂ ಇದೇ ಕತೆ!

ಏ. 29ರಿಂದ ಮೇ 1ರವರೆಗೆ ಒಂದೆರಡು ಡಿಗ್ರಿ ತಾಪಮಾನ ಕಡಿಮೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗದಲ್ಲಿ ಸ್ವಲ್ಪ ಹೆಚ್ಚಳ, ಆಗಾಗ ಸುಳಿದು ಹೋಗುವ ಬಿಡಿ ಬಿಡಿ ಮೋಡಗಳಿಂದ ವಿಶಾಲ ನೆರಳು ಬೀಳುವುದರಿಂದಾಗಿ ಸದ್ಯದ ದಿನಕ್ಕೆ ಹೋಲಿಸಿದರೆ ತಿಂಗಳಾಂತ್ಯ ತುಸು ಸಹ್ಯವಾಗಬಹುದು. ಹಸಿರು ಮತ್ತು ಬೆಟ್ಟ ಗುಡ್ಡ ಜಾಸ್ತಿ ಇರುವ ಬೆಳಗಾವಿ ಜಿಲ್ಲೆ ಸಹ ಇನ್ನು 3 ದಿನದವರೆಗೆ ಬಿಸಿ ಬಿಸಿ ವಾತಾವರಣವನ್ನೇ ಹೊಂದಿರಲಿದೆ. ಮುನ್ಸೂಚನೆ ಪ್ರಕಾರ ವಿಜಯಪುರದಲ್ಲಿ ಏ. 27ರಂದು ಗರಿಷ್ಠ 42 ಡಿ.ಸೆ.ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆಯಲ್ಲಿ ಏಪ್ರಿಲ್ ಅಂತ್ಯದವರೆಗೂ ಗರಿಷ್ಠ ತಾಪಮಾನ 40ರ ಆಸುಪಾಸಿನಲ್ಲೇ ಇರಲಿದೆ!

ಗದಗ ಜಿಲ್ಲೆಯಲ್ಲಿ 41 ಡಿಗ್ರಿ; ಗದಗ ಬೆಟಗೇರಿಯಲ್ಲಿ ಗುರುವಾರ ಗರಿಷ್ಠ 41, ಕನಿಷ್ಠ 25 ಡಿ.ಸೆ. ತಾಪಮಾನವಿದ್ದು ದಾಖಲೆ ಬರೆದಿದೆ. ಏ. 28 ರವರೆಗೆ ಇದೇ ಪರಿಸ್ಥಿತಿ. ಏ. 29ರಿಂದ ಮೇ 1ರವರೆಗೆ ಸ್ವಲ್ಪ ಆರಾಮ ಎನಿಸಬಹುದು. ಇಡೀ ಗದಗ ಜಿಲ್ಲೆಯಲ್ಲಿ ಹೆಚ್ಚು ಕಡಿಮೆ ಒಂದೇ ವಾತಾವರಣ ಇರುತ್ತದೆ. ಗದಗ ಜಿಲ್ಲೆಯಲ್ಲಿ 1941ರ ಏ. 23ರಂದು ದಾಖಲಾದ 41.1 ಡಿ.ಸೆ. ಉಷ್ಣಾಂಶ ಸಾರ್ವಕಾಲಿಕ ದಾಖಲೆಯಾಗಿತ್ತು. ಈ ಸಲದ್ದು ಅದನ್ನೂ ಮೀರಿ ಹೊಸ ದಾಖಲೆ ನಿರ್ವಣವಾದರೆ ಅಚ್ಚರಿಯಿಲ್ಲ.

ಹಾವೇರಿಯಲ್ಲೂ ಕಷ್ಟ ಕಷ್ಟ…: ಹಾವೇರಿಯಲ್ಲಿ ಗುರುವಾರ ಗರಿಷ್ಠ 38 ಕನಿಷ್ಠ 24 ಡಿ.ಸೆ. ಉಷ್ಣತೆ ಇದ್ದರೂ, ಇನ್ನೂ 3-4 ಡಿ.ಸೆ. ಜಾಸ್ತಿ ಇದೆಯೇನೊ ಎನಿಸಿದೆ. ಶುಕ್ರವಾರದಿಂದ ಭಾನುವಾರದವರೆಗೆ ಪರಿಸ್ಥಿತಿ ಇನ್ನೂ ಕಷ್ಟ ಎನಿಸಬಹುದು. ಏ. 29ರಿಂದ ಮುಂದಿನ ಮೂರು ದಿನ ಕಾಲ ಸ್ವಲ್ಪ ಸಮಾಧಾನಕರವಾಗಬಹುದು. ಮಧ್ಯೆ ಯಾವಾಗಲಾದರೊಮ್ಮೆ ಮೋಡ ಕಟ್ಟಿಬಂದು ಗುಡುಗು ಮಿಂಚು, ಅಲ್ಲಲ್ಲಿ ನಾಲ್ಕು ಹನಿ ಮಳೆಯೂ ಬೀಳುವ ಮುನ್ಸೂಚನೆ ಇದೆ.

ಕಾರವಾರದಲ್ಲಿ ಕಡಿಮೆ!: ಕಾರವಾರ ಸೇರಿದಂತೆ ಕಡಲ ತಡಿಯ ಊರುಗಳ ಪರಿಸ್ಥಿತಿ ಬೇರೆ. ದಾಖಲೆ ಪ್ರಕಾರ ಬಯಲುಸೀಮೆ ಜಿಲ್ಲೆಗಳಿಗಿಂತ ಇಲ್ಲಿ ಕಡಿಮೆ ತಾಪಮಾನವಿದೆ. ಗುರುವಾರ ಗರಿಷ್ಠ 37, ಕನಿಷ್ಠ 27 ಡಿ.ಸೆ. ಇದ್ದರೂ 42-33 ಇದ್ದಂತೆ ಭಾಸವಾಗಿದೆ. ಈ ತಿಂಗಳ ಕೊನೆವರೆಗೂ ಗರಿಷ್ಠ ತಾಪಮಾನ 35 ಡಿ.ಸೆ. ದಾಟುವುದಿಲ್ಲ. ಆದರೆ ಅನುಭವಕ್ಕೆ ಬರುವುದು 40 ಡಿ.ಸೆ.ಯಷ್ಟು! ನದಿ-ಸಾಗರ ಇರುವುದರಿಂದ ಕರಾವಳಿಯ ಹವೆಯಲ್ಲಿ ತೇವಾಂಶ ಇದೆ. ಹೀಗಾಗಿ ರಾತ್ರಿಯಲ್ಲೂ ಬೆವರು ಹರಿಯುವುದು ಮುಂದುವರಿಯಲಿದೆ. ಮುನ್ಸೂಚನೆ ಪ್ರಕಾರ, ಆಗಾಗ ಗಾಳಿಯ ವೇಗ ಕಡಿಮೆಯಾಗಿ ಕಿರಿಕಿರಿ ಎನಿಸಬಹುದು.

Leave a Reply

Your email address will not be published. Required fields are marked *