ಕೊಡುಗೆ ಏನು ಎಂದು ಪ್ರಶ್ನಿಸಿದ ಬಿಜೆಪಿ ಅಭ್ಯರ್ಥಿ

ಗುರುಮಠಕಲ್: ಕಲಬುರಗಿ ಲೋಕಸಭಾ ಕ್ಷೇತ್ರದ ಜನರ ಸೇವೆ ಮಾಡಲು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದು, ನನಗೊಂದು ಅವಕಾಶ ಮಾಡಿಕೊಡಿ ಎಂದು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಮನವಿ ಮಾಡಿದರು.

ವಿಧಾನಸಭೆ ಕ್ಷೇತ್ರದ ಚಂಡರಕಿ, ಕೊಂಕಲ್, ಕಂದಕೂರ, ಗುರುಮಠಕಲ್ಗಳಲ್ಲಿ ಗುರುವಾರ ಪ್ರಚಾರ ಕೈಗೊಂಡ ಅವರು, 40 ವರ್ಷ ಗುರುಮಠಕಲ್ನಿಂದಲೇ ಅಧಿಕಾರ ಅನುಭವಿಸಿದ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿಲ್ಲ, ಬದಲಿಗೆ ತಾವು ಅಭಿವೃದ್ಧಿ ಹೊಂದಿದ್ದಾರೆ ಎಂದು ಟಾಂಗ್ ನೀಡಿದರು.

ತಮ್ಮ ಕುಟುಂಬದವರ ಹೆಸರಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮಾಡಿದ್ದಾರೆ. ಆದರೆ ಗುರುಮಠಕಲ್ನಲ್ಲಿ ಒಂದಾದರೂ ಶಿಕ್ಷಣ ಸಂಸ್ಥೆ ಆರಂಭಿಸಿಲ್ಲ. ನಿಜವಾಗಿಯೂ ಮಾಡಿದ್ದೇ ಆದಲ್ಲಿ ಜನತೆ ಉದ್ಯೋಗಕ್ಕಾಗಿ ಗುರುಮಠಕಲ್ ಬಿಟ್ಟು ಬೇರೆಡೆ ಯಾಕೆ ಗುಳೆ ಹೋಗುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಗುರುಮಠಕಲ್ ಜನ ಬೆಳೆಯಬಾರದು ಎಂಬ ದುರುದ್ದೇಶದಿಂದಲೇ ಡಾ.ಖರ್ಗೆ ಒಂದೂ ಕೈಗಾರಿಕೆ ಶಿಕ್ಷಣ ಸಂಸ್ಥೆ ಆರಂಭಿಸಿಲ್ಲ. ಕೇವರ ಅವರು ಮತ್ತು ಅವರ ಕುಟುಂಬ ಬೆಳೆದರೆ ಸಾಕು ಎಂಬ ಸ್ವಾರ್ಥ ಭಾವನೆ ಅವರಲ್ಲಿದೆ. ಗುರುಮಠಕಲ್ ಜನತೆ ಗುಳೆ ಹೋಗುವಂತೆ ಮಾಡಿದ್ದೇ ಖರ್ಗೆ ಅವರ ಬಹುದೊಡ್ಡ ಸಾಧನೆ ಎಂದು ಲೇವಡಿ ಮಾಡಿದರು.

ಶಾಸಕ ವೆಂಕಟರಡ್ಡಿ ಮುದ್ನಾಳ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಮುಖಂಡರಾದ ಸಾಯಿಬಣ್ಣ ಬೋರಬಂಡಾ, ನರಸಿಂಹಲು ನೀರೆಟ್ಟಿ ಇತರರಿದ್ದರು.