ಕೊಡಗು ಪ್ರವಾಸಿ ಉತ್ಸವಕ್ಕೆ ತೆರೆ

ಮಡಿಕೇರಿ : ಕೊಡಗಿನ ಇತಿಹಾಸದಲ್ಲಿ ಕಂಡು ಕೇಳರಿಯದಷ್ಟು ಸಂಖ್ಯೆಯಲ್ಲಿ ಜನಸ್ತೋಮ ಪಾಲ್ಗೊಂಡ ಕೊಡಗು ಪ್ರವಾಸಿ ಉತ್ಸವ ಭಾನುವಾರ ರಾತ್ರಿ ಅದ್ದೂರಿ ತೆರೆ ಕಂಡಿತು. ಗಾಂಧಿ ಮೈದಾನದಲ್ಲಿ 3 ದಿನ ಹಮ್ಮಿಕೊಂಡಿದ್ದ ವೈವಿಧ್ಯಮಯ ಕಾರ್ಯಕ್ರಮಗಳು ಉತ್ಸವ ಯಶಸ್ವಿ ಆಗುವಂತೆ ಮಾಡಿದವು.
ಪ್ರವಾಸಿ ಉತ್ಸವದ ಮೂಲಕ ಕೊಡಗು ಸುರಕ್ಷಿತವಾಗಿದೆ ಎಂಬ ಭಾವನೆ ಹರಡಲು ಸಫಲರಾಗಿದ್ದಾರೆ. ಇದಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಆಗಮಿಸಿದ್ದಾರೆ. ರೆಸಾರ್ಟ್, ಹೋಂಸ್ಟೇ, ಹೋಟೆಲ್‌ಗಳು ಭರ್ತಿ ಆಗಿದ್ದವು. ಇದರಿಂದ ಪ್ರವಾಸೋದ್ಯಮ ಅವಲಂಬಿಸಿರುವವರ ಮೊಗದಲ್ಲಿ ಸಂತಸ ಮೂಡಿದೆ.
ಪ್ರವಾಸಿ ಉತ್ಸವಕ್ಕೆ ಪ್ರವಾಸೋದ್ಯಮ ಇಲಾಖೆ ಬರೋಬ್ಬರಿ 1 ಕೋಟಿ ರೂ. ವಿನಿಯೋಗಿಸಿದೆ. 15 ಲಕ್ಷ ರೂ. ವೆಚ್ಚದಲ್ಲಿ ತೋಟಗಾರಿಕೆ ಇಲಾಖೆ ಮೂಲಕ ರಾಜಾಸೀಟ್ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಪಶುಪಾಲನೆ ಇಲಾಖೆ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನದಲ್ಲಿ 144 ಶ್ವಾನಗಳು ಪಾಲ್ಗೊಂಡಿದ್ದವು.
ಕಲಾ ವೈಭವ: ಮೂರು ದಿನ ಗಾಂಧಿ ಮೈದಾನದಲ್ಲಿ ಸಜ್ಜುಗೊಂಡಿದ್ದ ತೆರೆದ ವೇದಿಕೆಯಲ್ಲಿ ವೈವಿಧ್ಯಮಯ ಕಲಾ ಪ್ರದರ್ಶನಗಳು ನಡೆದವು. ನಾಡಿನ ಖ್ಯಾತ ಗಾಯಕ- ಗಾಯಕಿಯರು ಜನಪ್ರಿಯ ಗೀತೆಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದಲ್ಲಿ ಭಾನುವಾರ ನಡೆದ ಸಂಗೀತ ಸಂಜೆ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅರ್ಜುನ್ ಜನ್ಯ ಹಾಡಿಗೆ, ನೃತ್ಯಕ್ಕೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಹಾಡಿಗೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಸ್ಥಳೀಯ ಕಲಾವಿದರಿಗಾಗಿ ಕರ್ನಾಟಕ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇತರೆ ಯಾವ ಕಲಾತಂಡಗಳಿಗೂ ವೇದಿಕೆಯಲ್ಲಿ ಕಲಾಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಿಲ್ಲ. ಹೊರ ಭಾಗದಿಂದ ಆಗಮಿಸಿದ ಕಲಾವಿದರಿಗೆ ಅವಕಾಶ ನೀಡಲಾಯಿತು.
ಬಹುತೇಕ ಕಲಾವಿದರು ಹಾಡುವ ಮುನ್ನ, ಹಾಡಿದ ಮೇಲೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರನ್ನು ಹೊಗಳುತ್ತಿದ್ದರು. ಸಂತ್ರಸ್ತರ ಸಂಕಷ್ಟವನ್ನು ಶೇ.99 ರಷ್ಟು ಪರಿಹಾರ ಮಾಡಿರುವುದು ಸಾ.ರಾ. ಮಹೇಶ್ ಎಂದು ನಿರೂಪಕರೊಬ್ಬರು ಹೇಳುವುದರ ಮೂಲಕ ಅಚ್ಚರಿ ಮೂಡಿಸಿದರು.
ಓಪನ್ ಸ್ಟ್ರೀಟ್ ಫೆಸ್ಟಿವೆಲ್: ಪ್ರಥಮ ಬಾರಿಗೆ ಮಡಿಕೇರಿಯಲ್ಲಿ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟಿವೆಲ್ ಸಫಲವಾಯಿತು. ರಾಜಾಸೀಟ್ ಉದ್ಯಾನಕ್ಕೆ ತೆರಳುವ ಮಾರ್ಗದಲ್ಲಿ ಭಾನುವಾರ ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಳಿಸುವುದರ ಮೂಲಕ ಓಪನ್ ಸ್ಟ್ರೀಟ್ ಫೆಸ್ಟಿವೆಲ್‌ಗೆ ಅನುವು ಮಾಡಿಕೊಡಲಾಗಿತ್ತು.
ಸ್ಥಳೀಯ ಕಲಾವಿದರಿಂದ ದಿನಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 40 ಮಳಿಗೆಗಳಲ್ಲಿ ವ್ಯಾಪಾರ- ವಹಿವಾಟು ಭ ರ್ಜರಿಯಾಗಿ ನಡೆಯಿತು. ಪ್ರವಾಸೋದ್ಯಮದ ಹೊಸ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಮಂಜಿನಗರಿ ತೆರೆದುಕೊಂಡಿತು.