ಕೊಡಗಿನಲ್ಲಿ ಭಾರತ-ಇಸ್ರೇಲ್ ಅಧ್ಯಯನ ಕೇಂದ್ರ

ಗೋಣಿಕೊಪ್ಪಲು: ಇಸ್ರೇಲ್ ಮೂಲದ ಯಹೂದಿ ಇಟಾಮರ್ ಓರನ್ ನಾರದಮುನಿ ಸಮಾಧಿ ಸ್ಥಳವಾಗಿರುವ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದ ಕುಪ್ಪಂಡ ರಾಜಪ್ಪ- ಛಾಯಾ ನಂಜಪ್ಪ ಅವರ ವಿಕ್ಟೋರಿ ಎಸ್ಟೇಟ್‌ನಲ್ಲಿ ‘ಭಾರತ- ಇಸ್ರೇಲ್ ಅಧ್ಯಯನ ಕೇಂದ್ರ’ ಪ್ರಾರಂಭವಾಗಲಿದೆ.

ಎರಡೂ ದೇಶಗಳ ನಡುವೆ ಕೃಷಿ, ತಾಂತ್ರಿಕತೆ ಸೇರಿ ವಿವಿಧ ವಿಷಯಗಳ ವಿಚಾರ ವಿನಿಮಯ ಮತ್ತು ಅಧ್ಯಯನಕ್ಕಾಗಿ ದಿಯಾ ಮಿನೊರ್ಹ್‌ ಫೌಂಡೇಷನ್ ಮೂಲಕ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಉದ್ದೇಶಿತ ಅಧ್ಯಯನ ಕೇಂದ್ರಕ್ಕಾಗಿ ತಮ್ಮ ಎರಡು ಎಕರೆ ಕಾಫಿ ತೋಟವನ್ನು ಬಿಟ್ಟುಕೊಡಲು ರಾಜಪ್ಪ ದಂಪತಿ ಮುಂದಾಗಿದ್ದಾರೆ. ಮುಂದಿನ ಅಗತ್ಯತೆಗೆ ತಕ್ಕಂತೆ 5 ಎಕರೆ ಜಾಗ ನೀಡಲು ಈ ಕುಟುಂಬ ಸಿದ್ಧವಾಗಿದೆ.

ದಿಯಾ ಮಿನೊರ್ಹ್‌ ಫೌಂಡೇಷನ್‌ನಲ್ಲಿ ಕುಪ್ಪಂಡ ರಾಜಪ್ಪ- ಛಾಯಾ ನಂಜಪ್ಪ, ಉದ್ಯಮಿಗಳಾದ ಬ್ರಿಜೇಶ್ ರೆಡ್ಡಿ, ಅಮಿತ್ ಶೆಟ್ಟಿ, ಪ್ರಕಾಶ್ ಕಾಮತ್ ಇದ್ದಾರೆ. ಭಾರತ- ಇಸ್ರೇಲ್ ನಡುವೆ ಸಾಂಸ್ಕೃತಿಕ ಬಾಂಧವ್ಯ ಹಾಗೂ ಆರ್ಥಿಕ ಶಕ್ತಿ ವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತದೆ. ಭಾರತ- ಇಸ್ರೇಲ್ ಇತಿಹಾಸ, ಪ್ರಸ್ತುತ ವಿದ್ಯಮಾನಗಳು, ಭವಿಷ್ಯದ ಸವಾಲುಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರದಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

ಇಸ್ರೇಲ್‌ಗೆ ಖುದ್ದು ಭೇಟಿ ನೀಡಿ ಅಲ್ಲಿನ ಕೃಷಿ ಸಾಧನೆ, ತಾಂತ್ರಿಕ ಪರಿಣತಿ ಗಮನಿಸಿದ್ದೇನೆ. ಭಾರತ- ಇಸ್ರೇಲ್ ಜನತೆಗೆ ಹೆಚ್ಚಿನ ಪ್ರಯೋಜನವಾಗುವ ನಿಟ್ಟಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲಾಗುತ್ತಿದೆ. ಸಣ್ಣ ಕೃಷಿ ಜಾಗದಲ್ಲಿ ಹೆಚ್ಚಿನ ಫಸಲು ಪಡೆಯುತ್ತಿದ್ದಾರೆ. ಕೃಷಿ ತಂತ್ರಜ್ಞಾನದ ಮೂಲಕ ಇಸ್ರೇಲ್ ಕೃಷಿಕರು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇದರ ಪ್ರಯೋಜನ ಭಾರತೀಯ ಕೃಷಿಕರಿಗೂ ಸಿಗುವಂತಾಗಬೇಕೆಂದು ಛಾಯಾ ನಂಜಪ್ಪ ಹೇಳುತ್ತಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿನಿಧಿಗಳ ಮಾರ್ಗದರ್ಶನದಡಿ ಐದು ತಿಂಗಳ ಅವಧಿಯಲ್ಲಿ ಕೇಂದ್ರದ ಸ್ಥಾಪನೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮೊದಲ ಕಂತಿನಲ್ಲಿ 1.50 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಅಧ್ಯಯನ ಕೇಂದ್ರವನ್ನು ವಿಶ್ವವಿದ್ಯಾಲಯವಾಗಿ ಮಾರ್ಪಡಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಎರಡು ದೇಶಗಳ ನಡುವಿನ ತಾಂತ್ರಿಕತೆಯನ್ನು ವಿನಿಮಯ ಮಾಡಿಕೊಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಅಧ್ಯಯನ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗುವುದೆಂದು ಉದ್ಯಮಿಗಳಾದ ಬ್ರಿಜೇಶ್ ರೆಡ್ಡಿ, ಅಮಿತ್ ಶೆಟ್ಟಿ ಹೇಳಿದ್ದಾರೆ.

Leave a Reply

Your email address will not be published. Required fields are marked *