ಕೊಟ್ಟ ಮನೆ ಮಾರೋದು ನ್ಯಾಯನಾ?

ಪಾವಗಡ: ಮನೆ ಇಲ್ಲ ಎಂದು ಮನೆ ಕಟ್ಟಿಕೊಟ್ಟರೆ, ಬೇರೆಯವರಿಗೆ ಮಾರುವುದು ಯಾವ ನ್ಯಾಯ. ಈ ರೀತಿ ಆದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ವೆಂಕಟರವಣಪ್ಪ ಎಚ್ಚರಿಸಿದರು.

ಪುರಸಭಾ ಕಾರ್ಯಾಲಯದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.

ಪಟ್ಟಣದ ಕುಮಾರಸ್ವಾಮಿ ಬಡಾವಣೆಯಲ್ಲಿ ಸರ್ಕಾರ ಕಟ್ಟಿಸಿಕೊಟ್ಟಿರುವ ಮನೆಗಳನ್ನು ಫಲಾನುಭವಿಗಳು ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಬದಲಾಗದಿದ್ದರೆ ನಾವು ಬುದ್ಧಿ ಹೇಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅರಕ್ಯಾತನಹಳ್ಳಿಯಲ್ಲಿ ನಿರ್ವಣವಾಗುತ್ತಿರುವ 220 ಕೆ.ವಿ.ವಿದ್ಯುತ್ ಸ್ಥಾವರವನ್ನು ಮುಂದಿನ ತಿಂಗಳು ಉದ್ಘಾಟಿಸಲಾಗುವುದು. ನಾಗಲಮಡಿಕೆ ಗ್ರಾಮದಲ್ಲಿ ಕೊರೆದಿರುವ ಕೊಳವೆಬಾವಿಗಳಿಂದ ಪಟ್ಟಣಕ್ಕೆ ಶೀಘ್ರವೇ ಕುಡಿಯುವ ನೀರು ಪೂರೈಸುವಂತೆ ಪುರಸಭೆಗೆ ಅಧಿಕಾರಿಗಳಿಗೆ ಸೂಚಿಸಿದರು.

ಕೊಳವೆಬಾವಿ ಕೊರೆಸುವಿಕೆ ಮತ್ತು ಪಟ್ಟಣದಲ್ಲಿ ಬೈಪಾಸ್ ನಿರ್ವಣ, ಕೆಲವು ವಾರ್ಡ್​ಗಳನ್ನು ಕೊಳಚೆ ಪ್ರದೇಶ ಎಂದು ಘೋಷಿಸುವಂತೆ ಪುರಸಭೆ ಸದಸ್ಯರಾದ ಸುದೇಶ್ ಬಾಬು, ಮನುಮಹೇಶ್ ಮನವಿ ಮಾಡಿದರು.

ಸದಸ್ಯರಾದ ಮೇದಾವಿ ನಾಗರಾಜು, ಬಾಲಸುಬ್ರಮಣ್ಯಂ, ವಿಶ್ವನಾಥ್, ಪುರಸಭೆ ಮಾಜಿ ಅಧ್ಯಕ್ಷ ಎ. ಶಂಕರರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಜಿ. ನವೀನ್ ಚಂದ್ರ, ಕೊಳಚೆ ನಿಮೂಲನಾ ಮಂಡಳಿ ಇಂಜಿನಿಯರ್ ಹನುಮಂತರೆಡ್ಡಿ, ಸುಧೀರ್ ಮಾತನಾಡಿದರು.

ತಹಸೀಲ್ದಾರ್ ಡಿ.ವರದರಾಜು, ಎಪಿಎಂಸಿ ಅಧ್ಯಕ್ಷ ರವಿ, ಪುರಸಭೆ ಉಪಾಧ್ಯಕ್ಷೆ ನಾಗಲಕ್ಷ್ಮಮ್ಮ, ಸದಸ್ಯರಾದ ಪಿ.ಎಚ್.ರಾಜೇಶ್, ವಸಂತ್​ಕುಮಾರ್, ನಾಗೇಂದ್ರ, ರಾಮಾಂಜಿನಪ್ಪ, ಶ್ರೀನಿವಾಸ್, ರಾಧಮ್ಮ ಪ್ರಕಾಶ್, ಪಾರ್ವತಮ್ಮ, ರಿಜ್ವಾನ್ ಉಲ್ಲಾ ಇತರರಿದ್ದರು.

ಕೆರೆ ಅಭಿವೃದ್ಧಿ ಪಡಿಸಿ: ಹೊರಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪುರಸಭೆ ನೌಕರರನ್ನು ಕಾಯಂಗೊಳಿಸಲು ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಪಟ್ಟಣದ ದೊರಾಳಹಳ್ಳ ಹಾಗೂ ಅಗಸರಕುಂಟೆ ಕೆರೆ ಅಭಿವೃದ್ಧಿ ಪಡಿಸಿದರೆ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಿಸಬಹುದು ಎಂದು ಪುರಸಭೆ ಅಧ್ಯಕ್ಷೆ ಸುಮಾಅನಿಲ್ ಸಚಿವರಿಗೆ ಮನವಿ ಮಾಡಿದರು.

3.20 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 1.50 ಕೋಟಿ ವೆಚ್ಚದ 300 ಮನೆ ನಿರ್ವಣ, ಎಪಿಎಂಸಿ ಅವರಣದಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ಗೋದಾಮು ನಿರ್ವಣ, ಸರ್ಕಾರಿ ಜೂನಿಯರ್ ಕಾಲೇಜು ಅವರಣದಲ್ಲಿ 1.20 ಕೋಟಿ ವೆಚ್ಚದಲ್ಲಿ ಕೊಠಡಿಗಳ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಪುರಸಭೆಯಿಂದ 330 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ, 40 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಧನಸಹಾಯ, ವಾಜಪೇಯಿ ವಸತಿ ಯೋಜನೆ 50 ಫಲಾನುಭವಿಗಳಿಗೆ ಅದೇಶ ಪತ್ರ ವಿತರಣೆ, ಇಬ್ಬರು ಅಂಗವಿಕಲರಿಗೆ ವಾಹನ ಸೌಲಭ್ಯ, 94 ಸಿಸಿಯಲ್ಲಿ 220, ಮತ್ತು 94 ಸಿಯಲ್ಲಿ 50 ಫಲಾನುಭವಿಗಳಿಗೆ ಹಕ್ಕು ಪತ್ರ, 250 ಪಿಂಚಣಿ ಮಂಜೂರಾತಿ ಪತ್ರವನ್ನು ಸಚಿವರು ವಿತರಿಸಿದರು.