ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಕೊಕಟನೂರ: ಮಗಳನ್ನು ಗಂಡನ ಮನೆಗೆ ಬಿಡಲು ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಹಿರೇಮಠ ತೋಟದ ವಸತಿಗೆ ಬುಧವಾರ ಬಂದಿದ್ದ ವ್ಯಕ್ತಿಯ ಮೇಲೆ ಅಳಿಯನ ಮನೆಯವರು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಪ್ರಾಥಮಿಕ ಚಿಕಿತ್ಸೆ ನಂತರ ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಗುರಯ್ಯ ಬಾಳಯ್ಯ ಹಿರೇಮಠ (48) ಗಾಯಗೊಂಡ ವ್ಯಕ್ತಿ. ತಮ್ಮ ಮಗಳಾದ ಲಕ್ಷ್ಮೀಯನ್ನು ಕಳೆದ 8 ವರ್ಷಗಳ ಹಿಂದೆ ಕಟಗೇರಿ ಗ್ರಾಮದ ಮಲ್ಲಯ್ಯ ಹಿರೇಮಠ ಎಂಬುವವರ ಪುತ್ರ ಮಹೇಶ ಎಂಬುವವನಿಗೆ ಮದುವೆ ಮಾಡಿ ಕೊಟ್ಟಿದ್ದರು. ಹೆರಿಗೆಗೆಂದು ತವರು ಮನೆಗೆ ಬಂದಿದ್ದ ಮಗಳನ್ನು ಬುಧವಾರ ಮೊಮ್ಮಗನ ಜತೆ ಕರೆದುಕೊಂಡು ಅಕೆಯ ಗಂಡನ ಮನೆಗೆ ಬಿಡಲು ಬಂದಾಗ ಅಳಿಯ ಮಹೇಶ ಮಲ್ಲಯ್ಯ ಹಿರೇಮಠ, ಅವನ ತಂದೆ ಮಲ್ಲಯ್ಯ ಹಿರೇಮಠ ಹಾಗೂ ಸುವರ್ಣ ಮಲ್ಲಯ್ಯ ಹಿರೇಮಠ ಇವರೆಲ್ಲ ಸೇರಿ ಹಲ್ಲೆ ಮಾಡಿದ್ದಾರೆ. ಹಲ್ಲೆ ನಂತರ ಇವರನ್ನು ತಮ್ಮ ಮನೆಯಲ್ಲಿಯೇ ಕೂಡಿ ಇಟ್ಟಿದ್ದಾರೆ. ಅಕ್ಕ-ಪಕ್ಕದ ಜನರಿಂದ ಮಾಹಿತಿ ಪಡೆದ ಅಥಣಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ನಡೆಸಿ ಗಾಯಗೊಂಡ ಗುರಯ್ಯ ಅವರನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸುವುದನ್ನು ಕಂಡ ಹಲ್ಲೆ ಮಾಡಿದ ವ್ಯಕ್ತಿಗಳು ಗದ್ದೆಯಲ್ಲಿರುವ ಜೋಳದ ಬೆಳೆಯಲ್ಲಿ ಅಡಗಿ ಕುಳಿತಿದ್ದರು. ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಅಥಣಿ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್‌ಐ ಯು.ಎಸ್.ಅವಟಿ, ತನಿಖಾ ಸಹಾಯಕ ಸುಭಾಷ ಬಬಲೇಶ್ವರ, ಲಕ್ಷ್ಮಣ ಅಜ್ಜಣಗಿ ಮತ್ತು ರೇಣುಕಾ ಹೊನವಾಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.