ಕೊಂಚ ಬಿಡುವು ನೀಡಿದ ವರುಣ

ಕಾರವಾರ: ಬುಧವಾರ ರಾತ್ರಿ ಹಾಗೂ ಗುರುವಾರ ಅಬ್ಬರಿಸಿದ್ದ ವರುಣ ಶುಕ್ರವಾರ ಕೊಂಚ ಬಿಡುವು ನೀಡಿದ್ದಾನೆ. ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಕೆಂಪೇರಿ ತಂಟೆ ಮಾಡುತ್ತಿದ್ದ ನದಿಗಳು ಕೊಂಚ ಶಾಂತವಾಗಿದ್ದು, ಪ್ರವಾಹದ ಭೀತಿ ಕಡಿಮೆಯಾಗಿದೆ. ಗಂಗಾವಳಿ, ಅಘನಾಶಿನಿ, ಕಾಳಿ ನದಿಗಳಲ್ಲಿ ನೀರಿನ ಹರಿವು ಕೊಂಚ ಕಡಿಮೆಯಾಗಿದೆ. ಇದರಿಂದ ನದಿ ಪಾತ್ರಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಅಲ್ಲಲ್ಲಿ ಹಾನಿ ಮಾತ್ರ ತಪ್ಪಿಲ್ಲ.

ಕಾರವಾರದಲ್ಲಿ ಜೋರು: ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಕಾರವಾರದಲ್ಲಿ ಭಾರಿ ಮಳೆ ಸುರಿಯಿತು. ಇದರಿಂದ ನಗರದ ಗಾಂಧಿ ಮಾರುಕಟ್ಟೆಯಲ್ಲಿ ನೀರು ತುಂಬಿ ವ್ಯಾಪಾರಕ್ಕೆ ತೊಂದರೆ ಉಂಟಾಯಿತು. ಚರಂಡಿಗಳಲ್ಲಿ ನೀರು ಕಟ್ಟಿದ್ದರಿಂದ ಮೊಳಕಾಲುಮಟ್ಟ ನೀರು ತುಂಬಿಕೊಂಡಿತು. ಅಂಗಡಿಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಆದರೆ, ಸಂಜೆಯ ಹೊತ್ತಿಗೆ ಮಳೆ ಇಳಿಮುಖವಾಗಿದ್ದರಿಂದ ಆತಂಕ ದೂರಾಗಿದೆ. ಕಾರವಾರದ ಜಿಲ್ಲಾ ಆಸ್ಪತ್ರೆಯ ಎದುರು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ತುಂಬಿಕೊಂಡು ರೋಗಿಗಳು ಹಾಗೂ ಸಿಬ್ಬಂದಿ ಓಡಾಟಕ್ಕೆ ತೊಂದರೆ ಉಂಟಾಗಿದೆ. ಚೆಂಡಿಯಾದಲ್ಲಿ ತಕಾರಾಮ ರಾಮಚಂದ್ರ ನಾಯ್ಕ, ಮಹಾದೇವ ನಾಯ್ಕ ಅವರ ಮನೆಗಳ ಮೇಲೆ ಮರ ಮುರಿದು ಬಿದ್ದು, ಸಾವಿರಾರು. ರೂ. ಹಾನಿಯಾಗಿದೆ. ಕಂದಾಯ ನಿರೀಕ್ಷಕ ಶ್ರೀಧರ ನಾಯ್ಕ, ಗ್ರಾಮ ಲೆಕ್ಕಿಗ ವಿ.ಕೆ.ನಾಯ್ಕ, ಹಾಗೂ ಗ್ರಾಮ ಸಹಾಯಕ ಜನಾರ್ದನ ನಾಯ್ಕ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಗಂಗಾವಳಿ ನದಿಯ ಪ್ರವಾಹ ಇಳಿಮುಖ: ಅಂಕೋಲಾ: ಶುಕ್ರವಾರ ಮಳೆಯ ಪ್ರಮಾಣ ತಗ್ಗಿದ್ದರಿಂದಾಗಿ ಗಂಗಾವಳಿ ನದಿಯ ಪ್ರವಾಹವೂ ಇಳಿಮುಖವಾಗಿದೆ. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗುರುವಾರ ಹಲವು ಮನೆಗಳು ಮತ್ತು ಕೃಷಿ ಭೂಮಿ ಜಲಾವೃತಗೊಂಡು ಜನರು ಆತಂಕಕ್ಕೀಡಾಗಿದ್ದರು.

ಗಂಗಾವಳಿ ನದಿಯ ನೀರಿನ ರಭಸಕ್ಕೆ ಗುರುವಾರ ರಾತ್ರಿ ಮಂಜಗುಣಿಯಲ್ಲಿ ಲಂಗರು ಹಾಕಿದ್ದ ಬಾರ್ಜ್ ದಕ್ಕೆಯ ಮೇಲ್ಭಾಗಕ್ಕೆ ಬಂದಿರುವುದರಿಂದ ಶುಕ್ರವಾರವೂ ಬಾರ್ಜ್ ಸಂಚಾರ ಸ್ಥಗಿತಗೊಂಡಿದೆ. ಅದನ್ನು ಸರಿಪಡಿಸಲು ಬಾರ್ಜ್​ನ ಚಾಲಕರು ಮತ್ತು ಸಿಬ್ಬಂದಿ ಶ್ರಮಪಡುತ್ತಿದ್ದಾರೆ. ಜಲಾವೃತಗೊಂಡ ಕೃಷಿ ಭೂಮಿಯಲ್ಲಿ ನೀರಿನ ಮಟ್ಟ ತಗ್ಗತೊಡಗಿದೆ. ಘಟ್ಟದ ಮೇಲಿನ ನೀರಿನ ಹರಿವಿಗೆ ಅರಣ್ಯದ ಒಣ ಮತ್ತು ಹಸಿ ಮರ ಹಾಗೂ ತುಂಡುಗಳು ತೇಲಿ ಬರುತ್ತಿದ್ದು, ನದಿಯ ಅಕ್ಕ ಪಕ್ಕದ ಗ್ರಾಮದ ಮೀನುಗಾರರು ದೋಣಿಯ ಮೂಲಕ ಕಟ್ಟಿಗೆ ಹಿಡಿಯುತ್ತಿದ್ದಾರೆ. ಮಂಜಗುಣಿಯಲ್ಲೂ ಸಾಕಷ್ಟು ಕಟ್ಟಿಗೆ ಸಂಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *