ಕೈ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ

ರವಾಡರಾಜ್ಯದಲ್ಲಿ ದ್ವಿತೀಯ ಹಂತದಲ್ಲಿ ಜರುಗುವ ಲೋಕಸಭೆ ಚುನಾವಣಾ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಕ್ಷೇತ್ರದಲ್ಲಿ ಪ್ರಚಾರ ಕಾವೇರಿದೆ. ಬಿಜೆಪಿ- ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಕ್ಷೇತ್ರದಾದ್ಯಂತ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ.

ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಬಿಜೆಪಿಯ ಹಾಲಿ ಸಂಸದರು ಪ್ರಚಾರ ಕೈಗೊಂಡಿದ್ದರು. ಕಾಂಗ್ರೆಸ್​ನಿಂದ ಅಭ್ಯರ್ಥಿ ಯಾರು ಎಂಬ ಗೊಂದಲ ಏರ್ಪಟ್ಟಿತ್ತು. ಅಲ್ಲದೆ, ಹಲವರ ಹೆಸರು ಕೇಳಿಬಂದಿದ್ದರೂ ಅಂತಿಮವಾಗಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಿಕೆಟ್ ಘೊಷಿಸಲಾಯಿತು. ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ ಇರುವಾಗ ಟಿಕೆಟ್ ಘೊಷಣೆಯಾದರೂ ಅದಾಗಲೇ ವಿನಯ ಬಳಗ, ಟಿಕೆಟ್ ಸಿಗುವ ಖಾತ್ರಿಯಲ್ಲಿ ತಯಾರಿ ನಡೆಸಿ ಪ್ರಚಾರ ಕೈಗೊಂಡಿತ್ತು.

ಬಿಜೆಪಿಯ ಪ್ರಲ್ಹಾದ ಜೋಶಿ ಸತತ 3 ಬಾರಿ ಗೆದ್ದು 4ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ ವಿನಯ ಅವರನ್ನು ಗೆಲ್ಲಿಸುವ ಉಮೇದಿಯೊಂದಿಗೆ ಜಿಲ್ಲೆಯ ಕಾಂಗ್ರೆಸ್ ಪಡೆ ಒಗ್ಗಟ್ಟಾಗಿ ಶ್ರಮಿಸುತ್ತಿದೆ. ಟಿಕೆಟ್ ವಿಷಯವಾಗಿ ಆರಂಭದಲ್ಲಿ ಭಿನ್ನಮತ ಕಾಣಿಸಿಕೊಂಡಿತ್ತಾದರೂ ಈಗ ಅದೆಲ್ಲ ಶಮನಗೊಂಡಿದೆ. ಮಾಜಿ ಸಚಿವ, ಕೈ ಪಾಳಯದ ಪ್ರಭಾವಿ ನಾಯಕ ಎಸ್.ಆರ್. ಮೋರೆ ಸಹ ಬೆಂಬಲ ನೀಡಿದ್ದಾರೆ. ಮತ್ತೊಂದೆಡೆ ಮಾಜಿ ಸಚಿವರಾದ ಸಂತೋಷ ಲಾಡ್, ಕೆ.ಎನ್. ಗಡ್ಡಿ, ಹಿರಿಯ ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ದೀಪಕ ಚಿಂಚೋರೆ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ, ಇತರರು ಪ್ರಚಾರ ಕಾರ್ಯಕ್ಕಿಳಿದಿದ್ದಾರೆ.

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿರುವ ವಿನಯಗೆ ಜೆಡಿಎಸ್ ಪೂರ್ಣ ಸಾಥ್ ನೀಡುತ್ತಿದೆ. ನವಲಗುಂದದಲ್ಲಿ ಗಡ್ಡಿ ಅವರೊಂದಿಗೆ ಕಾಂಗ್ರೆಸ್​ನ ವಿನೋದ ಅಸೂಟಿ, ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ ಸಹ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲ್ಪಸಂಖ್ಯಾತ ಕೋಟಾ ಅಡಿ ಶಾಕೀರ್ ಸನದಿಗೆ ಟಿಕೆಟ್ ಕೈ ತಪ್ಪಿದ್ದರೂ ಅಸಮಾಧಾನ ಕಾಣುತ್ತಿಲ್ಲ. ಸ್ವತಃ ಮಾಜಿ ಸಂಸದ ಪ್ರೊ. ಐ.ಜಿ. ಸನದಿ ವಿನಯ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.

ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದು, ಪ್ರಚಾರ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್- ಬಿಜೆಪಿ ನೇರ ಪೈಪೋಟಿಯ ನಡುವೆಯೇ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳಿದ್ದರೂ ಪ್ರಚಾರವಿಲ್ಲದೇ ಅವರ ಸ್ಪರ್ಧೆ ಗೌಣವಾಗಿದೆ.

ಪ್ರಚಾರ ಕಣದಲ್ಲಿ ಸಂತೋಷ ಲಾಡ್: ವಿಧಾನಸಭೆ ಚುನಾವಣೆಯ ನಂತರ ಕಲಘಟಗಿ ಕ್ಷೇತ್ರದಿಂದ ದೂರವಾಗಿದ್ದ ಸಂತೋಷ ಲಾಡ್ ಪ್ರಚಾರದ ಕಣಕ್ಕಿಳಿದಿರುವುದು ಕೈ ಪಡೆಗೆ ಆ ಭಾಗದಲ್ಲಿ ಬಲ ತಂದಿದೆ. ಕಲಘಟಗಿ, ಅಳ್ನಾವರ ಭಾಗದಲ್ಲಿ ರೋಡ್ ಶೋ, ಬಹಿರಂಗ ಪ್ರಚಾರದ ಮೂಲಕ ಲಾಡ್, ವಿನಯ ಪರ ಮತಬೇಟೆ ನಡೆಸುತ್ತಿದ್ದಾರೆ. ಅದೇರೀತಿ ಕುಂದಗೋಳದಲ್ಲಿ ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿ ಪತ್ನಿ ಹಾಗೂ ಕುಟುಂಬದವರ ಬೆಂಬಲ ಕಾಂಗ್ರೆಸ್​ಗೆ ಸಿಕ್ಕಿದೆ.