ಕೈ ಕೋಟೆಯಲ್ಲಿ ಅರಳಿದ ಕಮಲ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದ ‘ಕೈ’ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿಗೆ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಸೋಲುಣಿಸಿದ್ದಾರೆ. ಅದೂ ಬರೋಬ್ಬರಿ 1,81,079 ಮತಗಳ ಅಂತರದಿಂದ. (ಅಂಚೆ ಮತ ಹೊರತುಪಡಿಸಿ).

ಕಮಲ ಪಾಳಯಕ್ಕೆ ಈ ಬಾರಿ ಗೆಲುವಿನ ವಿಶ್ವಾಸವಿದ್ದರೂ ಇಷ್ಟು ದೊಡ್ಡ ಮಟ್ಟದ ಅಂತರ ನಿರೀಕ್ಷಿಸಿರಲಿಲ್ಲ. 30 ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡು ಗೆಲುವಿನ ನಗೆ ಬೀರಿದೆ. ಮತ್ತೊಂದೆಡೆ ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರು ಸಚಿವರು, ಐವರು ಶಾಸಕರು, ಇಬ್ಬರು ಬೆಂಬಲಿತ ಮೈತ್ರಿ ಪಕ್ಷದ ಶಾಸಕರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರಾಬಲ್ಯದ ನಡುವೆಯೂ ಕಾಂಗ್ರೆಸ್ ಧೂಳಿಪಟವಾಗಿದೆ.

ಕ್ಷೇತ್ರದಲ್ಲಿ 1977ರಿಂದ 2019ರವರೆಗೆ ನಡೆದ 11 ಲೋಕಸಭೆ ಚುನಾವಣೆಗಳ ಪೈಕಿ 10 ಬಾರಿ ಕಾಂಗ್ರೆಸ್ ಮತ್ತು ಒಮ್ಮೆ ಜೆಡಿಎಸ್ ಗೆಲುವಿನ ನಗೆ ಬೀರಿತ್ತು. ಹಿಂದೆ ಕಮಲ ಅರಳಿರಲೇ ಇಲ್ಲ. ಈ ಬಾರಿ ಬಿಜೆಪಿ ಕ್ಷೇತ್ರದಲ್ಲಿ ಮೊದಲ ಖಾತೆ ತೆರೆದಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಎಂ.ವೀರಪ್ಪ ಮೊಯ್ಲಿ ಪ್ರತಿಸ್ಪರ್ಧಿ ಬಚ್ಚೇಗೌಡರನ್ನು 9520 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ 15 ಅಭ್ಯರ್ಥಿಗಳು ಕಣದಲ್ಲಿದ್ದರೂ ಈ ಇಬ್ಬರ ನಡುವೆಯೇ ನೇರ ಹಣಾಹಣಿ ಇತ್ತು.

ಜೋರು ಉತ್ಸಾಹ, ಅಂತಿಮದಲ್ಲಿ ಮಾಯ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವತಿ ಬಳಿಯಿರುವ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿನ ಮತ ಎಣಿಕೆ ಕೇಂದ್ರಕ್ಕೆ ವೀರಪ್ಪ ಮೊಯ್ಲಿ ಬೆಳಗ್ಗೆ 6 ಗಂಟೆಗೆ ಬಂದಿದ್ದರು. ಮೊದಲು ಬೆಂಬಲಿಗರೊಂದಿಗೆ ಜೋರು ಉತ್ಸಾಹದಲ್ಲಿ ಗೆಲುವಿನ ಮಂತ್ರ ಜಪಿಸಿದರು. ಇವರಿಗೆ ಪುತ್ರ ಹರ್ಷ ಮೊಯ್ಲಿ ಸಾಥ್ ನೀಡಿದರು. ಮೊದಲ ಹತ್ತು ಸುತ್ತುಗಳವರೆಗೆ ಕಾದರೂ ವ್ಯತಿರಿಕ್ತ ಫಲಿತಾಂಶವೇ ಎದುರಾಗುತ್ತಿದ್ದುದರಿಂದ ಕುಟುಂಬಸ್ಥರು ಹೊರನಡೆದರು. ಇದರ ನಡುವೆ ಶಾಂತವಾಗಿದ್ದ ಮೊಯ್ಲಿ ಪ್ರತಿಸ್ಪರ್ಧಿ ಒಂದು ಲಕ್ಷ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿರುವುದು ಖಚಿತವಾಗುತ್ತಿದ್ದಂತೆ ಬೇಸರದಲ್ಲಿ ಬೆಂಬಲಿಗರನ್ನು ಬಿಟ್ಟು ತೆರಳಿದರು. ಯಾರನ್ನೂ ಮಾತನಾಡಿಸಲಿಲ್ಲ. ಇನ್ನು ಪರಸ್ಪರ ತೀವ್ರ ಪೈಪೋಟಿ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಗೆಲುವು ಖಾತ್ರಿಯಾಗುವವರೆಗೂ ಬರಲಿಲ್ಲ. ಅಂತಿಮ ಸುತ್ತಿನ ವೇಳೆಗೆ ಪುತ್ರ ಶರತ್ ಬಚ್ಚೇಗೌಡರೊಂದಿಗೆ ಆಗಮಿಸಿ ವಿಜಯೋತ್ಸವ ಆಚರಿಸಿದರು.

ಮೊಯ್ಲಿ ಕಿಚಾಯಿಸಿದ ಬಿಜೆಪಿ ಕಾರ್ಯಕರ್ತರು: ಮೊಯ್ಲಿ ಗೋ ಬ್ಯಾಕ್ ಅಭಿಯಾನ ನಡೆಸಿದ್ದ ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದಲ್ಲಿ ಸಾಮೂಹಿಕವಾಗಿ ಕೈಗಳನ್ನೆತ್ತಿ ಎತ್ತಿ ಟಾಟಾ, ಬೈ ಬೈ ಘೊಷಣೆ ಕೂಗುವ ಮೂಲಕ ಕಿಚಾಯಿಸಿದರು. ಮೋದಿ ಅಲೆ ಎದುರು ಮೊಯ್ಲಿ ಸುಳ್ಳು ಭರವಸೆಗಳು ಕೆಲಸ ಮಾಡಲಿಲ್ಲ. ಇನ್ನು ಕ್ಷೇತ್ರದಿಂದ ಹೊರಡಿ ಎಂದೆಲ್ಲ ಘೊಷಣೆ ಕೂಗಿದರು.

ಮುಖ ತೋರದ ಕೈ ಪಡೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತು ನಾಲ್ಕೈದು ಬೆಂಬಲಿಗರನ್ನು ಹೊರತುಪಡಿಸಿದರೆ ಕಾಂಗ್ರೆಸ್​ನ ಜನಪ್ರತಿನಿಧಿಗಳು ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ. ಸಚಿವರಾದ ಎನ್.ಶಿವಶಂಕರರೆಡ್ಡಿ ಮತ್ತು ಎಂ.ಟಿ.ಬಿ.ನಾಗರಾಜ್, ಕಾಂಗ್ರೆಸ್ ಶಾಸಕರಾದ ಡಾ.ಕೆ.ಸುಧಾಕರ್, ಎಸ್.ಎನ್.ಸುಬ್ಬಾರೆಡ್ಡಿ, ಟಿ.ವೆಂಕಟರಮಣಯ್ಯ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿನ ಸ್ವಪಕ್ಷೀಯ ಜನಪ್ರತಿನಿಧಿಗಳು ಮುಖ ತೋರಲಿಲ್ಲ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮಾಯವಾಗಿದ್ದರು. ಮೈತ್ರಿ ಪಕ್ಷ ಜೆಡಿಎಸ್​ನವರ ಸುಳಿವೇ ಇರಲಿಲ್ಲ.

8 ವಿಧಾನಸಭೆ ಕ್ಷೇತ್ರಗಳಲ್ಲೂ ಪಾರುಪತ್ಯ: ಮತ ಎಣಿಕೆಯ ಎಲ್ಲ 30 ಸುತ್ತಿನಲ್ಲಿ ಮಾತ್ರವಲ್ಲ, ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿಯೇ ಹೆಚ್ಚಿನ ಲೀಡ್ ಪಡೆದು ಪಾರುಪತ್ಯ ಮೆರೆದಿದೆ.

ಸಮ್ಮಿಶ್ರ ಸರ್ಕಾರದ ವಿರುದ್ಧ ಗುಟುರು ಹಾಕುತ್ತ, ಆಪರೇಷನ್ ಕಮಲದ ಶಾಸಕರ ಪಟ್ಟಿಯಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬರುತ್ತಿರುವ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 34,967 ಮತಗಳ ಲೀಡ್ ಸಿಕ್ಕಿದೆ. ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಕ್ಷೇತ್ರ ಗೌರಿಬಿದನೂರಿನಲ್ಲಿ 4162 ಮತ್ತು ಸಚಿವ ಎಂ.ಟಿ.ಬಿ.ನಾಗರಾಜ್ ಕ್ಷೇತ್ರ ಹೊಸಕೋಟೆಯಲ್ಲಿ 10150, ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ಕ್ಷೇತ್ರ ಬಾಗೇಪಲ್ಲಿಯಲ್ಲಿ 5831, ಟಿ.ವೆಂಕಟರಮಣಯ್ಯ ಕ್ಷೇತ್ರ ದೊಡ್ಡಬಳ್ಳಾಪುರದಲ್ಲಿ 20564, ಮೈತ್ರಿ ಜೆಡಿಎಸ್ ಪಕ್ಷದ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಕ್ಷೇತ್ರ ದೇವನಹಳ್ಳಿಯಲ್ಲಿ 10,584 ಮತ್ತು ಕೆ.ಶ್ರೀನಿವಾಸಮೂರ್ತಿ ಕ್ಷೇತ್ರ ನೆಲಮಂಗಲದಲ್ಲಿ 19,546 ಮತಗಳ ಅಂತರದ ಮುನ್ನಡೆ ಬಿಜೆಪಿಗೆ ಬಂದಿದೆ.

ಅಂತರ ಹೆಚ್ಚಲು ಕಾರಣ: ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರದ ಪೈಕಿ ಯಲಹಂಕ ಕ್ಷೇತ್ರ ಬಿಜೆಪಿ ಶಾಸಕರನ್ನು ಹೊಂದಿದೆ. ಇಲ್ಲಿ ನಿರೀಕ್ಷೆಯಂತೆ ಬರೋಬ್ಬರಿ 75,275 ಮತ ಬಂದಿವೆ. ಇದೇ ಬಿಜೆಪಿಗೆ ಗೆಲುವಿನ ಅಂತರ ಹೆಚ್ಚಾಗಲು ಪ್ರಮುಖ ಕಾರಣ. ಅಸಲಿಗೆ ಯಲಹಂಕ, ಹೊಸಕೋಟೆಯನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಕಮಲ ಹೆಚ್ಚಿನ ಪ್ರಾಬಲ್ಯ ಹೊಂದಿರಲಿಲ್ಲ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ದೊಡ್ಡಬಳ್ಳಾಪುರ ಕ್ಷೇತ್ರವನ್ನು ಕಾಂಗ್ರೆಸ್ ಬಹುತೇಕ ಭದ್ರಕೋಟೆಯನ್ನಾಗಿಸಿಕೊಂಡಿದೆ. ಇದರ ನಡುವೆಯೂ ಬಿಜೆಪಿ ಎದುರು ಮುಖಭಂಗ ಅನುಭವಿಸಿದೆ.