ಕೈ ಕಾರ್ಯಕರ್ತರ ಹೊಯ್ ಕೈ

ಧಾರವಾಡ: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಿದ್ದಕ್ಕೆ ಕಾರಣ ತಿಳಿಯಲು ಆಗಮಿಸಿದ್ದ ಕೆಪಿಸಿಸಿ ಸತ್ಯಶೋಧನಾ ಸಮಿತಿ ಎದುರೇ ಜಾತಿ ವಿಷಯವಾಗಿ ಕಾರ್ಯಕರ್ತರು ವಾಗ್ವಾದ ನಡೆಸಿ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಇಲ್ಲಿನ ನಿವೃತ್ತ ನೌಕರ ಭವನದಲ್ಲಿ ಗುರುವಾರ ನಡೆಯಿತು.

ಚುನಾವಣೆಯಲ್ಲಿ ಹಿನ್ನಡೆಗೆ ಕಾರಣ ತಿಳಿಯಲು ಸಮಿತಿ ಸದಸ್ಯರಾದ ಬಸವರಾಜ ರಾಯರೆಡ್ಡಿ, ಸುದರ್ಶನ, ವೀರಕುಮಾರ ಪಾಟೀಲ ಅವರು ಸ್ಥಳೀಯರ ಮುಖಂಡರ ಅಭಿಪ್ರಾಯ ತಿಳಿಯಲು ಸತ್ಯಶೋಧನಾ ಸಭೆ ನಡೆಸಿದ್ದರು.

ಸಭೆಯಲ್ಲಿ ಬಸವರಾಜ ರಾಯರೆಡ್ಡಿ ಮಾತನಾಡುವಾಗ ಮಾಧ್ಯಮದವರು ತೆರಳುತ್ತಿದ್ದಂತೆ ಸಭೆ ರೂಪು ರೇಷೆ ಬದಲಿಸಿ, ಪ್ರತಿ ಕ್ಷೇತ್ರದವರನ್ನು ಪ್ರತ್ಯೇಕ ಕರೆದು ಕ್ಲೋಸ್ ಡೋರ್ ಮೀಟಿಂಗ್ ಮಾಡಿ ಮಾಹಿತಿ ಸಂಗ್ರಹಕ್ಕೆ ತೀರ್ವನಿಸಲಾಯಿತು. ಆಗ ಪಕ್ಷದ ಮುಖಂಡ ಇಮ್ರಾನ್ ಕಳ್ಳಿಮನಿ ಆಕ್ರೋಶ ವ್ಯಕ್ತಪಡಿಸಿ, ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸುವ ಬದಲು ಎಲ್ಲರನ್ನೂ ಒಟ್ಟಾಗಿ ಕರೆದು ರ್ಚಚಿಸಿದರೆ ಸರಿಯಾದ ಕಾರಣ ಗೊತ್ತಾಗುತ್ತದೆ. ಇದೇ ರೀತಿ ಮಾಡಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೈ ತಪ್ಪುವಂತೆ ಮಾಡಲಾಗಿತ್ತು ಎಂದು ಆರೋಪಿಸಿದರು. ಆಗ ಕೆಲವರು ಜಾತಿ ಬಗ್ಗೆ ಮಾತನಾಡುವುದು ಬೇಡ ಎಂದ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಗಿತ್ತು. ಮತ್ತೆ ಎಲ್ಲರನ್ನೂ ಸಮಾಧಾನಪಡಿಸಿ ಸಭೆ ಪ್ರಾರಂಭಿಸಲಾಯಿತು.

ನಂತರ ಪ್ರತ್ಯೇಕ ಮಾಹಿತಿ ಸಂಗ್ರಹ ಮಾಡುವಾಗ ಸಹ ಇಮ್ರಾನ್ ಕಳ್ಳಿಮನಿ ಅವರು ಲಿಂಗಾಯತ ಧರ್ಮದ ಬಗ್ಗೆ ಮಾತನಾಡುತ್ತಿದ್ದಂತೆ ಇಡೀ ಸಭೆ ಗೊಂದಲದ ಗೂಡಾಗಿತ್ತು. ಆಗ ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ ಸೇರಿದಂತೆ ಇತರ ಕಾರ್ಯಕರ್ತರು ಇಮ್ರಾನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಕಾರ್ಯಕರ್ತರನ್ನು ಸಮಾಧಾನಪಡಿಸಲು ರಾಯರಡ್ಡಿ ಮಧ್ಯಪ್ರವೇಶಿಸಿದರೂ ಕೇಳಲಿಲ್ಲ. ಜಾತಿ ವಿಷಯ ಬಂದಾಗ ನಮಗೆ ಮೊದಲು ಜಾತಿ, ನಂತರ ಪಕ್ಷ. ಜಾತಿ ವಿಷಯವಾಗಿ ಯಾರೇ ಮಾತನಾಡಿದರೂ ಕೇಳುವುದಿಲ್ಲ ಎನ್ನುತ್ತ ಕೆಲವರು ಇಮ್ರಾನ್ ಮೇಲೆ ಕೈ ಮಾಡಲು ಸಹ ಮುಂದಾಗಿದ್ದರು. ಕೆಲ ಮುಖಂಡರು ಮಧ್ಯಪ್ರವೇಶಿಸಿ ಇಮ್ರಾನ್ ಕಳ್ಳಿಮನಿ ಅವರನ್ನು ಸಭೆಯಿಂದ ಹೊರಕ್ಕೆ ಕರೆದುಕೊಂಡು ಹೋಗುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.

ಕಾಂಗ್ರೆಸ್ ಸೋತಿದ್ದೇಕೆ…? ಗಂಭೀರ ಚರ್ಚೆ

ಧಾರವಾಡ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಗಂಭೀರವಾಗಿ ಚರ್ಚೆ ನಡೆಸಲಾಗುತ್ತಿದೆ. ಹೀಗಾಗಿ ಪ್ರತಿ ಕ್ಷೇತ್ರಗಳಿಗೆ ತೆರಳಿ ಸಲಹೆ, ಸೂಚನೆ ಪಡೆಯಲಾಗುತ್ತಿದೆ. ಸೆಪ್ಟೆಂಬರ್​ನಲ್ಲಿ ಸಂಪೂರ್ಣ ಮಾಹಿತಿ ಪರಿಶೀಲಿಸಿ ಅ. 2ರಂದು ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಸತ್ಯ ಶೋಧನಾ ಸಮಿತಿ ತಂಡದ ಸಂಚಾಲಕ ಬಸವರಾಜ ರಾಯರೆಡ್ಡಿ ಹೇಳಿದರು.

ನಗರದ ನಿವೃತ್ತ ನೌಕರರ ಭವನದಲ್ಲಿ ಗುರುವಾರ ನಡೆದ ಸತ್ಯಶೋಧನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಥಳೀಯ ಮುಖಂಡರಿಂದ ಮಾಹಿತಿ ಪಡೆಯಲಾಗುತ್ತಿದೆ. ಪಕ್ಷದ ಉಳಿವಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಶ್ನಾವಳಿ ಮೂಲಕ ಸಲಹೆ ಪಡೆಯಲಾಗುತ್ತಿದ್ದು, ನಿಷ್ಠುರ, ಪ್ರಾಮಾಣಿಕ ಸಲಹೆ ನೀಡಬೇಕು. ತಪ್ಪುಗಳ ಬಗ್ಗೆ ಮುಲಾಜಿಲ್ಲದೆ ಅಧ್ಯಕ್ಷರಿಗೆ ಮಾಹಿತಿ ನೀಡಲಾಗುವುದು ಎಂದರು.

ದೇಶದ ಒಳಿತಿಗೆ ಕಾಂಗ್ರೆಸ್ ಬಲಿಷ್ಠವಾಗಬೇಕಿದೆ ಹೊರತು, ನಾವು ಮಂತ್ರಿಯಾಗಲು ಅಲ್ಲ. ಹೀಗಾಗಿ ಕಾಲಕ್ಕೆ ತಕ್ಕಂತೆ ನಮ್ಮ ವಿಚಾರಣೆಗಳು ಬದಲಾಗಬೇಕಿದೆ. ಪಕ್ಷ ಬಲಿಷ್ಠವಾಗಲು ಬೂತ್ ಮಟ್ಟದಲ್ಲಿ ಗಟ್ಟಿ ಕೆಲಸಗಳು ನಡೆಯಬೇಕಿದೆ. ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದರೂ, ಕಾಂಗ್ರೆಸ್ ಹೆಚ್ಚಿನ ಮತ ಪಡೆದಿದೆ. ಜನರ ಮನದಲ್ಲಿ ಕಾಂಗ್ರೆಸ್ ಬಗ್ಗೆ ಇರುವ ಅಭಿಪ್ರಾಯ ಗಟ್ಟಿಗೊಳಿಸಬೇಕು. ಪಕ್ಷ ಮತ್ತೆ ಚೇತರಿಸಿಕೊಂಡು ಬರಲಿದ್ದು, ಕಾರ್ಯಕರ್ತರು ಎದೆಗುಂದಬಾರದು ಎಂದರು.

ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವರಾದ ವೀರಕುಮಾರ ಪಾಟೀಲ, ಎ.ಎಂ. ಹಿಂಡಸಗೇರಿ, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಶಾಂತವ್ವ ಗುಜ್ಜಳ, ವಿನೋದ ಅಸೂಟಿ, ದಾಕ್ಷಾಯಣಿ ಬಸವರಾಜ, ಪಾಲಿಕೆ ಮಾಜಿ ಸದಸ್ಯರು, ಬ್ಲಾಕ್, ಬೂತ್ ಅಧ್ಯಕ್ಷರು, ಕಾರ್ಯಕರ್ತರು, ಇತರರು ಇದ್ದರು.

ಈಗ ನಮ್ಮ ನೆನಪಾಯ್ತಾ…

ಸಭೆಯಲ್ಲಿ ಬಸವರಾಜ ರಾಯರೆಡ್ಡಿ ಅವರು ಮಾತನಾಡುವ ವೇಳೆ ಮಧ್ಯಪ್ರವೇಶಿಸಿದ ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ, ಎಲ್ಲ ನಾಯಕರು ಬಂದು ಭಾಷಣ ಮಾಡುತ್ತಾರೆ. ಆದರೆ, ಸರ್ಕಾರ ಅಧಿಕಾರದಲ್ಲಿ ಇದ್ದಾಗ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ನೀಡುವುದಿಲ್ಲ. ಸರಿಯಾದ ಸ್ಥಾನ ಮಾನ ನೀಡುವುದಿಲ್ಲ. ಸೋತಾಗ ಎಲ್ಲರೂ ನೆನಪಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಯರೆಡ್ಡಿ, ನಿಮ್ಮ ವಿಚಾರಗಳನ್ನು ಸಮಾಧಾನದಿಂದ ತಿಳಿಸಿ. ಎಲ್ಲವನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುವುದು ಎಂದು ಸಮಜಾಯಿಸಿ ನೀಡಿದರು.

ಪಕ್ಷ ಗಟ್ಟಿಯಾಗಿ ಉಳಿಯಲು ವಸ್ತು ಸ್ಥಿತಿ ಅರಿಯಬೇಕಿದೆ. ಸಾರ್ವಜನಿಕರ ಅಭಿಪ್ರಾಯವನ್ನು ಬ್ಲಾಕ್ ಅಧ್ಯಕ್ಷರು, ಬೂತ್ ಮಟ್ಟದ ಅಧ್ಯಕ್ಷರು ಪಡೆದು ನೀಡಿದರೆ ಇನ್ನೂ ಅನುಕೂಲವಾಗಿದೆ. ಪಕ್ಷದ ಎದುರು ದೊಡ್ಡ ಸವಾಲಿದೆ. ಅದನ್ನು ಎದುರಿಸುವ ಕೆಲಸ ಮಾಡಬೇಕಿದೆ.

| ಕೆ.ಆರ್. ಸುದರ್ಶನ, ಸಮಿತಿ ಸದಸ್ಯ

Leave a Reply

Your email address will not be published. Required fields are marked *