ಕೈ-ಕಮಲ ಪಕ್ಷಗಳಿಂದ ಸಭೆ ಮೇಲೆ ಸಭೆ

ರೋಣ: ರೋಣ ಪುರಸಭೆಯ 23 ವಾರ್ಡ್​ಗಳ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚು ಕಾಲಾವಕಾಶ ಇಲ್ಲದ್ದರಿಂದ ಕೈ ಮತ್ತು ಕಮಲ ಪಕ್ಷಗಳು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿವೆ.

ಪಕ್ಷದ ಚಿನ್ಹೆಗಳ ಅಡಿಯಲ್ಲಿಯೇ ಈ ಚುನಾವಣೆ ನಡೆಯುವುದರಿಂದ ರಾಜಕೀಯ ಪಕ್ಷಗಳಿಗೆ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಪುರಸಭೆಯಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಹಾತೊರೆಯುತ್ತಿದೆ. ಆದರೆ, ರಾಜ್ಯ ರಾಜಕಾರಣದಲ್ಲಿ ಏನೇ ಬದಲಾವಣೆಯಾದರೂ ಸ್ಥಳೀಯ ಪುರಸಭೆಯಲ್ಲಿ ಯಾವತ್ತಿಗೂ ಕಾಂಗ್ರೆಸ್ ತನ್ನ ಪ್ರಾಬಲ್ಯ ಕಳೆದುಕೊಂಡಿಲ್ಲ. ಹಾಗಾಗಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ಪುರಸಭೆಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಲು ಕೈ ಪಕ್ಷದ ಮುಖಂಡರು ಸಿದ್ಧ್ದೆ ನಡೆಸಿದ್ದಾರೆ.

ಪುರಸಭೆಯ ಹಾಲಿ ಸದಸ್ಯರು ಕಣಕ್ಕಿಳಿಯಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಬದಲಾದ ಮೀಸಲಾತಿಯಂತೆ ಸ್ಪರ್ಧಿಸಲು ಬೇರೆ, ಬೇರೆ ವಾರ್ಡ್​ಗಳ ಹುಡುಕಾಟದಲ್ಲಿದ್ದಾರೆ. ಹೊಸ ಮೀಸಲಾತಿಯಂತೆ ಹಾಲಿ ಮೂವರು ಸದಸ್ಯರಿಗೆ ಮಾತ್ರ ತಮ್ಮ ( 1, 4, 13) ವಾರ್ಡ್​ಗಳಲ್ಲಿಯೇ ಸ್ಪರ್ಧಿಸಲು ಅವಕಾಶ ದೊರೆತಿದೆ.

ಪಕ್ಷ ತ್ಯಜಿಸುವ ಎಚ್ಚರಿಕೆ

ಹತ್ತಾರು ವರ್ಷಗಳ ಕಾಲ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದು, ಈ ಬಾರಿ ಮೀಸಲಾತಿ ಅನ್ವಯ ಅವಕಾಶ ದೊರೆತಿದ್ದು ಪಕ್ಷದ ಟಿಕೆಟ್ ನೀಡದಿದ್ದರೆ ಪಕ್ಷ ತ್ಯಜಿಸುವುದಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಕೆಲ ಆಕಾಂಕ್ಷಿಗಳು ತಮ್ಮ ಹಿಂಬಾಲಕರ ಮೂಲಕ ಹೈಕಮಾಂಡ್​ಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸಮಿತಿಗಳಲ್ಲಿ ಪರಿಶೀಲನೆ

ಕಾಂಗ್ರೆಸ್ಸಿನಲ್ಲಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈಗಾಗಲೇ ಒಂದು ವಾರ್ಡ್​ಗೆ ಮೂರರಿಂದ ನಾಲ್ಕು ಅರ್ಜಿಗಳು ಬಂದಿವೆ. ಆಕಾಂಕ್ಷಿಗಳು ಪಕ್ಷಕ್ಕೆ ನೀಡಿದ ಕೊಡುಗೆ ಹಾಗೂ ಅವರು ಗೆಲ್ಲುವ ಸಾಮರ್ಥ್ಯದ ಬಗೆಗೆ ಪ್ರತಿ ವಾರ್ಡಿನಲ್ಲೂ ಜನರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕೆಪಿಸಿಸಿ ಸದಸ್ಯ ಐ.ಎಸ್. ಪಾಟೀಲ ತಿಳಿಸಿದ್ದಾರೆ.

ಬಿಜೆಪಿಯಲ್ಲಿಯೂ ಎಪಿಎಂಸಿ ಸದಸ್ಯ ರಾಜಣ್ಣ ಹೂಲಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿ ವಾರ್ಡ್​ಗೂ ಮೂವರು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಕೈ ಹಾಗೂ ಕಮಲ ಪಕ್ಷದ 23 ವಾರ್ಡ್​ಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಆಗಸ್ಟ್ 16ರೊಳಗೆ ಬಿಡುಗಡೆಯಾಗಲಿದೆ.  ಒಟ್ಟಾರೆಯಾಗಿ ಸದ್ಯ ಕಾಂಗ್ರೆಸ್ ಕೈಯಲ್ಲಿರುವ ರೋಣ ಪುರಸಭೆಯಲ್ಲಿ ಶತಾಯ-ಗತಾಯವಾಗಿ ಕಮಲ ಅರಳಿಸಲು ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ಪ್ರಮುಖರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *